ಕಡಿತಗೊಳಿಸಿದ ಬಜೆಟ್​ಗೆ ಸರ್ಕಾರದ ಅನುಮೋದನೆ

ಬೆಂಗಳೂರು: ಬಿಬಿಎಂಪಿ ಬಜೆಟ್​ಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ. 11,649 ಕೋಟಿ ರೂ. ಮೊತ್ತದ ಆಯವ್ಯಯಕ್ಕೆ ಒಪ್ಪಿಗೆ ನೀಡಲಾಗಿದೆ.

ಮುಂದಿನ ವರ್ಷ ಬರಲಿರುವ ಬಿಬಿಎಂಪಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಾಲಿಕೆ ಆಡಳಿತ 2019-20ನೇ ಸಾಲಿಗೆ 12,958 ಕೋಟಿ ರೂ. ಮೊತ್ತದ ಭಾರಿ ಗಾತ್ರದ ಬಜೆಟ್ ಮಂಡಿಸಿತ್ತು. ಬಿಬಿಎಂಪಿ ಆರ್ಥಿಕ ಪರಿಸ್ಥಿತಿ ಮತ್ತು ಬಜೆಟ್ ಗಾತ್ರ ಹೊಂದಾಣಿಕೆಯಾಗುತ್ತಿಲ್ಲ ಎಂದು ವಿರೋಧ ವ್ಯಕ್ತವಾಗಿತ್ತು. ಅದರ ಜತೆಗೆ ಬಿಬಿಎಂಪಿ ಆಯುಕ್ತರು ಕೂಡ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಬಜೆಟ್ ಗಾತ್ರವನ್ನು 9 ಸಾವಿರ ಕೋಟಿ ರೂ.ಗಳಿಗೆ ಇಳಿಸಿ ಅನುಮೋದನೆ ನೀಡುವಂತೆಯೂ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಅದರ ನಡುವೆಯೂ ನಗರಾಭಿವೃದ್ಧಿ ಇಲಾಖೆ 12,958 ಕೋಟಿ ರೂ.ಗಳಲ್ಲಿ ಕೇವಲ 1,308.89 ಕೋಟಿ ರೂ. ಕಡಿತಗೊಳಿಸಿ 11,648.90 ಕೋಟಿ ರೂ.ಗೆ ಅನುಮೋದನೆ ನೀಡಿದೆ.

ನಗರಾಭಿವೃದ್ಧಿ ಇಲಾಖೆ ತಿಳಿಸಿರುವಂತೆ 2018-19ನೇ ಸಾಲಿನಲ್ಲಿ 10,129.48 ಕೋಟಿ ರೂ. ಮೊತ್ತದ ಆಯವ್ಯಯಕ್ಕೆ ಅನುಮೋದನೆ ನೀಡಲಾಗಿತ್ತು. ಆ ಮೊತ್ತಕ್ಕೆ ಹೋಲಿಸಿದರೆ ಈಗ ಶೇ.15 ಹೆಚ್ಚಿಸಲಾಗಿದೆ.

ಆಯುಕ್ತರು ವಿರೋಧಿಸಿದ್ದರು: ಬಿಬಿಎಂಪಿ ಕೌನ್ಸಿಲ್​ನಲ್ಲಿ ಬಜೆಟ್​ಗೆ ಅನುಮೋದನೆ ನೀಡಿದ ನಂತರ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದರು. ಆ ವೇಳೆ ಸುದೀರ್ಘ ಪತ್ರ ಬರೆದಿದ್ದ ಆಯುಕ್ತರು, 12,958 ಕೋಟಿ ರೂ. ಮೊತ್ತದ ಬಜೆಟ್​ಗೆ ವಿರೋಧಿಸಿ, ಅದರ ಗಾತ್ರವನ್ನು 9 ಸಾವಿರ ಕೋಟಿ ರೂ.ಗೆ ಇಳಿಸಬೇಕು ಎಂದು ಮನವಿ ಮಾಡಿದ್ದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳ ಬಾಕಿ ಬಿಲ್​ಗಳ ಮೊತ್ತ 2,954.83 ಕೋಟಿ ರೂ.ಗಳಷ್ಟಿದೆ. ಜತೆಗೆ 4,167 ಕೋಟಿ ರೂ.ಗಳ ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ಕಾರ್ಯಾದೇಶ ಪಡೆದು ಪ್ರಾರಂಭವಾಗಬೇಕಿರುವ ಕಾಮಗಾರಿಗಳ ಮೊತ್ತು 728.10 ಕೋಟಿ ರೂ.ಗಳಾಗಿದ್ದು, ಕಾಮಗಾರಿ ಸಂಖ್ಯೆ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳ ಮೊತ್ತ 1,996 ರೂ.ಗಳಷ್ಟಿದೆ. ಕಾಮಗಾರಿ ಸಂಖ್ಯೆ ನೀಡಲಾಗಿರುವ, ಟೆಂಡರ್ ಕರೆಯಬೇಕಾಗಿರುವ ಕಾಮಗಾರಿಗಳ ಮೊತ್ತ 1,801.28 ಕೋಟಿ ರೂ. ಹಾಗೂ ಆಡಳಿತಾತ್ಮಕ ಅನುಮೋದನೆಗೊಂಡು ಕಾಮಗಾರಿ ಸಂಖ್ಯೆ ನೀಡಬೇಕಾಗಿರುವ ಮೊತ್ತ 1193.66 ಕೋಟಿ ರೂ. ಸೇರಿ ಒಟ್ಟು 12,841 ಕೋಟಿ ರೂ.ಗಳ ಕಾಮಗಾರಿ ಮೊತ್ತ ಪಾವತಿಸಬೇಕಿದೆ. ಇದಲ್ಲದೇ ಎಸ್​ಬಿಐ ಬ್ಯಾಂಕ್​ನ ಸಾಲದ ಮೊತ್ತದ ಹೊರೆಯುವ ಜನವರಿವರೆಗೆ 652.43 ಕೋಟಿ ರೂ.ಗಳಿದ್ದು, ಕೆಯುಐಡಿಎಫ್ ಸಂಸ್ಥೆಯ ಸಾಲದ ಮೊತ್ತ ಜನವರಿ ವೇಳೆಗೆ 50.91 ಕೋಟಿ ರೂ.ಗಳಷ್ಟಿದೆ. ಒಟ್ಟು 703.34 ಕೋಟಿ ರೂ. ಸಾಲ ಪಾವತಿಸಬೇಕಿದೆ. ವೇತನ ಮತ್ತು ಪಿಂಚಣಿ, ಆಡಳಿತಾತ್ಮಕ ವೆಚ್ಚಗಳು, ಹಣಕಾಸು ವೆಚ್ಚಗಳು ಸೇರಿ ಇನ್ನಿತರ ಖರ್ಚುಗಳೂ ಇವೆ ಎಂದು ವಿವರಿಸಿದ್ದರು.

