7 ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಚಿಕ್ಕಮಗಳೂರು: ಜಿಲ್ಲೆಯ 7 ತಾಲೂಕುಗಳ ತಲಾ ಒಂದು ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಲಿವೆ. ಈಗಾಗಲೆ ಗ್ರಾಪಂಗಳ ಹೆಸರುಗಳನ್ನು ಜಿಪಂ ಶಿಫಾರಸು ಮಾಡಿದ್ದು, ಸರ್ಕಾರದಿಂದ ಘೊಷಣೆಯಷ್ಟೇ ಬಾಕಿ ಉಳಿದಿದೆ.

ಚಿಕ್ಕಮಗಳೂರಿನ ಹಿರೇಕೊಳಲೆ (117 ಅಂಕ), ಕಡೂರಿನ ನಿಡುವಳ್ಳಿ(90), ಕೊಪ್ಪದ ಹಿರೇಕೊಡಿಗೆ(133), ಮೂಡಿಗೆರೆಯ ಚಿನ್ನಿಗ(106), ಎನ್.ಆರ್.ಪುರದ ನಾಗಲಾಪುರ(129), ಶೃಂಗೇರಿಯ ಬೇಗಾರು (120)ಮತ್ತು ತರೀಕೆರೆಯ ನಾರಾಣಾಪುರ ಆಯ್ಕೆಯಾಗಿವೆ. ಅ.2ರಂದು ಪ್ರಶಸ್ತಿ ಪತ್ರ ಮತ್ತು 5 ಲಕ್ಷ ರೂ. ಪ್ರೋತ್ಸಾಹಧನ ಗ್ರಾಪಂಗಳಿಗೆ ನೀಡಲಾಗುವುದು.

ರಾಜ್ಯದ 2013-14ರ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ ಕೆಲ ಆರ್ಥಿಕ ಮತ್ತು ಆಡಳಿತದ ಮಾನದಂಡದ ಆಧಾರದ ಮೇಲೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿಗೊಂದು ಗ್ರಾಪಂ ಆರಿಸಲು ನಿರ್ಧರಿಸಿದ್ದರೆ, ಇದಕ್ಕೆ ಪೂರಕವಾಗಿ ಜಿಪಂ ಸಿಇಒ ಸಿ.ಸತ್ಯಭಾಮಾ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆ ಶಿಫಾರಸು ಮಾಡಿದೆ.

ಈ ಗ್ರಾಪಂಗಳಿಗೆ ಶುದ್ಧ ನೀರಿನ ಘಟಕ ಸ್ಥಾಪನೆ, ಸರ್ಕಾರಿ ಶಾಲೆಗಳ ಆಟದ ಮೈದಾನ ನಿರ್ವಣ, ಫೆಡ್ಲೈಟ್ ಅಳವಡಿಕೆ, ಗ್ರಾಪಂ ನಡಾವಳಿಗಳ ನೇರ ಪ್ರಸಾರ ವ್ಯವಸ್ಥೆ, ಸೋಲಾರ್ ಬೀದಿದೀಪ, ಗ್ರಾಮೀಣ ಗೌರವ ಯೋಜನೆ, ಸಮುದಾಯ ಶೌಚಗೃಹ, ಕಸ ಸಂಸ್ಕರಣಾ ಘಟಕ ಸ್ಥಾಪನೆ, ಕಸ ವಿಲೇವಾರಿ ವಾಹನ ಖರೀದಿ, ಎಲ್​ಇಡಿ ಬೀದಿದೀಪ ಅಳವಡಿಸಬೇಕೆಂಬ ಸರ್ಕಾರದ ಮಾರ್ಗಸೂಚಿ ಪ್ರಕಾರ ಅದನ್ನು ಅನುಸರಿಸಬೇಕಿದೆ.

ಈ ಗ್ರಾಪಂಗಳನ್ನು ಆರಿಸುವಾಗ 2016-17ನೇ ಸಾಲಿನ ಸಾಧನೆಗಳನ್ನು ಪರಿಗಣಿಸಲು ಒಟ್ಟು 34 ಮಾನದಂಡಗಳನ್ನು ಪೂರೈಸಿರಬೇಕೆಂದು ಸರ್ಕಾರ ನಿಗದಿಪಡಿಸಿದೆ. ವೈಯಕ್ತಿಕ ಶೌಚಗೃಹ ನಿರ್ವಣ, ನರೇಗಾ ಅಡಿ ಸೃಷ್ಟಿಸಿರುವ ಮಾನವ ದಿನಗಳು ಹಾಗೂ ಅನುದಾನ ವಿನಿಯೋಗ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮಾಡಿರುವುದು ಪರಿಗಣನೆಯಾಗಿದೆ.

ಗ್ರಾಮೀಣ ಜನತೆಗೆ ನೀಡಿರುವ ಮೂಲ ಸೌಕರ್ಯ, ವಸತಿ ಯೋಜನೆ ಅನುಷ್ಠಾನ, ನೈರ್ಮಲೀಕರಣ, 14ನೇ ಹಣಕಾಸು ಯೋಜನೆಯ ಅನುದಾನ ವಿನಿಯೋಗ, ಪಂಚತಂತ್ರ ತಂತ್ರಾಂಶದಲ್ಲಿ ಗ್ರಾಪಂ ಮಾಸಿಕ ಸಭೆ ನಡಾವಳಿ ಅಳವಡಿಕೆ ಸಹ ಗಣನೆಯಾಗಲಿದೆ.

ಬ್ಯಾಂಕ್ ಲೆಕ್ಕ ಮರು ಹೊಂದಾಣಿಕೆ, ಸ್ವಂತ ಸಂಪನ್ಮೂಲ ಸಂಗ್ರಹಣೆ, ಗ್ರಾಪಂ ಆಸ್ತಿ ವಿವರ ದಾಖಲಿಸಿರುವುದು, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿರಿಸಿದ ಶೇ.25 ಅನುದಾನ ಬಳಕೆ, ಸ್ವಂತ ಅನುದಾನದಲ್ಲಿ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಸಿರುವ ಶೇ.3ರ ಅನುದಾನ ಬಳಕೆ ಪರಿಗಣನೆಯಾಗಿದೆ.

ಸಿಬ್ಬಂದಿ ಹಾಜರಾತಿಗೆ ಅಳವಡಿಸಿರುವ ಬಯೋಮೆಟ್ರಿಕ್ ಕಡ್ಡಾಯ ನಿರ್ವಹಣೆ, ಸಾರ್ವಜನಿಕರಿಗೆ ನೀಡುವ ಸೇವೆಗಳ ಪಾರದರ್ಶಕತೆ ಇವೆಲ್ಲವೂ ಸೇರಿವೆ. ಪ್ರತಿಯೊಂದಕ್ಕೂ ಅಂಕಗಳನ್ನು ನಿಗದಿ ಮಾಡಿದ್ದು, ಆ ಗ್ರಾಪಂಗಳು ಮಾಡಿರುವ ಆರ್ಥಿಕ ಹಾಗೂ ಆಡಳಿತದ ಮಾನದಂಡಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗಿದೆ.