More

    ಹಾನಗಲ್ಲ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

    ಹಾನಗಲ್ಲ: ಪಟ್ಟಣದಲ್ಲಿ ಹಾದು ಹೋಗಿರುವ ತಡಸ-ಶಿವಮೊಗ್ಗ ಹೆದ್ದಾರಿಯನ್ನು ಅಗಲೀಕರಣ ಮಾಡುವುದರ ಜತೆಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಬುಧವಾರ ಕರೆ ನೀಡಿದ್ದ ಹಾನಗಲ್ಲ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

    ಬೆಳಗ್ಗೆ 10 ಗಂಟೆಯಿಂದ ಸಂಜೆವರೆಗೆ ಪಟ್ಟಣದ ಎಲ್ಲ ವ್ಯಾಪಾರಸ್ಥರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರು. ಕುಮಾರೇಶ್ವರ ಮಠದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಸಾರ್ವಜನಿಕರು ನಂತರ ತಹಸೀಲ್ದಾರ್ ಶಶಿಧರ ಮಾಡ್ಯಾಳ ಅವರಿಗೆ ಮನವಿ ಸಲ್ಲಿಸಿದರು.

    ಕರವೇ ಅಧ್ಯಕ್ಷ ಸಿಕಂದರ ವಾಲಿಕಾರ ಮಾತನಾಡಿ, ಹಲವು ವರ್ಷಗಳಿಂದ ಹಾಳಾಗಿರುವ ತಡಸ-ಶಿವಮೊಗ್ಗ ಹೆದ್ದಾರಿಯನ್ನು ಲೋಕೋಪಯೋಗಿ ಇಲಾಖೆ ದುರಸ್ತಿಗೊಳಿಸುತ್ತಿಲ್ಲ. ಪ್ರತಿದಿನ ಅಪಘಾತಗಳು ನಡೆದರೂ ಕ್ರಮ ಕೈಗೊಳ್ಳುತ್ತಿಲ್ಲ. ರಸ್ತೆಯಲ್ಲಿನ ಡಾಂಬರಿನ ಗುಡ್ಡೆಗಳಿಂದ ಬೈಕ್ ಅಪಘಾತ ಸಂಭವಿಸುತ್ತಿವೆ.

    ಶಿವಮೊಗ್ಗ, ಸಾಗರ ಮುಂತಾದ ಕಡೆಗಳಿಂದ ಹುಬ್ಬಳ್ಳಿಗೆ ತೆರಳುವ ಬೃಹತ್ ವಾಹನಗಳು ಹತ್ತಿಪ್ಪತ್ತು ಟನ್ ಭಾರದೊಂದಿಗೆ ಸಂಚರಿಸುತ್ತವೆ. ರಸ್ತೆ ಕಿರಿದಾಗಿರುವುದರಿಂದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಕೂಡಲೇ ಅಗಲೀಕರಣ ಪ್ರಕ್ರಿಯೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

    ಪ್ರತಿಭಟನೆ ನೇತೃತ್ವವ ಹಿಸಿದ್ದ ಪ್ರಶಾಂತ ಮುಚ್ಚಂಡಿ ಮಾತನಾಡಿ, ಉಳಿದೆಲ್ಲ ತಾಲೂಕುಗಳಂತೆ ಇಲ್ಲೂ ಕೂಡ ರಸ್ತೆ ಅಗಲೀಕರಣಗೊಳ್ಳಬೇಕಿದೆ. ಈಗ ಮಂಜೂರಾಗಿರುವ 5 ಕೋಟಿ ರೂ. ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿದರೆ ಅಪಘಾತಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಪಕ್ಷಾತೀತವಾಗಿ ಎಲ್ಲರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಸ್ತೆ ಕಾಮಗಾರಿ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ, ರಾಜಕೀಯ ಬೆರೆಸದೇ ಸಾರ್ವಜನಿಕ ಹಿತಾಸಕ್ತಿ ಕಾಪಾಡಬೇಕಿದೆ ಎಂದರು.

    ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಎಸ್.ಎಂ. ಕೋತಂಬರಿ, ರಾಮಚಂದ್ರ ಚಿಕ್ಕಣ್ಣನವರ, ಲಲಿತಾ ಅರಳೆಲಿಮಠ, ಗಣೇಶ ಮೂಡ್ಲಿ, ಪಾನವಾಲೆ, ರವಿಚಂದ್ರ ಪುರೋಹಿತ, ಬಸವರಾಜ ಮಟ್ಟಿಮನಿ ಇತರರು ಮಾತನಾಡಿದರು.
    ತಹಸೀಲ್ದಾರ್ ಶಶಿಧರ ಮಾಡ್ಯಾಳ ಮನವಿ ಸ್ವೀಕರಿಸಿ, ರಸ್ತೆ ಅಭಿವೃದ್ಧಿ ಕುರಿತಂತೆ ಜಿಲ್ಲಾಡಳಿತದ ಗಮನ ಸೆಳೆಯಲಾಗಿದೆ. ಇನ್ನೆರಡು ದಿನಗಳಲ್ಲಿ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಸಭೆ ಕರೆದು ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

    ವಕೀಲರ ಸಂಘ, ರೈತ ಸಂಘ, ಮಹಿಳಾ ಸಂಘಟನೆ, ಕರವೇ, ಬಟ್ಟೆ ಅಂಗಡಿ ಮಾಲೀಕರ ಸಂಘ, ಕಿರಾಣಿ ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ಆಟೋ ರಿಕ್ಷಾ ಚಾಲಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಸರಾಫ ಸಂಘ, ಬೇಕರಿ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಸಹಕರಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts