ಗಬ್ಬೂರಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಿ – ರೈತ ಸಂಘದ ಪದಾಧಿಕಾರಿಗಳ ಒತ್ತಾಯ

ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ವಿವಿಧ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ನೀಡಿದ ಅನುದಾನ ಬಳಸುವ ಮುನ್ನ ರಸ್ತೆ ವಿಸ್ತರಣೆ ಮಾಡುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಪದಾಧಿಕಾರಿಗಳು ಒತ್ತಾಯಿಸಿದರು.

ನಗರದ ಡಿಸಿ ಕಚೇರಿಗೆ ಆಗಮಿಸಿದ ತಾಲೂಕು ಸಮಿತಿ ಪದಾಧಿಕಾರಿಗಳು ಮಂಗಳವಾರ ಡಿಸಿ ಕಚೇರಿ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು. ಈಗಾಗಲೆ ಹೈಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ಬಿಡುಗಡೆಯಾಗಿದೆ. ಈ ಅನುದಾನದಲ್ಲಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದಂತೆ ಎಲ್ಲ ರಸ್ತೆಗಳ ವಿಸ್ತರಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಸಿಸಿ ರಸ್ತೆ, ಒಳಚರಂಡಿ ಕಾಮಗಾರಿಗಳು ಆರಂಭವಾಗಿರುವುದು ಅವೈಜ್ಞಾನಿಕವಾಗಿದೆ. ರಸ್ತೆ ಆಗಲೀಕರಣ ಮಾಡದೆ ಕಾಮಗಾರಿ ಆರಂಭಿಸಿರುವುದು ಸರಿಯಲ್ಲ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು. ರಸ್ತೆ ವಿಸ್ತರಣೆ ನಂತರ ಚರಂಡಿ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಲು ಒತ್ತಾಯಿಸಿದರು.

ಈ ಸಂದರ್ಭ ಸಂಘದ ತಾಲೂಕು ಅಧ್ಯಕ್ಷ ಬೂದೆಯ್ಯಸ್ವಾಮಿ, ರಾಜ್ಯ ಕಾರ್ಯದರ್ಶಿ ಸೂಗೂರಯ್ಯ ಆರ್.ಎಸ್.ಮಠ, ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಗೌಡ, ವೀರೇಶ ಕಡಗಂದೊಡ್ಡಿ, ಚಾಂದಸಾಬ್ ಕಡಗಂದೊಡ್ಡಿ, ದೇವರಾಜ ಮಮದಾಪುರ, ಮಲ್ಲಪ್ಪಗೌಡ, ಶಿವುಯಾದವ್, ರಮೇಶ ಗಾಣದಾಳ ಇತರರಿದ್ದರು.