ಗೂಗಲ್ ಸೈನ್ಸ್‌ಫೇರ್ ಸ್ಪರ್ಧೆ ವಲಯ ಫೈನಲ್‌ಗೆ ಉಪ್ಪಿನಂಗಡಿ ವಿದ್ಯಾರ್ಥಿಗಳು

>

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ ಸಂಶೋಧನೆಗಳ ಬಗೆಗಿನ ಸ್ಪರ್ಧಾಕಣವಾಗಿರುವ ಗೂಗಲ್ ಸೈನ್ಸ್ ಫೇರ್ 2018ರ ಏಷ್ಯಾ ಫೆಸಿಫಿಕ್ ಜಪಾನ್ ರೀಜನ್‌ನಿಂದ ಅಂತಿಮ ಹಂತಕ್ಕೆ ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಎ.ಯು. ನಚಿಕೇತ್ ಕುಮಾರ್ ಮತ್ತು ಕೆ.ಎ.ಅಮನ್ ತಂಡ ಆಯ್ಕೆಯಾಗಿದೆ.
ಗೂಗಲ್ ಸೈನ್ಸ್ ಫೇರ್ ವಿಜ್ಞಾನ ಸಂಶೋಧನಾ ವಿಭಾಗದಲ್ಲಿ ಕಣದಲ್ಲಿದ್ದ ಸಾವಿರಕ್ಕೂ ಹೆಚ್ಚಿನ ಸ್ಪರ್ಧಿಗಳ ಪೈಕಿ ಜಗತ್ತಿನ ಒಟ್ಟು ಮೂರು ರೀಜನ್(ವಲಯ)ಗಳಿಂದ ಒಟ್ಟು ನೂರು ಮಂದಿ ಫೈನಲ್ ಪಟ್ಟಿಯಲ್ಲಿದ್ದಾರೆ.
ರಬ್ಬರ್ ಶೀಟ್ ತಯಾರಿಕೆಯಲ್ಲಿ ರಾಸಾಯನಿಕ ದ್ರಾವಣದ ಬದಲಾಗಿ ಬಿಂಬುಲಿ ಹಣ್ಣಿನ ರಸ ಬಳಸಿ ಗುಣಮಟ್ಟದ ರಬ್ಬರ್ ಶೀಟ್ ತಯಾರಿಸುವ ಬಗ್ಗೆ ನಡೆಸಿದ ಸಂಶೋಧನೆಯನ್ನು ಗೂಗಲ್ ಸೈನ್ಸ್‌ಫೇರ್ ಸ್ಪರ್ಧೆಗೆ ಕಳುಹಿಸಲಾಗಿತ್ತು. ಈ ಸಂಶೋಧನೆಗೆ ಸಂಬಂಧಿಸಿ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ವಿದ್ಯಾರ್ಥಿಗಳು ವರದಿ ಮಂಡಿಸಿ, ಪ್ರಶ್ನೆಗಳಿಗೆ ಉತ್ತರಿಸಿದ್ದರು. ಸಂಶೋಧನಾ ವರದಿ ಮಂಡನೆ ಹಾಗೂ ಪ್ರಶ್ನೋತ್ತರ ನಿಭಾಯಿಸಿದ ಸ್ವರೂಪ ಪರಿಗಣಿಸಿ ವಿದ್ಯಾರ್ಥಿಗಳ ತಂಡವನ್ನು ವಲಯದ ಫೈನಲಿಸ್ಟ್ ಆಗಿ ಆಯ್ಕೆ ಮಾಡಲಾಗುತ್ತದೆ. ರೀಜನಲ್ ಫೈನಲಿಸ್ಟ್ ಆಗಿ ಆಯ್ಕೆಯಾದವರಿಗೆ ಗುಣಮಟ್ಟದ ಲ್ಯಾಪ್‌ಟಾಪ್ ಸಹಿತ ಹಲವು ಕೊಡುಗೆ ಲಭಿಸಲಿದೆ.

ಮೇ ಅಂತ್ಯಕ್ಕೆ ಆಯ್ಕೆ:  ಜಗತ್ತಿನ ಒಟ್ಟು 100 ರೀಜನಲ್ ಫೈನಲಿಸ್ಟ್‌ಗಳ ಪೈಕಿ 20 ಮಂದಿಯನ್ನು ಗ್ಲೋಬಲ್ ಫೈನಲಿಸ್ಟ್ ಆಗಿ ಮೇ ಅಂತ್ಯಕ್ಕೆ ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ ಅಮೆರಿಕದಲ್ಲಿ ನಡೆಯುವ ಫೈನಲ್ ಸ್ಪರ್ಧಾ ಕಣದಲ್ಲಿ ಭಾಗವಹಿಸಲು ಅವಕಾಶವಿದೆ. ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿಜ್ಞಾನ ಶಿಕ್ಷಕಿ ನಿಶಿತಾ ಕೆ. ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಡೆಸಿದ ಸಂಶೋಧನೆ ಹಿಂದೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ಐಸ್ವೀಪ್-2017ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದಿತ್ತು.

Leave a Reply

Your email address will not be published. Required fields are marked *