ಸರ್ಕಾರದ ಹಗಲು ದರೋಡೆ ಮತ್ತೆ ಸಾಬೀತು

 ಶಿವಮೊಗ್ಗ: ರಾಜ್ಯ ಸರ್ಕಾರ ಹಗಲು ದರೋಡೆಗೆ ನಿಂತಿರುವುದಕ್ಕೆ ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗ ಶೆಟ್ಟಿ ಪ್ರಕರಣವೇ ಸಾಕ್ಷಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಅಧಿಕಾರಿಗಳು, ಮಂತ್ರಿಗಳು ಹಗಲು ದರೋಡೆ ಮಾಡುತ್ತಿದ್ದಾರೆ. ಸಚಿವ ಪುಟ್ಟರಂಗ ಶೆಟ್ಟಿ ಅವರ ಆಪ್ತ ಸಹಾಯಕ ಮೋಹನ್ ಬಳಿ ಸಚಿವರ ಹೆಸರು ಬರೆದಿರುವ 25 ಲಕ್ಷ ರೂ.ಗಳನ್ನೊಳಗೊಂಡ ಕವರ್ ಸಿಕ್ಕಿದೆ. ಹೀಗಾಗಿ ಸಚಿವ ಪುಟ್ಟರಂಗ ಶೆಟ್ಟಿ ಕೂಡಲೆ ರಾಜೀನಾಮೆ ಕೊಡಬೇಕು ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ್ದು 10 ಪರ್ಸೆಂಟ್ ಸರ್ಕಾರ ಎಂದು ಹೇಳಿದ್ದರು. ಆದರೆ ಇದು 20 ಪರ್ಸೆಂಟ್ ಸರ್ಕಾರ ಎಂಬುದು ಸಾಬೀತಾಗಿದೆ. ಈ ಸರ್ಕಾರ ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಪದೇಪದೆ ವೇದಾಂತ, ಉಪನಿಷತ್ ಮಾತನಾಡುತ್ತಾರೆ. ಆದರೆ ಅವರ ಬುಡದಲ್ಲೇ ಇಂತಹ ಘಟನೆಗಳು ನಡೆದಿವೆ. ಆದ್ದರಿಂದ 24 ಗಂಟೆಯೊಳಗೆ ಸಚಿವ ಸ್ಥಾನದಿಂದ ಪುಟ್ಟರಂಗ ಶೆಟ್ಟಿ ಅವರನ್ನು ಕೈಬಿಡಬೇಕು. ಇಲ್ಲವಾದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.

ಈ ಪ್ರಕರಣದಲ್ಲಿ ಸಚಿವರ ಆಪ್ತ ಸಹಾಯಕನಿಗೂ ಶಿಕ್ಷೆಯಾಗಬೇಕು. ಸರ್ಕಾರ ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಸರ್ಕಾರ ಮಾಡಿದರೆ ಜನ ಕ್ಷಮಿಸುವುದಿಲ್ಲ ಎಂದರು.