ಯಳಂದೂರು : ಗೌರಿ ಗಣೇಶಹಬ್ಬದ ನಿಮಿತ್ತ ಶುಕ್ರವಾರ ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆ, ಸೊಸೈಟಿ ಬೀದಿ, ದೊಡ್ಡಅಂಗಡಿ ಬೀದಿಯಲ್ಲೂ ಸಂತೆ ಕಟ್ಟಿದ್ದು ವಿಶೇಷವಾಗಿತ್ತು. ಖರೀದಿದಾರರು ಮುಗಿಬಿದ್ದು ಹಬ್ಬದ ಖರೀದಿಯಲ್ಲಿ ತೊಡಗಿದ್ದರು.
ತರಕಾರಿ, ಹಣ್ಣು, ಕಾಯಿ, ಬಾಳೆ ಎಲೆ, ಮಾವಿನಸೊಪ್ಪು ಸೇರಿದಂತೆ ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿತ್ತು. ಹೂವಿನ ಬೆಳೆ ಹೆಚ್ಚಿದ್ದರೂ ಬೇಡಿಕೆ ಅಪಾರವಾಗಿದ್ದರಿಂದ ಹೂವು ಹಾಗೂ ಹಾರಗಳ ಖರೀದಿಯ ಭರಾಟೆಯೂ ಹೆಚ್ಚಾಗಿತ್ತು. ಆದರೆ ಪಟ್ಟಣದಲ್ಲಿ ಎಲ್ಲಿಯೂ ಕೂಡ ಪರಿಸರ ಸ್ನೇಹಿ ಗಣೇಶನ ಮಣ್ಣಿನ ಮೂರ್ತಿಗಳು ಕಾಣಸಿಗಲಿಲ್ಲ. ಎಲ್ಲಾ ಬಣ್ಣದ ಪಿಒಪಿ ಗಣೇಶನ ಮೂರ್ತಿಗಳೇ ಕಾಣುತ್ತಿದ್ದವು.
ಸಂಚಾರ ದಟ್ಟಣೆ: ಸಂತೆ ಹಳೇ ಅಂಚೆ ಕಚೇರಿಯ ರಸ್ತೆಯಲ್ಲಿ ಇದ್ದರಿಂದ ಈ ರಸ್ತೆ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ಬಂದ್ ಆಗಿತ್ತು. ಹಾಗಾಗಿ ದೊಡ್ಡ ಅಂಗಡಿ ಬೀದಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಇದೇ ರಸ್ತೆಯಲ್ಲಿ ಬಳೇಪೇಟೆ, ಬಿಳಿಗಿರಿರಂಗನಬೆಟ್ಟ, ಕಾಗಲವಾಡಿ ಮಾರ್ಗವಾಗಿ ಚಾಮರಾಜನಗರಕ್ಕೆ ತೆರಳುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಕುದುರಿದ ಮಡಕೆ ವ್ಯಾಪಾರ; ಗೌರಿ ಹಬ್ಬಕ್ಕೆ ಹೊಸ ಮಡಕೆಗಳನ್ನು ಖರೀದಿಸಿ ಇದರಲ್ಲಿ ಅಡುಗೆ ತಯಾರಿಸಿ ಉಣಬಡಿಸುವ ಸಂಪ್ರದಾಯ ಇನ್ನೂ ಜೀವಂತವಾಗಿದೆ. ಇದರ ನಿಮಿತ್ತ ಸಂತೆಯ ಒಂದು ಬದಿಯಲ್ಲಿ ಮಣ್ಣಿನ ಮಡಕೆ ಹಾಗೂ ಒಲೆಗಳ ಮಾರಾಟವೂ ಜೋರಾಗಿತ್ತು. ಮಡಕೆ ಖರೀದಿ ಮಾಡುವವರ ಸಂಖ್ಯೆ ಗೌರಿ ಹಬ್ಬಕ್ಕೆ ಮಾತ್ರ ಇರುತ್ತದೆ. ಈ ಹಿಂದೆ ಪಟ್ಟಣದ ಕುಂಬಾರ ಬೀದಿಯಲ್ಲಿ ಮಡಕೆ ತಯಾರುವ ಮಾಡುವ ನಮ್ಮದೇ ಭಟ್ಟಿಗಳಿದ್ದವು.
ಆದರೆ ಈಚೆಗೆ ಕುಂಬಾರಿಕೆ ನೇಪಥ್ಯಕ್ಕೆ ಸರಿಯುತ್ತಿರುವ ಹಿನ್ನೆಲೆಯಲ್ಲಿ ನಾವು ಟಿ. ನರಸೀಪುರ, ಆಲಗೂಡಿನಿಂದ ಮಡಕೆ ತಂದು ಮಾರಾಟ ಮಾಡುತ್ತಿದ್ದೇವೆ ಒಂದಕ್ಕೆ ಅದರ ಅಳತೆಯ ಆಧಾರದ ಮೇಲೆ ರೂ. 60 ರಿಂದ 100 ರ ವರೆಗೆ ಮಾರಾಟ ಮಾಡುತ್ತೇವೆ. ಇದರಿಂದ ನಮ್ಮ ಲಾಭವ ಪ್ರಮಾಣವೂ ಕಡಿಮೆಯಾಗಿದೆ ಎಂದು ಮಾರಾಟಗಾರ ನಾಗರಾಜು ತಿಳಿಸಿದರು.