ಲೈಂಗಿಕ ಕಿರುಕುಳ: ಗೂಗಲ್​ನ 48 ನೌಕರರ ವಜಾ

ಸ್ಯಾನ್​ ಫ್ರಾನ್ಸಿಸ್ಕೋ: ಭಾರತದಲ್ಲಿ ಮೀಟೂ ಅಭಿಯಾನ ಸಾಕಷ್ಟು ಸದ್ದು ಮಾಡುತ್ತಿರುವ ವೇಳೆಯಲ್ಲೇ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ 48 ನೌಕರರನ್ನು ಕಳೆದ 2 ವರ್ಷಗಳ ಅವಧಿಯಲ್ಲಿ ವಜಾ ಮಾಡಲಾಗಿದೆ ಎಂದು ಗೂಗಲ್​ ಸಂಸ್ಥೆ ತಿಳಿಸಿದೆ.

ಕಳೆದ 2 ವರ್ಷಗಳಲ್ಲಿ 13 ಹಿರಿಯ ಅಧಿಕಾರಿಗಳೂ ಸೇರಿದಂತೆ 48 ನೌಕರರನ್ನು ವಜಾ ಮಾಡಲಾಗಿದೆ. ಕಂಪನಿಯಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ನಾವು ಬದ್ಧರಾಗಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮತ್ತು ಲೈಂಗಿಕ ಕಿರುಕುಳ ಆರೋಪ ಎದುರಿಸುವ ನೌಕರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಕಷ್ಟು ನಿಯಮಾವಳಿಗಳನ್ನು ರೂಪಿಸಿದ್ದೇವೆ ಎಂದು ಗೂಗಲ್​ನ ಸಿಇಒ ಸುಂದರ್​ ಪಿಚಾಯ್​ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಂಪನಿಯ ನೌಕರರ ವಿರುದ್ಧ ದಾಖಲಾಗುವ ಲೈಂಗಿಕ ಕಿರುಕುಳ ದೂರನ್ನು ಕೂಲಂಕಶವಾಗಿ ಪರಿಶೀಲಿಸಿ, ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೂಗಲ್​ ತಿಳಿಸಿದೆ. (ಏಜೆನ್ಸೀಸ್​)