Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಲಕ್ಷ ಕೋಟಿ ರೂ.ಗೆ ಜಿಎಸ್​ಟಿ ಜಿಗಿತ

Saturday, 30.06.2018, 3:03 AM       No Comments

ಜಿಎಸ್​ಟಿ ಜಾರಿ ಮಾಡುವಾಗ ಕೇಂದ್ರ ಸರ್ಕಾರ ಎರಡು ವಿಷಯಗಳಿಗೆ ಮಹತ್ವ ನೀಡಿತ್ತು. ತೆರಿಗೆ ಸಂಗ್ರಹ ಏರಿಕೆ ಹಾಗೂ ಹೂಡಿಕೆದಾರರಲ್ಲಿರುವ ‘ತೆರಿಗೆ ಭಯೋತ್ಪಾದನೆ’ ಭಯ ಓಡಿಸುವುದು ಪ್ರಮುಖ ಗುರಿಯಾಗಿತ್ತು. ಜಿಎಸ್​ಟಿ ಜಾರಿಯಾದ ಒಂದು ವರ್ಷ ಬಳಿಕ ಸರ್ಕಾರದ ನಿರೀಕ್ಷೆ ನಿಜವಾಗುತ್ತಿದೆ. ತೆರಿಗೆ ಸಂಗ್ರಹದಲ್ಲಿ ಏರಿಕೆ ಕಂಡುಬಂದಿದ್ದು, ದೇಶದ ಜಿಡಿಪಿ ಬೆಳವಣಿಗೆ ಹೊಂದುತ್ತಿದೆ. ಆರಂಭಿಕ ಹೊಡೆತದ ನಡುವೆಯೂ ಮಾಸಿಕ ತೆರಿಗೆ ಸಂಗ್ರಹ ವರ್ಷದೊಳಗೆ 1 ಲಕ್ಷ ಕೋಟಿ ರೂ. ದಾಟಿದೆ. 2018-19ರ ಆರ್ಥಿಕ ವರ್ಷದಲ್ಲಿ ಸರಾಸರಿ ಮಾಸಿಕ ತೆರಿಗೆ ಸಂಗ್ರಹ ಇದಕ್ಕೂ ಹೆಚ್ಚಾಗಲಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಅಭಿಪ್ರಾಯಪಟ್ಟಿದೆ. ಜಿಎಸ್​ಟಿ ಅನುಷ್ಠಾನವಾದಾಗ ಇದು 90 ಸಾವಿರ ಕೋಟಿ ರೂ. ಆಸುಪಾಸಿನಲ್ಲಿತ್ತು. ಜಿಎಸ್​ಟಿ ಪೋರ್ಟಲ್​ನಲ್ಲಿ ಈಗ ಹೊಸದಾಗಿ 34 ಲಕ್ಷ ತೆರಿಗೆದಾರರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 17 ಲಕ್ಷ ಮಧ್ಯಮ ಮತ್ತು ಸಣ್ಣ ಉದ್ದಿಮೆದಾರರು ಸ್ವಯಂ ಪ್ರೇರಿತರಾಗಿ ನೋಂದಾಯಿಸಿಕೊಂಡಿದ್ದಾರೆ. ಜಿಎಸ್​ಟಿ ಜಾರಿ ಬಳಿಕ ಕೈಗಾರಿಕಾ ಉತ್ಪನ್ನ ಸೂಚ್ಯಂಕವೂ ಪ್ರಗತಿ ದಾಖಲಿಸಿದೆ. ಜುಲೈ 2017ರಿಂದ ಜನವರಿ 2018ರವರೆಗೆ ಕೈಗಾರಿಕಾ ಉತ್ಪನ್ನ ಸೂಚ್ಯಂಕ ಸರಾಸರಿ ಶೇ.5 ರಂತೆ ಪ್ರಗತಿ ಸಾಧಿಸಿದೆ. 2016-17ರಲ್ಲಿ ಇದು ಶೇ.3.9 ಇತ್ತು.

ಶೂನ್ಯ ತೆರಿಗೆ

ನಾರು, ಮಾಂಸ, ಮೊಟ್ಟೆ, ಹಾಲು, ಮೊಸರು, ಹಣ್ಣು, ತರಕಾರಿ, ಪತ್ರಿಕೆ, ಪುಸ್ತಕ ಸೇರಿ 145 ಉತ್ಪನ್ನ. ಶೇ.0.25: ಕಚ್ಚಾ ವಜ್ರ

ತೆರಿಗೆ ಹಂತ

ಶೇ. 5 – ಆಹಾರ ಪದಾರ್ಥ, ಕಾಫಿ, ಟೀ, ಅಗರಬತ್ತಿ,, ಆಯುರ್ವೆದ, ಯುನಾನಿ, ಹೋಮಿ ಯೋಪಥಿ ಔಷಧ, ಸಾಮಾನ್ಯ ಹೋಟೆಲ್ ಸೇವೆ, ಎಲ್​ಪಿಜಿ ವಿತರಣೆ, ಸಾರಿಗೆ, ರೈಲ್ವೆ ಹಾಗೂ ಇತರೆ

