ಮಾಸಾಂತ್ಯಕ್ಕೆ ಸರ್ಕಾರಿ ನೌಕರರ ಕ್ರೀಡಾಕೂಟ

ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಡಿಸೆಂಬರ್​ನಲ್ಲಿ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಹೇಳಿದರು.

ಕ್ರೀಡಾಕೂಟ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಕೆಲಸ-ಕಾರ್ಯಗಳ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ನೌಕರರು ಹಾಗೂ ಕಚೇರಿ ಸಿಬ್ಬಂದಿ ಆಟೋಟಗಳಲ್ಲಿ ಭಾಗವಹಿಸಿ, ಮನಸಂತೋಷ ಕಂಡುಕೊಳ್ಳುವ ಉದ್ದೇಶದಿಂದ ಕ್ರೀಡಾಕೂಟ ನಡೆಸಲಾಗುತ್ತಿದೆ. ಅಲ್ಲದೆ ನೌಕರರಲ್ಲಿನ ಸುಪ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆ ದೊರೆಯಲಿದೆ ಎಂದರು.

ಎಲ್ಲ ಕ್ರೀಡೆಗಳು ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತ ನೌಕರರೆಲ್ಲರಿಗೂ ಅವಕಾಶ ದೊರೆಯಲಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ 3,000ಕ್ಕೂ ಅಧಿಕ ಸ್ಪರ್ಧಾಳುಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಆಟೋಟ, ಊಟೋಪಾಹಾರ, ವೇದಿಕೆ ನಿರ್ವಹಣೆ, ಮೇಲುಸ್ತುವಾರಿ, ಸ್ವಾಗತ ಸಮಿತಿ ಮುಂತಾದವುಗಳಿಗಾಗಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳನ್ನೊಳಗೊಂಡ ಹಲವು ಸಮಿತಿ ರಚಿಸಲಾಗಿದೆ ಎಂದರು.

ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಗರದ ಕುವೆಂಪು ರಂಗಮಂದಿರ, ಬಿ.ಆರ್.ಅಂಬೇಡ್ಕರ್ ಭವನ, ನೌಕರರ ಸಂಘ, ನೆಹರು ಕ್ರೀಡಾಂಗಣ, ಎನ್​ಇಎಸ್ ಮೈದಾನ ಸೇರಿ ಹಲವು ಸಮನಾಂತರ ವೇದಿಕೆ-ಮೈದಾನಗಳಲ್ಲಿ ನಡೆಯಲಿವೆ. ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ತೀರ್ಪಗಾರರಾಗಿ ತಜ್ಞರನ್ನು ನಿಯೋಜಿಸಲಾಗುವುದು ಎಂದರು.

ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮಗಳಂದು ಪ್ರತಿದಿನ ಸಂಜೆ ನಾಡಿನ ಹಿರಿಯ ಕಲಾವಿದರನ್ನು ಆಹ್ವಾನಿಸಿ ರಸಸಂಜೆ ಹಾಗೂ ಮನೕರಂಜನೆ ಕಾರ್ಯಕ್ರಮ ಏರ್ಪಡಿಸಲಾಗುವುದು. ಕ್ರೀಡಾಕೂಟದ ಮೊದಲ ದಿನ ಸಂಜೆ ಕಲಾವಿದೆ ಜಯಶ್ರೀ ಅವರಿಂದ ರಂಗಗೀತೆ, ಜನಪದ ಗೀತೆಗಳ ರಸದೌತಣ ಏರ್ಪಡಿಸಲಾಗಿದೆ ಎಂದರು.

ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಪಂ ಮುಖ್ಯಯೋಜನಾಧಿಕಾರಿ ಉಮಾ ಸದಾಶಿವ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ್, ನೌಕರರ ಸಂಘದ ಗೌರವಾಧ್ಯಕ್ಷ ರಮೇಶ್, ಕೋಶಾಧ್ಯಕ್ಷ ಐ.ಪಿ.ಶಾಂತರಾಜ್, ರಾಜ್ಯ ಪರಿಷತ್ ಸದಸ್ಯ ರಘು, ಡಾ. ಹಿರೇಮಠ್, ಜಿ.ಕೆ.ಅಶೋಕಕುಮಾರ್, ತಾರಾ ಇದ್ದರು.