ಅರಸೀಕೆರೆ: ರಾಷ್ಟ್ರೀಯ ಸ್ವಯಂಸೇವಕ ಸಂಘ, ಬಜರಂಗದಳ, ವಿಶ್ವ ಹಿಂದು ಪರಿಷತ್, ಹಿರಿಯ ನಾಗರಿಕರ ವೇದಿಕೆ, ರೈತಸಂಘ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ವಕ್ಫ್ ಜನವಿರೋಧಿ ನೀತಿ ಖಂಡಿಸಿ ಕರೆ ನೀಡಲಾಗಿದ್ದ ಪ್ರತಿಭಟನೆಗೆ ಭಾರಿ ಜನಬೆಂಬಲ ವ್ಯಕ್ತವಾಯಿತು.
ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಬಾಗಿಲು ಮುಚ್ಚಿ ಹೋರಾಟಕ್ಕೆ ಧುಮುಕಿದ್ದರು. ಹೋಟೆಲ್, ದಿನಸಿ, ಸೇರಿದಂತೆ ಎಲ್ಲ ಬಗೆಯ ವ್ಯಾಪಾರ -ವಹಿವಾಟು ಸಂಪೂರ್ಣ ಸ್ತಬ್ಧವಾಗಿತ್ತು. ಹಾಲು, ಹಣ್ಣು, ಔಷಧ, ತರಕಾರಿ ವ್ಯಾಪಾರ ಸಹಜವಾಗಿತ್ತು. ವಾಹನ ಸಂಚಾರ ವಿರಳವಾಗಿದ್ದರೆ, ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಯಳನಡು ಜ್ಞಾನಪ್ರಭು ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ, ಕೋಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ, ಡಿ.ಎಂ.ಕುರ್ಕೆ ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಶ್ರೀಕಾಂತ್ ನವಲಗುಂದ ಇನ್ನಿತರರ ನೇತೃತ್ವದಲ್ಲಿ ಗರುಡನಗಿರಿ ರಸ್ತೆಗೆ ಹೊಂದಿಕೊಂಡಿರುವ ಕರಿಯಮ್ಮ ದೇವಿ ದೇಗುಲದ ಆವರಣದಿಂದ ಬ್ಯಾನರ್, ಕೇಸರಿ ಬಾವುಟ ಹಿಡಿದ ಪ್ರತಿಭಟನಾಕಾರರು ವಕ್ಫ್ ಬೋರ್ಡ್ ರದ್ದುಗೊಳಿಸುವಂತೆ ಆಗ್ರಹಿಸಿದರು.
ಶ್ಯಾನುಭೋಗರ ಬೀದಿ, ಪೇಟೆಬೀದಿ ಮಾರ್ಗವಾಗಿ ಕೇಸರಿ ದ್ವಜ ಹಿಡಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ಬದಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲ ಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರು ಪರದಾಡುವಂತಾಯಿತು. ನ್ಯಾಯಾಲಯದ ಕಲಾಪದಿಂದ ಹೊರಗುಳಿದ ವಕೀಲರು ಸಹ ಪ್ರತಿಭಟನೆಗೆ ಸಾಥ್ ನೀಡಿದರು. ಜತೆಗೆ ಬೈಕ್ ರ‌್ಯಾಲಿ ನಡೆಸಿ ಬೆಂಬಲ ಸೂಚಿಸಿದರು.
ವಕ್ಪ್ ವಿರೋಧಿ ಹೋರಾಟದಲ್ಲಿ ನಿವೃತ್ತ ಸೈನಿಕರು, ಜಾಹ್ನ್ನವಿ ಸಂತೋಷ್, ಸುಧಾ ಕಲ್ಯಾಣ್ ಒಳಗೊಂಡಂತೆ ನೂರಾರು ಮಹಿಳೆಯರು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ರೈತಸಂಘದ ಬೋರನಕೊಪ್ಪಲು ಶಿವಲಿಂಗಪ್ಪ ಮೊದಲಾದವರು ಮಾತನಾಡಿ, ಕೇಂದ್ರ ಸರ್ಕಾರ ಕೂಡಲೇ ವಕ್ಫ್ ಬೋರ್ಡ್ ರದ್ದುಗೊಳಿಸಬೇಕು. ರಾಜ್ಯದಲ್ಲಿ ಒಂದಿಂಚು ಭೂಮಿ ಬಿಟ್ಟುಕೊಡುವ ಪ್ರಶ್ನೆಯಿಲ್ಲ ಎಂದು ಕಿಡಿಕಾರಿದರು.