ಪೂರಕ ಬಜೆಟ್ ಸಿದ್ಧಪಡಿಸಲು ಸೂಚನೆ

ಸದ್ಯ 11,648.90 ಕೋಟಿ ರೂ. ಮೊತ್ತದ ಬಜೆಟ್​ಗೆ ಅನುಮೋದನೆ ನೀಡಲಾಗಿದ್ದರೂ, ಕಡಿತಗೊಳಿಸಲಾಗಿರುವ 1,308.89 ಕೋಟಿ ರೂ. ಮೊತ್ತಕ್ಕೆ ಪೂರಕ ಆಯವ್ಯಯ ಸಿದ್ಧಪಡಿಸುವಂತೆಯೂ ತಿಳಿಸಲಾಗಿದೆ. ಪೂರಕ ಬಜೆಟ್ ಸಿದ್ಧಪಡಿಸಿ ಮತ್ತೊಮ್ಮೆ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಬೇಕಿದೆ.

ಆದಾಯ ಬರದಿದ್ದರೆ ಬಜೆಟ್ ವ್ಯರ್ಥ

2018-19ನೇ ಸಾಲಿನಲ್ಲಿ ಬಿಬಿಎಂಪಿ ಸ್ವಂತ ಮೂಲಗಳಿಂದ 3,766.64 ಕೋಟಿ ರೂ. ಆದಾಯ ನಿರೀಕ್ಷಿಸಿತ್ತು. ಆದರೆ, ಗಳಿಸಿದ್ದು 2,419 ಕೋಟಿ ರೂ. ಮಾತ್ರ. 2019-20ನೇ ಸಾಲಿನಲ್ಲಿ 9,351.68 ಕೋಟಿ ರೂ. ಆದಾಯ ಬರಲಿದೆ ಎಂದು ಉಲ್ಲೇಖಿಸಲಾಗಿದೆ. ಜತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ 3,606 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ. ಆದರೆ, ನಿರೀಕ್ಷಿಸಿದಷ್ಟು ಆದಾಯ ಸಂಗ್ರಹವಾಗದಿದ್ದರೆ ಬಜೆಟ್ ಅನುಷ್ಠಾನ ಶೇ. 50 ದಾಟುವುದಿಲ್ಲ ಎನ್ನಲಾಗುತ್ತಿದೆ.

ರಾಜ್ಯ ಸರ್ಕಾರ ಬಿಬಿಎಂಪಿ ಮುಂಗಡಪತ್ರಕ್ಕೆ ಅನುಮೋದನೆ ನೀಡಿದೆ. ಆದರೆ, ಕೌನ್ಸಿಲ್ ಅನುಮೋದನೆ ನೀಡಿರುವಷ್ಟು ಮೊತ್ತದ ಬಜೆಟ್​ಗೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿಲ್ಲ

| ಗಂಗಾಂಬಿಕೆ, ಮಲ್ಲಿಕಾರ್ಜುನ್ ಮೇಯರ್

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಸರ್ಕಾರ ಬೀಳಲಿದೆ ಎಂಬ ಭಯವಿದೆ. ಹೀಗಾಗಿ ನೀತಿಸಂಹಿತೆ ಜಾರಿಯಲ್ಲಿದ್ದರೂ ಬಜೆಟ್​ಗೆ ಅನುಮೋದನೆ ನೀಡಲಾಗಿದೆ. ಅವಾಸ್ತವಿಕ ಬಜೆಟ್​ಗೆ ಸರ್ಕಾರ ಒಪ್ಪಿಗೆ ನೀಡಿರುವುದು ಹಾಸ್ಯಾಸ್ಪದ.

| ಪದ್ಮನಾಭರೆಡ್ಡಿ, ಬಿಬಿಎಂಪಿ ವಿರೋಧ ಪಕ್ಷದ ನಾಯಕ

Leave a Reply

Your email address will not be published. Required fields are marked *