ಜಾನುವಾರುಗಳೊಂದಿಗೆ ಗೊರವನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

blank

ಮದ್ದೂರು: ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ತಾಲೂಕಿನ ಗೊರವನಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಬಳಿ ಜಾನುವಾರುಗಳೊಂದಿಗೆ ಪ್ರತಿಭಟನೆ ನಡೆಸಿದರು.

ತಾಲೂಕಿನ ಗೊರವನಹಳ್ಳಿ ಗ್ರಾ.ಪಂ. ಕಚೇರಿ ಬಳಿ ಸೋಮವಾರ ಆಗಮಿಸಿದ ಸ್ಥಳೀಯ ನಿವಾಸಿಗಳು ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಒಂದು ತಿಂಗಳಿನಿಂದಲೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿದರು.

ಗ್ರಾಮಕ್ಕೆ ಸರಬರಾಜಾಗುತ್ತಿದ್ದ ಕಾವೇರಿ ನೀರನ್ನು ಏಕಾಏಕಿ ಸ್ಥಗಿತಗೊಳಿಸಿರುವುದರಿಂದ ಹಲವು ಅಧ್ವಾನಗಳಿಗೆ ಕಾರಣವಾಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂದು ಆರೋಪಿಸಿದರಲ್ಲದೆ, ಸ್ಥಳೀಯ ನಿವಾಸಿಗಳು ನಿತ್ಯ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಸ್ಥಳೀಯ ನಿವಾಸಿಗಳು ಕುಡಿಯುವ ನೀರಿಗಾಗಿ ಜಮೀನಿನಲ್ಲಿ ಅಳವಡಿಸಿರುವ ಕೊಳವೆ ಬಾವಿ ಮತ್ತು ತೆರೆದ ಬಾವಿಗಳನ್ನೇ ಆಶ್ರಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಡಕ್ಕುಂಟಾಗಿದ್ದು ಶೌಚಗೃಹಗಳಿಗೆ ತೆರಳಲು ಬಯಲನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದರು.

ಸ್ಥಳೀಯ ಗ್ರಾ.ಪಂ. ಆಡಳಿತ ಕೇವಲ ಆಶ್ವಾಸನೆ ಮತ್ತು ಭರವಸೆಯನ್ನು ನೀಡಿ ಕೈ ತೊಳೆದುಕೊಳ್ಳುತ್ತಿದೆ. ಇದುವರೆಗೂ ಸಕಾಲದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ವಿಫಲವಾಗಿದ್ದು ವೃದ್ಧರು, ಮಹಿಳೆಯರು ಅಲೆದಾಡಬೇಕಾದ ಅನಿವಾರ್ಯತೆ ಕಂಡು ಬಂದಿದ್ದು, ಕೂಡಲೇ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದಿದ್ದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಗ್ರಾ.ಪಂ. ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆ ನೀಡಿದರು.
ಬಳಿಕ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಗ್ರಾ.ಪಂ. ಉಪಾಧ್ಯಕ್ಷ ಉಮೇಶ್ ಮುಂದಿನ ಎರಡು ದಿನಗಳೊಳಗಾಗಿ ಕುಡಿಯುವ ನೀರು ಪೂರೈಕೆ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾವೇರಿ ನೀರು ಸರಬರಾಜು ಮಾಡಲು ಕ್ರಮ ವಹಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಸ್ಥಳೀಯ ಮುಖಂಡರಾದ ಸಂತೋಷ್‌ಕುಮಾರ್, ಅಭಿಷೇಕ್, ಅವಿನಾಶ್, ರಾಜೇಶ್, ಮಧು, ಕುಮಾರ್, ರಘು, ಸಿದ್ದೇಗೌಡ, ಚಂದ್ರು, ಬೋರೇಗೌಡ ಇತರರು ಇದ್ದರು.

Share This Article

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…