ಪೂಜಾಫಲದಿಂದ ಯಥೇಚ್ಛ ನೀರು!

ಕಿನ್ನಿಗೋಳಿ: ಒಣಗುವ ಹಂತದಲಿದ್ದ ಜಮೀನಿನಲ್ಲಿ ದೈವ-ದೇವರುಗಳ ಪೂಜೆ ಬಳಿಕ 5 ಕೊಳವೆ ಬಾವಿಗಳಲ್ಲಿಯೂ ಯಥೇಚ್ಚ ನೀರು ಲಭಿಸಿದೆ.
ಕಿನ್ನಿಗೋಳಿ ಸಮೀಪದ ಕಲ್ಲಮುಂಡ್ಕೂರು ಪಂಚಾಯತಿನ ನಿಡ್ಡೋಡಿಯ ಗುಂಡೆಲ್ ಎಂಬ ಗ್ರಾಮದಲ್ಲಿ ನಡೆದ ಈ ಕುತೂಹಲಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿಕ್ಟರ್ ಡಿಸಿಲ್ವ ಎಂಬುವವರು ತಮ್ಮ 7 ಎಕರೆ ಜಮೀನಿನಲ್ಲಿ ತೆಂಗು, ಕಂಗು, ಭತ್ತ ಕೃಷಿ ಮಾಡುತ್ತಿದ್ದಾರೆ. ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿ ಬಾವಿಯಲ್ಲಿ ನೀರಿನ ಕೊರತೆ ಎದುರಾಯಿತು. 600 ಅಡಿವರೆಗೆ ಕೊಳವೆ ಬಾವಿ ತೋಡಿದರೂ ನೀರು ಸಿಗಲಿಲ್ಲ. ಇನ್ನೊಂದು ಕೊಳವೆ ಬಾವಿಯನ್ನು 700 ಅಡಿ ಅಳಕ್ಕೆ ಕೊರೆದರೂ, ಹನಿ ನೀರು ಸಿಗಲಿಲ್ಲ. ಛಲ ಬಿಡದ ವಿಕ್ಟರ್ ಮತ್ತೆರಡು ಕೊಳವೆಬಾವಿ ತೋಡಿದರು. ಅಲ್ಲಿಯೂ ಅದೇ ಸ್ಥಿತಿ. 4 ಬೋರ್‌ವೆಲ್‌ಗಳಿಗಾಗಿ 5 ಲಕ್ಷ ರೂ. ಖರ್ಚು ಮಾಡಿದ್ದ ಅವರು ಅಷ್ಟರಲ್ಲಿ ಮಾನಸಿಕವಾಗಿ ಕುಗ್ಗಿದ್ದರು.

ಕೊನೆಗೆ, ಬೋರ್‌ವೆಲ್ ಮಾಲೀಕ ಪ್ರಕಾಶ್ ಸಲಹೆಯಂತೆ, ಬೆಳ್ತಂಗಡಿಯ ಜಗದೀಶ್ ಶಾಂತಿ ಅವರನ್ನು ಸಂಪರ್ಕಿಸಲಾಯಿತು. ಜಮೀನು ನೋಡಿದ ಜಗದೀಶ್ ಶಾಂತಿಯವರು, ಇಲ್ಲಿ ನಾಗ ಮತ್ತು ಜುಮಾದಿ ದೈವದ ದೋಷವಿದೆ. ಜತೆಗೆ, ಕೊಡಮಣಿತ್ತಾಯ ದೈವದ ಸವಾರಿಯೂ ಇದೆ ಎಂದರು. ಪರಿಹಾರ ರೂಪವಾಗಿ ನಾಗ ಪೂಜೆ, ಜುಮಾದಿ ದೈವಕ್ಕೆ ಸೀಯಾಳ, ಕೊಡಮಣಿತ್ತಾಯ ದೈವಕ್ಕೆ ಹಾಲು ನೀಡಲು ಬೆಳ್ಳಿಯ ಲೋಟ ಕೊಡಬೇಕು. ಧರ್ಮಸ್ಥಳ, ಸುಬ್ರಹ್ಮಣ್ಯದಲ್ಲಿ ಪ್ರಾರ್ಥನೆ ಮಾಡಬೇಕು. ಕಾರ್ಕಳ, ಮಂಗಳೂರು ಮತ್ತು ತಮ್ಮ ಗ್ರಾಮದ ಚರ್ಚ್‌ಗಳಲ್ಲಿಯೂ ಪೂಜೆ ಸಲ್ಲಿಸಬೇಕು. ಬೇಕಾದಷ್ಟು ನೀರು ಸಿಗುತ್ತದೆ ಎಂದರು. ವಿಕ್ಟರ್ ಮತ್ತೊಮ್ಮೆ ಕೊಳವೆ ಬಾವಿ ಕೊರೆದರು. ಶಾಂತಿಯವರು ಹೇಳಿದ್ದಂತೆ 600 ಅಡಿ ತೋಡಿದಾಗ ಯಥೇಚ್ಛ ನೀರು ಲಭಿಸಿತು. ವಿಕ್ಟರ್ ಮನೆಯಲ್ಲಿ ನಡೆದ ಈ ಪವಾಡ ನೋಡಲು ಸಾಕಷ್ಟು ಜನ ಬರುತ್ತಿದ್ದಾರೆ.

