ಎನ್​ಪಿಎಸ್ ಶೀಘ್ರ ರದ್ದು?

ಬೆಂಗಳೂರು: ನೂತನ ಪಿಂಚಣಿ ಯೋಜನೆ (ಎನ್​ಪಿಎಸ್) ರದ್ದು ಮಾಡಬೇಕೆಂಬ ನೌಕರರ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ಈ ಸಂಬಂಧ ಶೀಘ್ರ ಕಡತ ಮಂಡಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳಿಗೆ, ಸ್ವಾಯತ್ತ ಸಂಸ್ಥೆಗಳಿಗೆ, ಅನುದಾನಿತ ಸಂಸ್ಥೆಗಳಿಗೆ 2006ರಿಂದ ನೇಮಕವಾಗಿರುವ ಎನ್​ಪಿಎಸ್ ನೌಕರರು, ಈ ಪಿಂಚಣಿ ಯೋಜನೆ ರದ್ದು ಮಾಡಿ ಹಳೆಯ ಯೋಜನೆಯನ್ನೇ ಮುಂದುವರಿ ಸಬೇಕೆಂದು ಹೋರಾಟ ನಡೆಸಿದ್ದಾರೆ. ಇತ್ತೀಚೆಗಷ್ಟೇ ರಕ್ತದಾನದ ಮೂಲಕ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಮನವಿಯನ್ನೂ ಸಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಡತದಲ್ಲಿ ಮಂಡಿಸುವಂತೆ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಎನ್​ಪಿಎಸ್ ನೌಕರರ ಹೋರಾಟಕ್ಕೆ ಮೊದಲ ಹಂತದ ಗೆಲುವು ಸಿಕ್ಕಂತಾಗಿದೆ.

ಆರ್ಥಿಕ ಇಲಾಖೆಯಲ್ಲಿ ವೆಚ್ಚ ವಿಭಾಗದ ಕಾರ್ಯದರ್ಶಿಗಳು ಈ ಕಡತ ಸಿದ್ಧಪಡಿಸಬೇಕಾಗಿದೆ. ಇಲಾಖೆಯಲ್ಲಿ ವಿವಿಧ ಹಂತಗಳಲ್ಲಿ ಚರ್ಚೆಯಲ್ಲಿದೆ. ಅದಕ್ಕಾಗಿ ಇಲಾಖೆಯಲ್ಲಿಯೇ ಅಧಿಕಾರಿಗಳ ಸಭೆ ನಡೆಸಿ ಕಡತ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಉಪ ಚುನಾವಣೆ ಮುಗಿಯುವ ವೇಳೆಗೆ ಕಡತ ಮಂಡನೆಯಾಗುವ ಸಾಧ್ಯತೆ ಇದೆ.

ಆರ್ಥಿಕ ಇಲಾಖೆ ಒಪ್ಪಿಗೆ ಮುಖ್ಯ: ಪಿಂಚಣಿ ನಿರ್ಧರಿಸುವುದು ಹಣಕಾಸಿಗೆ ಸಂಬಂಧಿಸಿದ ವಿಚಾರ ಆಗಿರುವುದರಿಂದ ಆರ್ಥಿಕ ಇಲಾಖೆ ನೀಡುವ ಅಭಿಪ್ರಾಯ ಮುಖ್ಯವಾಗಿದೆ. ಆದ್ದರಿಂದಲೇ ಇಲಾಖೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ರ್ಚಚಿಸಲು ಅಧಿಕಾರಿಗಳು ಉದ್ದೇಶಿಸಿದ್ದಾರೆಂದು ಮೂಲಗಳು ಹೇಳಿವೆ.

ಸರ್ಕಾರಕ್ಕೆ ಹೊರೆಯೇ?

ಎನ್​ಪಿಎಸ್ ರದ್ದು ಮಾಡುವುದು ಬೊಕ್ಕಸಕ್ಕೆ ಹೊರೆ ಆಗುವುದೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಸರ್ಕಾರದಲ್ಲಿ ಕಾಡುತ್ತಿದೆ. ಈ ವಿಚಾರವಾಗಿ ಎರಡು ರೀತಿಯ ಅಭಿಪ್ರಾಯಗಳು ಆರ್ಥಿಕ ಇಲಾಖೆಯಲ್ಲಿವೆ.

