‘ಗೌಡಾ’ಗೆ ಕವಿವಿಯಿಂದ 15 ಹೆಸರು

ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯದ 69ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಲು 15 ಜನ ಗಣ್ಯರ ಹೆಸರನ್ನು ಶಿಫಾರಸು ಮಾಡಲಾಗಿದೆ.

ಕವಿವಿಯಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ಜನರ ಹೆಸರು ಶಿಫಾರಸಾಗಿದೆ ಎನ್ನಲಾಗಿದೆ. ಕವಿವಿ ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ ಸದಸ್ಯರು ಕಲೆ, ಸಂಸ್ಕೃತಿ, ಸಾಹಿತ್ಯ, ವೈದ್ಯಕೀಯ, ಸಾಮಾಜಿಕ ವಿಜ್ಞಾನ ಸೇರಿ ಇತರ ವಿಭಾಗಗಳಲ್ಲಿ ನಾಮನಿರ್ದೇಶನ ಮಾಡಿದ ಗಣ್ಯರ ಹೆಸರುಗಳನ್ನು ರಾಜ್ಯಪಾಲರಿಗೆ ಕಳುಹಿಸಲು ತೀರ್ವನಿಸಿದ್ದಾರೆ.

ಕೆಲ ದಿನಗಳ ಹಿಂದೆ ನಡೆದ ಕವಿವಿ ಸಿಂಡಿಕೇಟ್ ಸಭೆಯಲ್ಲಿ ಗೌರವ ಡಾಕ್ಟರೇಟ್ ಪದವಿಗೆ ಸ್ವೀಕೃತಗೊಂಡ ಅರ್ಜಿಗಳ ಪರಿಶೀಲನೆ ಕುರಿತು ಚರ್ಚೆ ನಡೆಸಲಾಗಿದೆ. ಈಗಾಗಲೇ ಸ್ವೀಕೃತಗೊಂಡ 15 ಜನರ ಹೆಸರುಗಳ ಪ್ರಸ್ತಾವವನ್ನು ರಾಜ್ಯಪಾಲರ ಕಾರ್ಯಾಲಯದ ಪರಿಶೀಲನಾ ಸಮಿತಿಯಲ್ಲಿ ಮಂಡಿಸಲು ಪಟ್ಟಿ ಕಳುಹಿಸುವಂತೆ ಸಿಂಡಿಕೇಟ್ ಶಿಫಾರಸು ಮಾಡಿದೆ.

ಇದಲ್ಲದೆ ಗೌರವ ಡಾಕ್ಟರೇಟ್ ಪದವಿಗೆ ಬಂದಿರುವ ಅರ್ಜಿಗಳನ್ನು ಪರಿಶೀಲಿಸುವ ಸಮಿತಿಗೆ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಎ. ಮುರಿಗೆಪ್ಪ ಅವರನ್ನು ಕವಿವಿಯಿಂದ ನಾಮನಿರ್ದೇಶನ ಮಾಡಲು ಸಿಂಡಿಕೇಟ್ ಸಹ ಒಪ್ಪಿಗೆ ನೀಡಿದೆ. ಹೀಗಾಗಿ ಅವರ ಹೆಸರನ್ನು ಸಹ ರಾಜ್ಯಪಾಲರ ಕಚೇರಿಗೆ ಕಳುಹಿಸಲು ತೀರ್ವನಿಸಲಾಗಿದೆ.

ಗೌಡಾ ಪದವಿಗೆ ಖ್ಯಾತ ಹಿಂದುಸ್ತಾನಿ ಸಂಗೀತಗಾರ, ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಸಂಗೀತ ಗುರುಕುಲದ ಪ್ರಾಧ್ಯಾಪಕ ಪಂ. ಗಣಪತಿ ಭಟ್ ಹಾಸಣಗಿ, ಹಿಂದುಸ್ತಾನಿ ಗಾಯಕಿ ಸಂಗೀತಾ ಕಟ್ಟಿ, ಕೇಂದ್ರ ಸಚಿವರಾಗಿದ್ದ ದಿ. ಎಚ್.ಎನ್. ಅನಂತಕುಮಾರ, ಮಾಜಿ ಶಾಸಕ ಹುಲಕೋಟಿಯ ಡಿ.ಆರ್. ಪಾಟೀಲ, ರಂಗಕರ್ವಿು ಯಶವಂತ ಸರದೇಶಪಾಂಡೆ, ಧಾರವಾಡದ ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ, ಮಹಾಂತೇಶ ಕೆ., ದಾಂಡೇಲಿಯ ಉಮಾಕಾಂತ ಸೋಮನಗೌಡ ಪಾಟೀಲ, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗದಗ ಜಿಲ್ಲೆ ನರಗುಂದದ ಭೈರನಟ್ಟಿ ಶ್ರೀ ಶಾಂತಲಿಂಗ ಸ್ವಾಮೀಜಿ, ಗದಗ ಜಿಲ್ಲೆ ರೋಣ ತಾಲೂಕಿನವರಾದ ತುಲಸಮ್ಮ ಎನ್. ಕೇಲೂರ, ಬಿ.ಜಿ. ಅಣ್ಣಿಗೇರಿ, ಹೊಳೆಆಲೂರಿನ ವಿಶ್ವನಾಥ ಪಾಟೀಲ, ಶಿರಸಿಯ ಗಣಪತಿ ಎಂ. ಹೆಗಡೆ ಮುಳಖಂಡ ಹಾಗೂ ಶಿರಸಿ ಟಿಎಸ್​ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಶಿಗೇಹಳ್ಳಿ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.

ಕವಿವಿಯಿಂದ ಪ್ರತಿ ವರ್ಷ ಇಬ್ಬರು, ಮೂವರು ಗಣ್ಯ ವ್ಯಕ್ತಿಗಳಿಗೆ ‘ಗೌಡಾ’ ಪದವಿ ನೀಡಿ ಗೌರವಿಸಲಾಗುತ್ತಿದೆ. ಆದರೆ ಕೆಲ ವರ್ಷಗಳ ಹಿಂದೆ ಆಯ್ಕೆಯಲ್ಲಿ ಕೆಲ ಗೊಂದಲಗಳು ಉಂಟಾದ ಹಿನ್ನಲೆಯಲ್ಲಿ ಪ್ರತಿಭಟನೆಗಳೂ ನಡೆದಿದ್ದವು. ಹೀಗಾಗಿ ಕಳೆದ ವರ್ಷ ಒಬ್ಬರಿಗೆ ಮಾತ್ರ ನೀಡಲಾಗಿತ್ತು. ಆದರೆ ಈ ಬಾರಿ ಎಷ್ಟು ಜನರಿಗೆ ನೀಡಲಾಗುತ್ತದೆ ಹಾಗೂ 15 ಜನರಲ್ಲಿ ಯಾರಿಗೆ ಈ ಗೌರವ ಲಭಿಸಿದೆ ಎಂಬುದು ಕುತೂಹಲ ಉಂಟುಮಾಡಿದೆ.