ಕಲ್ಲಿನ ಮೇಲೆ ನಾಗ ಪ್ರತ್ಯಕ್ಷ!: ನೀರು ಲಭಿಸಿದ ಮರುದಿನ ಕೊಳವೆ ಬಾವಿ ಸಮೀಪ ಕಲ್ಲಿನ ಮೇಲೆ ಸರ್ಪ ಮಲಗಿತ್ತು. ಭಯಗೊಂಡ ವಿಕ್ಟರ್, ಶಾಂತಿಯವರಿಗೆ ಕರೆ ಮಾಡಿದರು. ‘ನಾಗ ದೇವರೇ ಬಂದಿದ್ದಾರೆ, ತಾವು ಪ್ರಾರ್ಥಿಸಿಕೊಂಡಂತೆ ಪೂಜೆ ನೆರವೇರಿಸಿದರೆ ಸರ್ಪ ಹೋಗಲಿದೆ ಎಂದರು. ಮೇ ಮೊದಲ ವಾರದಲ್ಲಿ ನಾಗನಿಗೆ ಅಶ್ಲೇಷ ಬಲಿ ಮತ್ತಿತರ ಪೂಜೆಯನ್ನು ಜಗದೀಶ್ ಶಾಂತಿ ನೇತೃತ್ವದಲ್ಲಿ ನೆರವೇರಿಸಲಾಯಿತು. ಪೂಜೆ ನಂತರ ಜಗದೀಶ್ ಶಾಂತಿಯವರ ಹೇಳಿಕೆಯಂತೆ ಹಿಂದೆ ತೋಡಿದ್ದ ಎಲ್ಲ ಕೊಳವೆ ಬಾವಿಗಳಲ್ಲಿಯೂ ನೀರು ಲಭಿಸಿತು.

ದೈವೀಶಕ್ತಿಯ ಪ್ರಭಾವದಿಂದ ಸಮಸ್ಯೆ?: ವಿಕ್ಟರ್ ಅವರ ಹಿರಿಯರಿಗೆ ಭೂ ಸುಧಾರಣೆ ಕಾಯ್ದೆಯಂತೆ ಜಮೀನು ಸಿಕ್ಕಿದಾಗ, ಮೂಲ ಮಾಲೀಕ ಶಿವರಾಮ ಹೆಗ್ಡೆ ಪೂಜೆ ಕಷ್ಟ ಆಗಬಹುದೆಂದು ಇಲ್ಲಿದ್ದ ದೈವ ದೇವರುಗಳನ್ನು ಸ್ಥಳಾಂತರಿಸಿದ್ದರು. ಜಮೀನಿಗೆ ಸಂಬಂಧಿಸಿದ ದೈವ ಶಕ್ತಿಯಿಂದ ವಿಕ್ಟರ್ ಅವರಿಗೆ ನೀರಿನ ಸಮಸ್ಯೆ ಬಂದಿತ್ತು ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ.

 600 ಅಡಿಯಷ್ಟು ಅಳಕ್ಕೆ ಕೊಳವೆ ಬಾವಿ ತೊಡಿದರೂ ನೀರು ಸಿಗದಿದ್ದಾಗ ದೈವ ದೇವರ ಪ್ರಾರ್ಥನೆ ಮಾಡಿದೆ. ನೀರು ಸಿಕ್ಕಿದ್ದು ಪವಾಡ. ಕೊಳವೆ ಬಾವಿ ಕೊರೆಯಲು 5 ಲಕ್ಷ ರೂ.ವರೆಗೆ ಖರ್ಚು ಮಾಡಿದ್ದೇನೆ. 3 ಲಕ್ಷ ರೂ.ಸಾಲ ಮಾಡಿದ್ದೇನೆ. ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮಸ್ಯೆ ಇದ್ದವರಿಗೆ ಉಚಿತವಾಗಿ ನೀರು ನೀಡಲು ಸಿದ್ಧ.
ವಿಕ್ಟರ್ ಡಿಸಿಲ್ವ, ಜಮೀನು ಮಾಲೀಕ

ಪೂಜೆಯಿಂದ ನೀರಿಲ್ಲದ ಕೊಳವೆ ಬಾವಿಯಲ್ಲಿ ಮೇಲ್ಮಟ್ಟದಲ್ಲೇ ನೀರು ಕಂಡುಬಂದ್ದು ಪವಾಡ. ಅಗತ್ಯವಿದ್ದರೆ ಪಂಚಾಯತ್‌ಗೆ ನೀರು ಕೊಡಲು ವಿಕ್ಟರ್ ಮುಂದಾಗಿದ್ದಾರೆ. ನೀರಿನ ಅಗತ್ಯವಿದ್ದರೆ ಈ ಬಗ್ಗೆ ಚಿಂತಿಸಲಾಗುವುದು.
ಸುಂದರ ಪೂಜಾರಿ ಉಪಾಧ್ಯಕ್ಷ, ಕಲ್ಲಮುಂಡ್ಕೂರು ಗ್ರಾ.ಪಂ.

Leave a Reply

Your email address will not be published. Required fields are marked *