1. ಹೊರೆ ಏಕೆ

ಎನ್​ಪಿಎಸ್ ನೌಕರರನ್ನು ಹಳೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಒಳಪಡಿಸಿದರೆ ಸರ್ಕಾರಕ್ಕೆ ಪಿಂಚಣಿಯ ಹೊರೆ ಬೀಳುತ್ತದೆ. ಈಗಾಗಲೇ ಕುಟುಂಬ ಪಿಂಚಣಿ ನೀಡಲಾಗುತ್ತಿದೆ. ಆದರೆ ಈ ವಾದವನ್ನು ಒಪ್ಪದವರೂ ಇದ್ದಾರೆ. ನೌಕರರಿಂದ ಕಡಿತ ಮಾಡಿರುವ 2528.03 ಕೋಟಿ ರೂ.ಗಳ ಜತೆಗೆ, ಸರ್ಕಾರ ಸಹ ಅಷ್ಟೇ ಪ್ರಮಾಣದ ಮೊತ್ತವನ್ನು ಪಿಎಫ್​ಗಾಗಿ ಪಾವತಿಸಿದೆ. ಅದಕ್ಕೆ ವರ್ಷಕ್ಕೆ ಸರಾಸರಿ 3 ಕೋಟಿ ರೂ. ತೆರಿಗೆಯನ್ನು ಪಾವತಿಸುತ್ತಿದೆ. ನೌಕರರ ನಿವೃತ್ತಿ ಆರಂಭವಾಗುವುದು 2037ರಿಂದ. ಈಗ ಇರುವ 5000 ಕೋಟಿ ರೂ.ಗಳನ್ನು ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಬಹುದು. ಹೊರೆಯೇನೂ ಆಗುವುದಿಲ್ಲ ಎಂಬ ಅಭಿಪ್ರಾಯ ನೌಕರರಲ್ಲಿದೆ. ಹಣಕಾಸು ಇಲಾಖೆಯ ಕೆಲ ಅಧಿಕಾರಿಗಳದೂ ಇದೇ ಅಭಿಪ್ರಾಯ.

ಖಾಸಗಿ ಸಂಸ್ಥೆ ನಿರ್ವಹಣೆ:

ಎನ್​ಪಿಎಸ್ ಅನ್ನು ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಖಾಸಗಿ ಸ್ವಾಮ್ಯದ ಬ್ಯಾಂಕ್ ಹಣಕಾಸಿನ ಉಸ್ತುವಾರಿ ನೋಡುತ್ತಿದೆ. ಯಾವ ಗ್ಯಾರಂಟಿಯೂ ಇಲ್ಲ, ಅದೇ ಹಣವನ್ನು ಸರ್ಕಾರ ಕೆಜಿಐಡಿಯಲ್ಲಿ ಹಾಕಿದರೆ ಗ್ಯಾರಂಟಿ ಇರುತ್ತದೆ ಎಂಬುದು ನೌಕರರ ಅಭಿಪ್ರಾಯ.

ಎಲ್ಲ ರಾಜ್ಯಗಳಲ್ಲೂ ಭರವಸೆ

ಚುನಾವಣೆ ನಡೆಯುತ್ತಿರುವ ತೆಲಂಗಾಣ ಸೇರಿ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಸಹ ತಮ್ಮ ಪ್ರಣಾಳಿಕೆಯಲ್ಲಿ ಎನ್​ಪಿಎಸ್ ರದ್ದು ಮಾಡುವ ಭರವಸೆ ನೀಡಿವೆ.

ಸಂಸತ್ ಚಲೋ

ಎನ್​ಪಿಎಸ್ ರದ್ದು ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಸಲುವಾಗಿ ವಿವಿಧ ರಾಜ್ಯಗಳ ಎನ್​ಪಿಎಸ್ ನೌಕರರು ನ.26ಕ್ಕೆ ದೆಹಲಿ ಚಲೋ ನಡೆಸಲಿದ್ದು, ರಾಜ್ಯದ 2000 ಜನ ಭಾಗವಹಿಸುತ್ತಿದ್ದಾರೆ.

ಸಮಿತಿ ಬೇಡ

ಮುಖ್ಯಮಂತ್ರಿ ಕುಮಾರಸ್ವಾಮಿ ಸಮಿತಿಯೊಂದನ್ನು ರಚಿಸುವ ಆಲೋಚನೆ ಮಾಡಿದ್ದರಾದರೂ ತಮಿಳುನಾಡಿನಲ್ಲಿ ಸಮಿತಿ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷವಾದರೂ ಯಾವುದೇ ನಿರ್ಧಾರ ಮಾಡಿಲ್ಲ. ಆದ್ದರಿಂದ ಸಮಿತಿ ಬೇಡ, ಸಭೆ ಮಾಡಿ ನಿರ್ಧಾರ ಮಾಡುವಂತೆ ಒತ್ತಡ ತರಲಾಗಿತ್ತು.

