ನಿವೃತ್ತ ಪೊಲೀಸರಿಗೆ ನೆಮ್ಮದಿ ಮುಖ್ಯ

ಚಿಕ್ಕಮಗಳೂರು: ಪೊಲೀಸ್ ಅಧಿಕಾರಿಗಳಿಗೆ ನಿವೃತ್ತಿ ನಂತರ ನೆಮ್ಮದಿ ವಾತಾವರಣ ಬೇಕಾಗುತ್ತದೆ ಎಂದು ನಗರ ಡಿವೈಎಸ್ಪಿ ಚಂದ್ರಶೇಖರ್ ಹೇಳಿದರು.

ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಪೊಲೀಸ್ ಅಧಿಕಾರಿಗಳು ಅಪರಾಧ ಮಾಡುವ ಜನರೊಟ್ಟಿಗೆ ಹೆಚ್ಚಾಗಿ ಕೆಲಸ ಮಾಡಬೇಕಾಗಿರುತ್ತದೆ. ಹೀಗಾಗಿ ಅಲ್ಲಿ ನೆಮ್ಮದಿ ಸಿಗುವುದು ವಿರಳ. ನಿವೃತ್ತಿ ಸಂದರ್ಭದಲ್ಲಾದರೂ ಕುಟುಂಬ ಹಾಗೂ ಸಮಾಜದೊಂದಿಗೆ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.

ಇತರೆ ಇಲಾಖೆಗೆ ಹೋಲಿಸಿದರೆ ಪೊಲೀಸ್ ಇಲಾಖೆಗೆ ಸರ್ಕಾರ ಉತ್ತಮ ಸೌಲಭ್ಯ ನೀಡಿದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು. ಪರಸ್ಪರ ಭಿನ್ನಾಭಿಪ್ರಾಯ ಸಂಘ ಚಟುವಟಿಕೆಯಲ್ಲಿ ಬುರುವುದು ಸಹಜ. ಇದನ್ನು ಬದಿಗೊತ್ತಿ ಎಲ್ಲರೂ ಒಟ್ಟಾಗಿ ಸಂಘ ಸಬಲಗೊಳಿಸಬೇಕು ಎಂದರು.

ಎಸಿಬಿ ಡಿವೈಎಸ್ಪಿ ನಾಗೇಶ್ ಶೆಟ್ಟಿ ಮಾತನಾಡಿ, ಸರ್ಕಾರ ನಿವೃತ್ತ ಪೊಲೀಸರಿಗೂ ಆರೋಗ್ಯ ಕಾರ್ಡ್ ವಿತರಣೆ ಮಾಡಿದೆ. ಸಂಘದಲ್ಲಿ ನೋಂದಣಿಯಾಗುವ ಮೂಲಕ ಎಲ್ಲ ಪೊಲೀಸ್ ಅಧಿಕಾರಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ನಿವೃತ್ತಿ ನಂತರವೂ ನಿಯಮಿತ ವ್ಯಾಯಾಮ, ಕಟ್ಟುನಿಟ್ಟಿನ ಆಹಾರ ಸೇವನೆ ಮೂಲಕ ಆರೋಗ್ಯ ಸರಿಯಾಗಿಟ್ಟುಕೊಳ್ಳಬೇಕು. ಮನುಷ್ಯ ಮತ್ತೊಬ್ಬರಿಗೆ ಹೊರೆಯಾಗದಂತೆ ಜೀವನ ನಡೆಸಬೇಕು ಎಂದು ಹೇಳಿದರು.