ಶೇ. 12 – ಫ್ರೋಜನ್ ಮಾಂಸ, ಪ್ಯಾಕೇಜ್ ಮಾಡಿರುವ ಮೊಸರು, ತುಪ್ಪ, ಒಣ ಹಣ್ಣು, ಜ್ಯೂಸ್, ಬಯೋ ಡೀಸೆಲ್, ಬೋರ್ಡ್ ಗೇಮ್ ರೇಯಾನ್, ನೈಲಾನ್ ಉತ್ಪನ್ನಗಳು, ವಿಗ್ರಹ, ಕಲಾಕೃತಿಗಳು ಹಾಗೂ ಇತರೆ

ಶೇ. 18 – ಟ್ರೇಡ್​ ಮಾರ್ಕ್, ಸಾಫ್ಟ್​ವೇರ್, ಬಿಸ್ಕತ್, ಐಸ್ಕ್ರೀಂ, ಸಿಸಿಟಿವಿ, ಕಂಪ್ಯೂಟರ್ ಮಾನಿಟರ್, ಆಪ್ಟಿಕಲ್ ಫೈಬರ್ ಹಾಗೂ ಇತರೆ

ಶೇ. 28 – ಐಷಾರಾಮಿ ವಸ್ತುಗಳು

ಕೆಲ ಸಮಸ್ಯೆ, ಪರಿಹಾರ

  • ರಿಟರ್ನ್ಸ್ ಸಲ್ಲಿಸಿದ ತಿಂಗಳಲ್ಲೇ ಪರಿಷ್ಕರಣೆಗೆ ಅವಕಾಶ ನೀಡಬೇಕು. ಮುಂದಿನ ತಿಂಗಳ ರಿಟರ್ನ್ಸ್​ನಲ್ಲಿ ದಂಡದೊಂದಿಗೆ ಪರಿಷ್ಕರಣೆಗೆ ಅನುವು ಮಾಡಿಕೊಡುವುದು ಸೂಕ್ತವಲ್ಲ.
  • ಒಂದೇ ತೆರಿಗೆ ವ್ಯವಸ್ಥೆಯಿಂದ ಗ್ರಾಹಕರಿಗೆ ಲಾಭ ಎಂದು ಸರ್ಕಾರ ಹೇಳಿತ್ತು. ಆದರೆ ಉದ್ಯಮವು ಇಂದಿಗೂ ತೆರಿಗೆ ಲಾಭವನ್ನು ಗ್ರಾಹಕರಿಗೆ ಹಸ್ತಾಂತರಿಸಿಲ್ಲ. ಬಹುತೇಕ ಉತ್ಪನ್ನಗಳ ಎಂಆರ್​ಪಿಯಲ್ಲಿ ಬದಲಾಗಿಲ್ಲ.
  • ಆಂಟಿ ಪ್ರಾಫಿಟರಿಂಗ್ ಏಜೆನ್ಸಿಯೂ ಈ ಬಗ್ಗೆ ಗ್ರಾಹಕರಿಂದ ದೂರು ನಿರೀಕ್ಷಿಸುವ ಬದಲು ಸ್ವಯಂಪ್ರೇರಿತ ಕ್ರಮ ತೆಗೆದುಕೊಳ್ಳಬೇಕು.
  • ರಫ್ತುದಾರರಿಗೆ ಆರ್​ಇಎಫ್-1 ಮೂಲಕ ಶೀಘ್ರವೇ ರಿಟರ್ನ್ಸ್​ಗೆ ಅವಕಾಶ


