ಪುಲ್ವಾಮಾದಲ್ಲಿನ 80 ವರ್ಷ ಹಳೆಯ ದೇವಸ್ಥಾನ ಮರುಸ್ಥಾಪನೆಗೆ ಪಂಡಿತರ ಜತೆ ಕೈಜೋಡಿಸಿದ ಮುಸ್ಲಿಮರು

ಶ್ರೀನಗರ: ಕಾಶ್ಮೀರದ ಪುಲ್ವಾಮಾದಲ್ಲಿರುವ ಸುಮಾರು 80 ವರ್ಷ ಹಳೆಯದಾದ ದೇವಸ್ಥಾನದ ಮರುಸ್ಥಾಪನೆಗಾಗಿ ಮುಸ್ಲಿಮರು ಹಾಗೂ ಕಾಶ್ಮೀರಿ ಪಂಡಿತರು ಒಟ್ಟಾಗಿ ಕೈಜೋಡಿಸಿದ್ದಾರೆ.

ಸಿಆರ್​ಪಿಎಫ್​ ಯೋಧರನ್ನು ಗುರಿಯಾಗಿರಿಸಿಕೊಂಡು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಸ್ಥಳದಿಂದ 15 ಕಿ.ಮೀ ಅಂತರದಲ್ಲಿರುವ ಅಚಾನ್​ ಗ್ರಾಮದಲ್ಲಿ ಈ ಹಳೆಯ ದೇವಸ್ಥಾನ ಇದೆ.

ಉಗ್ರರ ದಾಳಿಯ ನಂತರ ಕಾಶ್ಮೀರ ಭಾಗದಲ್ಲಿ ಉಂಟಾಗಿದ್ದ ಉದ್ವಿಘ್ನ ಪರಿಸ್ಥಿತಿಯಿಂದಾಗಿ ದೇವಸ್ಥಾನದ ಮರು ಸ್ಥಾಪನೆಯ ಕೆಲಸ ಸ್ಥಗಿತಗೊಂಡಿತ್ತು. ಆದರೆ, ಮಹಾಶಿವರಾತ್ರಿಯ ಶುಭದಿನದಂದು ಮರುಸ್ಥಾಪನೆ ಕೆಲಸ ಮತ್ತೆ ಶುರುವಾಗಿದೆ.

ವಿಶೇಷ ಅಂದರೆ ದೇವಸ್ಥಾನದ ಪಕ್ಕದಲ್ಲೇ ಜಾಮಾ ಮಸೀದಿ ಇದ್ದು, ದೇವಸ್ಥಾನ ನಿರ್ಮಾಣದ ವೇಳೆ ಕಾಶ್ಮೀರದ ಪ್ರಸಿದ್ಧ ಖಾವಾ ಟೀ ಅನ್ನು ಎಲ್ಲರಿಗೂ ಹಂಚುವ ಮೂಲಕ ಮುಸ್ಲಿಂರು ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಮುಸ್ಲಿಂರ ಅಜಾನ್ ನಡೆಯುವ ವೇಳೆ ದೇವಸ್ಥಾನದ ಗಂಟೆ ಶಬ್ಧ ಕೇಳಬೇಕು ಎಂಬುದು ಮುಸ್ಲಿಂರ ಅಭಿಮತವಾಗಿದೆ.​

ನಮ್ಮ ಹೃದಯಪೂರ್ವಕ ಆಸೆ ಏನೆಂದರೆ ಹಳೆಯ ದಿನಗಳು ಮತ್ತೆ ಮರುಕಳಿಸಬೇಕು. 30 ವರ್ಷದ ಹಿಂದೆ ಒಂದೆಡೆ ದೇವಸ್ಥಾನದ ಗಂಟೆ ಶಬ್ಧ ಮೊಳಗುತ್ತಿದ್ದರೆ, ಮತ್ತೊಂದೆಡೆ ನಮ್ಮ ಮಸೀದಿಯಿಂದ ಅಜಾನ್​ ಕೇಳಿಬರುತ್ತಿತ್ತು ಎಂದು ಮಹಮ್ಮದ್​ ಯೂನಿಸ್​ ಎಂಬುವವರು ಸ್ಥಳೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ನೆರೆಯವರಾಗಿರುವ ಮುಸ್ಲಿಂರು ದೇವಸ್ಥಾನದ ಮೇಲೆ ಒಳ್ಳೆಯ ಗೌರವ ಇಟ್ಟುಕೊಂಡಿರುವುದರಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. ನಾವಿಲ್ಲಿ ಸಹೋದರರಂತೆ ಬದುಕುತ್ತಿದ್ದೇವೆ ಎಂದು ಮತ್ತೊಬ್ಬ ಸ್ಥಳೀಯ ಭೂಷಣ್​ ಲಾಲ್​ ತಿಳಿಸಿದ್ದಾರೆ. (ಏಜೆನ್ಸೀಸ್​)