ಸಮಿತಿ ರಚಿಸಿ ಕೈ ತೊಳೆದುಕೊಳ್ಳುವುದು ಅಧಿಕಾರಿಗಳ ಉದ್ದೇಶ. ಉಪ ಚುನಾವಣೆಯ ನಂತರ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆರ್ಥಿಕ ಇಲಾಖೆ ಯಾವುದೇ ಅಭಿಪ್ರಾಯ ಕೊಟ್ಟರೂ ಮುಖ್ಯಮಂತ್ರಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ.

| ಶಾಂತಾರಾಮ, ಅಧ್ಯಕ್ಷ, ರಾಜ್ಯ ಎನ್​ಪಿಎಸ್ ನೌಕರರ ಸಂಘ

 

ಸಿಎಂ ನಿರ್ಧಾರ ಅಂತಿಮ

ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಎನ್​ಪಿಎಸ್ ರದ್ದು ಮಾಡುವ ಭರವಸೆ ನೀಡಿತ್ತು. ಆ ಕಾರಣದಿಂದಲೇ ಎನ್​ಪಿಎಸ್ ನೌಕರರು ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಈ ವಿಚಾರವನ್ನು ಕಡತದಲ್ಲಿ ಮಂಡಿಸುವಂತೆ ಸೂಚನೆ ನೀಡಿದ್ದಾರೆಂದು ಮೂಲಗಳು ಹೇಳುತ್ತವೆ. ಹಣಕಾಸು ಇಲಾಖೆಯಿಂದ ಯಾವುದೇ ಅಭಿಪ್ರಾಯಬಂದರೂ ಮುಖ್ಯಮಂತ್ರಿ ಕೈಗೊಳ್ಳುವ ನಿರ್ಧಾರ ಅಂತಿಮ.

ಎರಡು ಲಕ್ಷ ನೌಕರರು

ಎನ್​ಪಿಎಸ್ ಆರಂಭವಾದ 2006ರ ಏ.1 ರಿಂದ ಈವರೆಗೆ ವಿವಿಧ ಇಲಾಖೆಗಳಿಗೆ ನೇಮಕವಾಗಿರುವ 2,00,898 ನೌಕರರಿದ್ದಾರೆ. ಅಲ್ಲದೇ ಅರೆ ಸರ್ಕಾರಿ, ಸ್ವಾಯತ್ತ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳಿಗೆ ನೇಮಕವಾಗಿರುವ 1.50 ಲಕ್ಷ ನೌಕರರಿದ್ದಾರೆಂಬುದು ಸರ್ಕಾರದಿಂದಲೇ ಲಭ್ಯವಾಗಿರುವ ಮಾಹಿತಿ.

ಕೇಂದ್ರದತ್ತ ಚಿತ್ತ

ಎನ್​ಪಿಎಸ್ ರದ್ದು ಮಾಡಲು ಇಷ್ಟವಿಲ್ಲದ ಆರ್ಥಿಕ ಇಲಾಖೆಯ ಕೆಲ ಅಧಿಕಾರಿಗಳಷ್ಟೇ ಕೇಂದ್ರ ಸರ್ಕಾರವೇ ಈ ವಿಚಾರದಲ್ಲಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲಿ ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿ ಬಳಿ ವ್ಯಕ್ತಪಡಿಸಿದ್ದಾರೆ. ಆದರೆ ಮುಖ್ಯಮಂತ್ರಿ ಮಾತ್ರ ಕಡತದಲ್ಲಿ ಮಂಡಿಸಿ ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆಂದು ಮೂಲಗಳು ಖಚಿತಪಡಿಸಿವೆ.

One Reply to “ಎನ್​ಪಿಎಸ್ ಶೀಘ್ರ ರದ್ದು?”

  1. ಸರ್ಕಾರ ನಮ್ಮದೇ ಆದ್ದರಿಂದ ಅದು ಇಂತಹ ವಿಷಯಗಳಲ್ಲಿ ಸಾಧಕ ಬಾಧಕಗಳ ಬಗ್ಗೆ ಸಮಗ್ರ ಚಿಂತನೆ ಮಾಡದೇ ಯಾವುದೇ ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ. ನಿವೃತ್ತರಾಗುವ, ನಿವೃತ್ತರಾಗುವ ಸರ್ಕಾರಿ ಸಿಬ್ಬಂದಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ್ದು ಸರ್ಕಾರದ ಕರ್ತವ್ಯವೂ ಆಗಿರುತ್ತದೆ. ಆತುರದ ನಿರ್ಧಾರದಿಂದ ಅನಾನುಕೂಲವೇ ಹೆಚ್ಚು.

Comments are closed.