ಸವಾಲುಗಳ ನಡುವೆ ಆಶಾಕಿರಣ

| ಸಿ.ಎ. ನಾರಾಯಣ ಭಟ್

ದೇಶದಲ್ಲಿ 17 ರೀತಿಯ ತೆರಿಗೆ ವ್ಯವಸ್ಥೆಯಿದ್ದು, ಅದರ ಬದಲು ಒಂದೇ ತೆರಿಗೆ ತಂದು ಉದ್ಯಮ ಹಾಗೂ ಗ್ರಾಹಕ ಸ್ನೇಹಿ ರಾಷ್ಟ್ರ ನಿರ್ವಣವು ಜಿಎಸ್​ಟಿಯ ಮೂಲ ಉದ್ದೇಶವಾಗಿತ್ತು. ಆರಂಭಿಕ ವರ್ಷದ ದಾರಿ ನೋಡಿದಾಗ ಇದು ಭಾಗಶಃ ಯಶಸ್ವಿಯಾದಂತೆ ಕಾಣಿಸುತ್ತದೆ. ಜಿಎಸ್​ಟಿ ಜಾರಿಯಾದ ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಒಂದು ವರ್ಷದ ಪ್ರಯಾಣವನ್ನು ಯಶಸ್ವಿ ಎಂದೇ ಹೇಳಬಹುದು. ಜಿಎಸ್​ಟಿ ಜಾರಿಯಾದ ಆರಂಭಿಕ ವರ್ಷಗಳಲ್ಲಿ ಎಲ್ಲ ದೇಶಗಳು ಹಣದುಬ್ಬರ ಎದುರಿಸಿವೆ. ಆದರೆ ಜಿಎಸ್​ಟಿ ಅನುಷ್ಠಾನದ ವರ್ಷದಲ್ಲಿ ಭಾರತವು ಹಣದುಬ್ಬರವನ್ನು ಕಂಡಿಲ್ಲ. ತೆರಿಗೆ ಸಂಗ್ರಹ ಏರಿಕೆಯು ಕೇಂದ್ರ ಸರ್ಕಾರಕ್ಕೆ ಆಶಾ ಭಾವನೆ ಮೂಡಿಸಿದ್ದರೂ, ಪೂರ್ವಸಿದ್ಧತೆ ಇಲ್ಲದ ಅನುಷ್ಠಾನದಿಂದ ಕೆಲ ಗಂಭೀರ ಸಮಸ್ಯೆ ತಲೆದೋರಿವೆ. ಮೊದಲ ವರ್ಷದಲ್ಲಿಯೇ ಜಿಎಸ್​ಟಿ ಮಂಡಳಿಯು 50ಕ್ಕೂ ಅಧಿಕ ಭಾರಿ ಸಭೆ ಸೇರಿ 213 ಸರಕುಗಳ ಮೇಲಿನ ದರ ಇಳಿಕೆ ಮಾಡಿದೆ. ಏರಿಕೆಯಾಗಿಲ್ಲ ಎಂಬ ನಿಟ್ಟುಸಿರಿದ್ದರೂ, ಪದೇಪದೆ ಇಳಿಕೆಯಿಂದ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತದೆ. ಇದಕ್ಕೆ ತಡೆ ಹಾಕಬೇಕಿದೆ.

ತಂತ್ರಾಂಶ ಅಭಿವೃದ್ಧಿ ಅತ್ಯಗತ್ಯ: ಜಿಎಸ್​ಟಿಎನ್ ಬಗ್ಗೆ ಆರಂಭಿಕ ದಿನಗಳಿಂದಲೂ ಆಕ್ಷೇಪವಿದೆ. ಆದರೆ ಈವರೆಗೂ ಅದು ಸರಿಯಾಗದಿರುವುದು ದುರದೃಷ್ಟಕರ. ಜಿಎಸ್​ಟಿಆರ್-1, 2 ಹಾಗೂ 3 ಅರ್ಜಿಯ ವಿಳಂಬವು ಇಡೀ ವ್ಯವಸ್ಥೆಗೆ ಮಾರಕವಾಗುತ್ತಿದೆ. ತಾತ್ಕಾಲಿಕವಾಗಿ 3-ಬಿ ಅರ್ಜಿ ನಮೂನೆ ನೀಡಲಾಗುತ್ತಿದೆ. ತೆರಿಗೆ ಸೋರಿಕೆ ತಪ್ಪಿಸುವ ಸಲುವಾಗಿಯೇ ಇಂತಹ ಮೂರು ವ್ಯವಸ್ಥೆ ಜಾರಿ ಮಾಡಲಾಗಿತ್ತು. ಆದರೆ ತಂತ್ರಾಂಶವೇ ಅಭಿವೃದ್ಧಿಯಾಗದೆ ಸೋರಿಕೆ ವ್ಯೂಹ ಹಾಗೆಯೇ ಉಳಿದುಕೊಂಡಿದೆ. ಮಾರಾಟಗಾರರು, ಖರೀದಿದಾರರು ಹಾಗೂ ರಿಟರ್ನ್ಸ್ ಈ ಮೂರು ವ್ಯವಸ್ಥೆ ಸಮರ್ಪಕವಾಗಿದ್ದರೆ ತೆರಿಗೆ ಸೋರಿಕೆಯನ್ನು ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕೆ ಪೂರಕವಾಗಿ ಇ-ವೇ ಬಿಲ್ ಕೂಡ ಸಮರ್ಪಕವಾಗಿ ಜಾರಿಯಾಗಬೇಕಿತ್ತು. ಇನ್ನು ಕೆಲ ತಿಂಗಳಲ್ಲಿ ದೇಶಾದ್ಯಂತ ಇ-ವೇ ಬಿಲ್ ಜಾರಿಯಾಗಬಹುದು. ಇದರಿಂದ ತೆರಿಗೆ ಸಂಗ್ರಹದಲ್ಲಿಯೂ ಏರಿಕೆಯಾಗಿ ಮಾಸಿಕವಾಗಿ 1 ಲಕ್ಷ ಕೋಟಿ ರೂ. ದಾಟಬಹುದಾಗಿದೆ.

Leave a Reply

Your email address will not be published. Required fields are marked *

Back To Top