ರಾಜ್ಯದಲ್ಲಿ ಇದ್ದೂ ಇಲ್ಲದ ಸರ್ಕಾರ

ಮುಧೋಳ: ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎನ್ನುವ ಸ್ಥಿತಿ ಇದೆ. ಬಾಗಲಕೋಟೆ-ವಿಜಯಪುರ ಸೇರಿ ರಾಜ್ಯದ 13 ಜಿಲ್ಲೆಗಳು ಭೀಕರ ಬರಕ್ಕೆ ತುತ್ತಾಗಿದ್ದರೂ ಈ ಭಾಗಕ್ಕೆ ಮುಖ್ಯಮಂತ್ರಿ ಭೇಟಿ ನೀಡಲು ಸಿದ್ಧರಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದೇವಸ್ಥಾನಗಳಿಗೆ ಹೋಗುವುದಕ್ಕೆ ನನ್ನ ವಿರೋಧವಿಲ್ಲ. ಆದರೆ, ಅವರು ಜನರ ಬಳಿ ಹೋಗಿ ಸಮಸ್ಯೆ ಆಲಿಸುವುದಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು ನಿರಾಣಿ ಅವರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ನಿರಾಣಿ ಕಾರ್ಯಕ್ಕೆ ಶ್ಲಾಘನೆ: ಶಾಸಕ ಮುರುಗೇಶ ನಿರಾಣಿ ಉದ್ಯಮಿಗಳನ್ನು ಬೆಳೆಸಿ ದುಡಿಯುವ ಕೈಗಳಿಗೆ ಕೆಲಸ ಕೊಡುತ್ತಿರುವುದು ಅಭಿಮಾನದ ಸಂಗತಿ. ಅವರು ರಾಜಕೀಯದಲ್ಲಿಯೂ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಉದ್ಯಮ ಕ್ಷೇತ್ರ ಇನ್ನಷ್ಟು ಬೆಳೆಯಲಿ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಿರಾಣಿ ಅವರಿಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯ ದೊರೆಯಲಿ ಎಂದು ನಿರಾಣಿ ಉದ್ಯಮ ಸಮೂಹದ ಎಂಆರ್​ಎನ್ ಬಜಾರ್ ಕಟ್ಟಡ ಉದ್ಘಾಟಿಸಿ ಬಿ.ಎಸ್. ಯಡಿಯೂರಪ್ಪ ಶುಭ ಹಾರೈಸಿದರು.

ಶರಣ ಈಶ್ವರ ಮಂಟೂರ, ಡಾ.ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಗೋವಿಂದ ಕಾರಜೋಳ, ಸಿದ್ದು ಸವದಿ, ಮುರುಗೇಶ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಇದ್ದರು. ಕಾರ್ಖಾನೆ ಕಾರ್ಯ ನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಹೆಗ್ಗಳಗಿ ವಂದಿಸಿದರು.