ಗೋಪೂಜೆಯೊಂದಿಗೆ ರೈತರ ಸಂವಾದ

ದಾವಣಗೆರೆ: ಫೆ.18ರಿಂದ ರಾಜ್ಯದ ಪ್ರತಿಯೊಂದು ತಾಪಂ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಜಾಗೃತಿ ಮೂಡಿಸುವ ಸಭೆ ಆಯೋಜಿಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮಗಳನ್ನು ಮುಂದಿನ ಹಂತದಲ್ಲಿ ಗ್ರಾಮ ಮಟ್ಟದಲ್ಲೂ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.

ಅಂದು ಗೋಪೂಜೆ ಮಾಡುವ ಮೂಲಕ ರೈತರೊಂದಿಗೆ ಸಂವಾದ ನಡೆಸಲಾಗುವುದು. ಜತೆಗೆ ಹುತಾತ್ಮ ಯೋಧರ ಕುಟುಂಬಗಳಿಗೆ ಸಾಂತ್ವನ ಹೇಳುವ, ಧೈರ್ಯ ತುಂಬುವ ಪ್ರಯತ್ನವನ್ನೂ ಮಾಡಲಾಗುವುದು ಎಂದು ಹೇಳಿದರು.

ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 10 ಲಕ್ಷದಿಂದ 12.50 ಲಕ್ಷ ಜನ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1 ಲಕ್ಷದಿಂದ 1.30 ಲಕ್ಷ ಫಲಾನುಭವಿಗಳಿದ್ದಾರೆ ಎಂಬ ಅಂದಾಜಿದೆ. ಅವರನ್ನು ಸಂಪರ್ಕಿಸುವ ಅಭಿಯಾನ ಪ್ರಾರಂಭವಾಗಿದೆ. ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಾಂತರಾಜ ಪಾಟೀಲ್, ಮುಖಂಡರಾದ ವೆಂಕಟಗಿರಿ ನಾಯಕ್, ಬಸವರಾಜ ಬೇತೂರ್, ನಾಗರಾಜ ಹುಣಸಗಟ್ಟ, ಚನ್ನೇಶ್, ಎಸ್.ಆರ್.ಹನುಮಂತಪ್ಪ, ಗೋಪಾಲರಾವ್ ಸಾವಂತ್, ಎಸ್.ಜಿ.ಶಿವಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ಫೆ.23 ಮತ್ತು 24ರಂದು ಉತ್ತರ ಪ್ರದೇಶದ ಗೋರಖಪುರದಲ್ಲಿ ರಾಷ್ಟ್ರೀಯ ರೈತರ ಅಧಿವೇಶನ ನಡೆಯಲಿದೆ. ಅದರಲ್ಲಿ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು, ಪ್ರಗತಿಪರ ರೈತರು ಪಾಲ್ಗೊಳ್ಳುವರು.

ಶಿವಪ್ರಸಾದ್ ಉಪಾಧ್ಯಕ್ಷ,ರಾಜ್ಯ ಬಿಜೆಪಿ ರೈತ ಮೋರ್ಚಾ