ಗೂಗಲ್ ಬೇಡ ಗುರುವಿಗೆ ಶರಣಾಗಿ

ಬಾಗಲಕೋಟೆ: ದುಃಖದ ನಿವೃತ್ತಿ, ಸುಖದ ಪ್ರಾಪ್ತಿಯ ಗುರಿ ಮುಟ್ಟಬೇಕಾದರೆ ಭಗವಂತನ ದಾರಿಯಲ್ಲಿ ಹೋಗಬೇಕು. ಅದಕ್ಕೆ ಗೂಗಲ್ ಮೊರೆ ಹೋಗಬೇಡಿ, ಗುರುವಿಗೆ ಶರಣಾಗಿ ಎಂದು ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀಗಳು ಹೇಳಿದರು.

ಬೆಂಗಳೂರಿನ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್, ಶ್ರೀಪಾದರಾಜ ರಿಸರ್ಚ್ ಇಂಟರನ್ಯಾಷನಲ್ ಫೌಂಡೇಷನ್ ಟ್ರಸ್ಟ್, ಶ್ರೀ ಪ್ರಸನ್ನ ವೆಂಕಟ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್, ಶ್ರೀ ಪ್ರಸನ್ನ ವೆಂಕಟ ಸಂಶೋಧನಾ ಪ್ರತಿಷ್ಠಾನ ಸಹಯೋಗದೊಂದಿಗೆ ಪ್ರಸನ್ನ ವೆಂಕಟದಾಸರ ಆರಾಧನಾ ಮಹೋತ್ಸವದ ಸೇವಾ ಸಮಿತಿ ನವನಗರದ 3ನೇ ಸೆಕ್ಟರ್​ನ ಪ್ರಸನ್ನ ಮಾರುತಿ ದೇವಸ್ಥಾನ ಆವರಣದ ಪ್ರಸನ್ನ ವೆಂಕಟದಾಸರ ಸನ್ನಿಧಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಂಟನೇ ಹರಿದಾಸ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ನಿರಂತರವಾಗಿ ಆತ್ಮವಿಮರ್ಶೆ ಗೊಳಪಡಬೇಕು, ಸೂರ್ಯ ಅಸ್ತಂಗತನಾದಾಗ ಆಯುಷ್ಯದಲ್ಲಿ ಒಂದು ದಿನ ಕಡಿಮೆಯಾದಂತೆ. ಈ ಅವಧಿಯಲ್ಲಿ ನಾನು ಮಾಡಿರುವ ಸಾಧನೆ ಏನು ಎಂಬುದನ್ನು ಆಲೋಚಿಸಬೇಕು. ಮೋಕ್ಷಕ್ಕೆ ಮನಸ್ಸಿನ ತುಡಿತ ಇರಬೇಕು ಎಂದರು.

ಪ್ರಾಸ್ತಾವಿಕ ಮಾತನಾಡಿದ ಸಂಚಾಲಕ, ಇಸ್ರೋ ವಿಜ್ಞಾನಿ ಡಾ. ಸುಭಾಷ ಕಾಖಂಡಕಿ, ಪ್ರಸನ್ನ ವೆಂಕಟದಾಸರ ಸಾಹಿತ್ಯ, ಕೃತಿಗಳ ಸಂಶೋಧನೆ ಮಾಡಿ ಅಭಿವೃದ್ಧಿಪಡಿಸಿ ಪುಸ್ತಕ ರೂಪ, ಧ್ವನಿಸುರುಳಿಯಲ್ಲಿ ಸಿದ್ಧಪಡಿಸುವ ಕೆಲಸ ವ್ಯವಸ್ಥಿತ ರೀತಿಯಲ್ಲಿ ನಡೆದಿದೆ. ತೆಲಗು ಭಾಷೆಯಲ್ಲಿ ಕೂಡ ಭಾಷಾಂತರಗೊಂಡಿವೆ ಎಂದರು. ಸಮ್ಮೇಳನದ ಸರ್ವಾಧ್ಯಕ್ಷ ಪಂ.ಡಾ.ಜಯತೀರ್ಥಾಚಾರ್ಯ ಮಳಗಿ, ಹರಿದಾಸ ವಿದ್ವಾಂಸ ಡಾ.ಅನಂತಪದ್ಮನಾಭರಾವ, ಪಂ. ಧ್ರುವಾಚಾರ್ಯ ಕಾಖಂಡಕಿ, ಪಂ. ರಘೊತ್ತಮಾಚಾರ್ಯ ನಾಗಸಂಪಗಿ, ಪಂ.ಬಿಂದುಮಾಧವಾಚಾರ್ಯ ನಾಗಸಂಪಗಿ, ಲಕ್ಷಿ್ಮೕಕಾಂತ ಪಾಟೀಲ, ಅನಂತ ಕುಲಕರ್ಣಿ, ಡಾ. ರೇಖಾ ಕಾಖಂಡಕಿ ವೇದಿಕೆ ಮೇಲಿದ್ದರು. ಗುರುರಾಜ ಕುಲಕರ್ಣಿ ನಿರೂಪಿಸಿದರು.