ಉತ್ತಮ ವ್ಯಕ್ತಿತ್ವ ಚಿರಸ್ಥಾಯಿ

ಭಟ್ಕಳ: ಉತ್ತಮ ವ್ಯಕ್ತಿತ್ವದವರು ಎಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ ಎಂದು ಜಿ.ಎಸ್. ಕಾಮತ್ ಅವರನ್ನು ಉದಾಹರಿಸಿ ಗೋಕರ್ಣ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿ ಭಕ್ತರನ್ನು ಹರಸಿದರು. ಭಟ್ಕಳದ ವಡೇರ ಮಠದಲ್ಲಿ ಅಧಿಕ ಮಾಸದ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಭಕ್ತರಿಗೆ ಅಶೀರ್ವಚನ ನೀಡಿದರು. ಹರಿನಾಮ ಸ್ಮರಣೆ ಶಾರೀರಕ ಮತ್ತು ಮಾನಸಿಕ ವ್ಯಾಧಿಯನ್ನು ದೂರವಿಡುತ್ತದೆ. ಹರಿನಾಮವೊಂದರಿಂದಲೆ ಶರೀರದ ಸ್ನಾಯುಗಳು ಜಾಗೃತವಾಗಿ ಅಂತಃಚೇತನ ಸುಖಚೇತನ ದೊರೆಯುತ್ತದೆ. ಜೀವನದ ಮೌಲ್ಯ ವೃದ್ಧಿಯಾಗುತ್ತದೆ. ಸತ್ಕರ್ಮ ಸ್ಮರಣೆಗೆ ಯೋಗ್ಯ ಸ್ವಾಮೀಜಿಗಳ ಸಂಚಲನದಿಂದ ಸಂಸ್ಕಾರ ದೊರೆಯುತ್ತದೆ ಎಂದರು.

ಕಿರಿಯ ಶ್ರೀಗಳಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮಾತನಾಡಿ, ಭಟ್ಕಳದಲ್ಲಿ ಯುವಪೀಳಿಗೆ ಉತ್ತಮ ಸಂಸ್ಕಾರ ಮೈಗೂಡುಸಿಕೊಂಡಿದೆ. ಹರಿನಾಮದಿಂದ ಸಂಕಷ್ಟ ದೂರವಾಗುತ್ತದೆ ಎಂದರು. ಸ್ವಯಂಸೇವಕರಿಗೆ ಶ್ರೀಗಳು ಅನುಗ್ರಹ ಪ್ರಸಾದ ನೀಡಿದರು. ಹಾಂಗ್ಯೋ ಐಸ್ಕ್ರೀಮ್ ನಿರ್ದೇಶಕ ಪ್ರದೀಪ ಪೈ, ಭಟ್ಕಳ ಎಜುಕೇಶನ್ ಟ್ರಸ್ಟಿ ಮ್ಯಾನೆಜರ್ ರಾಜೇಶ ನಾಯಕ, ಎಸ್. ಆರ್. ನಾಯಕ, ಸುಬ್ರಾಯ ಕಾಮತ, ನಾಗೇಶ ಕಾಮತ, ಹರೀಶ್ಚಂದ್ರ ಕಾಮತ, ವೇ.ಮೂ. ರಮೇಶ ಭಟ್, ಅಚ್ಯುತ್ ಕಾಮತ್, ವಿನಾಯಕ್ ಭಟ್, ಗಿರಿಧರ ನಾಯಕ, ಶಿರಸಿಯ ಭಕ್ತರು ಇದ್ದರು. ಝೇಂಕಾರ ಮೆಲೋಡೀಸ್​ನ ಪ್ರಸನ್ನ ಪ್ರಭು ಮಾತನಾಡಿ, ಸ್ವಾಮೀಜಿಗಳ ಆಗಮನದಿಂದ ಗ್ರಾಮದಲ್ಲೆಲ್ಲ ಸಾತ್ವಿಕ ಗುಣಗಳು ಪಸರಿಸುತ್ತವೆ. ಯುವಪೀಳಿಗೆಗೆ ಸಂಸ್ಕಾರ, ಧರ್ಮ, ಅನುಷ್ಠಾನದ ಮಾಹಿತಿ ಲಭಿಸುತ್ತದೆ ಎಂದರು. ಉಭಯ ಶ್ರೀಗಳನ್ನು ಶಿರಸಿಗೆ ಬೀಳ್ಕೊಡಲಾಯಿತು.

Leave a Reply

Your email address will not be published. Required fields are marked *