ಮನುಕುಲದ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ತಂದ World Wide Webಗೆ 30ನೇ ಹುಟ್ಟುಹಬ್ಬದ ಸಂಭ್ರಮ

ವಿಶೇಷವಾದ ಡೂಡಲ್​ ಮೂಲಕ ಸಂಭ್ರಮಿಸಿದ ಗೂಗಲ್​

ನವದೆಹಲಿ: ಆಧುನಿಕ ಮನುಕುಲದ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾದ World Wide Web (WWW) ಮಂಗಳವಾರ 30ನೇ ಹುಟ್ಟುಹಬ್ಬದ ಸಮಭ್ರಮದಲ್ಲಿದೆ. ಈ ಸಂಭ್ರಮವನ್ನು ದ್ವಿಗುಣಗೊಳಿಸಲು ಗೂಗಲ್​ ಸಂಸ್ಥೆ ವಿಶೇಷವಾದ ದೂಡಲ್​ ಅನ್ನು ಬಿಡುಗಡೆ ಮಾಡಿದೆ.

ಯೂರೋಪ್​ನ ಸಿಇಆರ್​ಎನ್​ ಲ್ಯಾಬ್​ನಲ್ಲಿ ಕೆಲಸ ಮಾಡುತ್ತಿದ್ದ ಸರ್​ ಟಿಮ್​ ಬರ್ನರ್ಸ್​ ಲೀ (33) ಎಂಬಾತ 1989ರ ಮಾರ್ಚ್​ 12ರಂದು ತನ್ನ ಬಾಸ್​ಗೆ ಇನ್ಫರ್ಮೇಷನ್​ ಮ್ಯಾನೇಜ್​ಮೆಂಟ್​: ಎ ಪ್ರೊಪೋಸಲ್​ ಎಂಬ ವರದಿಯನ್ನು ಸಲ್ಲಿಸಿದ್ದರು. ಅದುವೇ ಇಂದು WWW ಎಂದು ಜನಪ್ರಿಯವಾಗಿರುವ World Wide Webನ ಜನನಕ್ಕೆ ಕಾರಣವಾಯಿತು.

ಸ್ವಿಜರ್​ಲೆಂಡ್​ನಲ್ಲಿರುವ ಅಣುಭೌತಶಾಸ್ತ್ರ ಪ್ರಯೋಗಾಲಯ ಎನಿಸಿರುವ ಸಿಇಆರ್​ಎನ್​ನಲ್ಲಿರುವ ವಿಜ್ಞಾನಿಗಳಿಗೆ ತಮ್ಮ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಮೊದಲಿಗೆ ಈ ಸೌಲಭ್ಯ ಸೀಮಿತವಾಗಿತ್ತು. ಆದರೆ, ಎಚ್​ಟಿಎಂಎಲ್​ ಲಾಂಗ್ವೇಜ್​ ಬಳಸಿ ಎಚ್​ಟಿಟಿಪಿ ಅಪ್ಲಿಕೇಷನ್​ ಮತ್ತು WorldWideWeb.app ಅನ್ನು ಅಭಿವೃದ್ಧಿಪಡಿಸಲು ಬರ್ನರ್ಸ್​ ಲೀಗೆ ಅವರ ಬಾಸ್​ ಪ್ರೋತ್ಸಾಹಿಸಿದರು. ಹೀಗೆ ಅಭಿವೃದ್ಧಿಗೊಂಡ ಸೌಲಭ್ಯ, 1991ರ ವೇಳೆಗೆ ಬಾಹ್ಯ ವೆಬ್​ ಸರ್ವರ್​ಗಳು ಸ್ಥಾಪನೆಗೊಂಡು, ಕಾರ್ಯನಿರ್ವಹಿಸಲಾರಂಭಿಸಿತು.

1993ರ ಏಪ್ರಿಲ್​ ವೇಳೆಗೆ ಈ ಸೌಲಭ್ಯ ಸಾರ್ವಜನಿಕವಾಗಿ ಬಿಡುಗಡೆಯಾಯಿತು. Mosaic ಎಂಬ ಮೊದಲ ಸರ್ಚ್​ ಇಂಜಿನ್​ ಆರಂಭವಾಗುವುದರೊಂದಿಗೆ ನವೆಂಬರ್​ ವೇಳೆಗೆ ಇದು ಭಾರಿ ಜನಪ್ರಿಯತೆ ಗಳಿಸಿಕೊಂಡಿತು. ತಂತ್ರಜ್ಞಾನ ಅಭಿವೃದ್ಧಿ ಆದಂತೆಲ್ಲ Internet Explorer, Google Chorme, ಮತ್ತು Mozilla Firefox ಬ್ರೌಸರ್​ಗಳು Mosaic ಸರ್ಚ್​ ಇಂಜಿನ್​ ಅನ್ನು ಹಿಂದಿಕ್ಕಿದವು. (ಏಜೆನ್ಸೀಸ್​)