ಈಜುಕೊಳಕ್ಕೆ ಉತ್ತಮ ಆದಾಯ

ಅವಿನ್ ಶೆಟ್ಟಿ ಉಡುಪಿ

ಬೇಸಿಗೆ ಬಿಸಿಲ ತಾಪ ತೀರಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದ ಈಜುಕೊಳಕ್ಕೆ ಬರುತ್ತಿದ್ದ ಪರಿಣಾಮ ಎರಡು ತಿಂಗಳಿನಿಂದ ಈಜುಕೊಳ ಉತ್ತಮ ಆದಾಯ ಗಳಿಸಿದೆ.

ನಾಲ್ಕು ವರ್ಷಗಳ ಹಿಂದೆ ಎರಡು ಕೋಟಿ ರೂ. ವೆಚ್ಚದಲ್ಲಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣ ಬಳಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ನಿರ್ಮಿಸಿದ ಈಜುಕೊಳಕ್ಕೆ ಬೇಸಿಗೆಯ ಎರಡು ತಿಂಗಳಲ್ಲಿ ಸಾಕಷ್ಟು ಬೇಡಿಕೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು, ಯುವಕರು ಸೇರಿ ಎಲ್ಲ ವಯೋಮಿತಿಯವರೂ ಕೊಳದಲ್ಲಿ ಕಸರತ್ತು ಮಾಡಿ ಸಂಭ್ರಮಿಸುತ್ತಿದ್ದಾರೆ.

ಮಣಿಪಾಲ ಹಾಗೂ ಉಡುಪಿಯಲ್ಲಿ ಹಲವು ಖಾಸಗಿ ಈಜು ಕೊಳಗಳಿವೆಯಾದರೂ, ನೀರಿನ ಕೊರತೆ ಹಿನ್ನೆಲೆಯಲ್ಲಿ ಅವುಗಳನ್ನು ಬಂದ್ ಮಾಡಲಾಗಿದ್ದು, ಉಡುಪಿಯಲ್ಲಿ ಸರ್ಕಾರಿ ಈಜುಕೊಳ ಒಂದೇ ಕಾರ್ಯಾಚರಿಸುತ್ತಿದೆ. ಇದರಿಂದ ನಗರದ ಜನರಿಗೆ ಈ ಒಂದೇ ಕೊಳ ಆಸರೆಯಾಗಿದೆ.

ಟ್ಯಾಂಕರ್ ಮೂಲಕ ನೀರು ಪೂರೈಕೆ: ಪ್ರತಿ ಬೇಸಿಗೆಯಲ್ಲಿ ಈಜುಕೊಳಗಳಿಗೆ ನೀರಿನ ಅಭಾವ ಪ್ರಮುಖ ಸಮಸ್ಯೆಯಾಗಿ ಕಾಡುತ್ತದೆ. ಈಜುಕೊಳಕ್ಕೆ ಅಜ್ಜರಕಾಡು ಜಿಲ್ಲಾಧಿಕಾರಿ ಮನೆ ಸಮೀಪದ ಸರ್ಕಾರಿ ಬಾವಿ ಮತ್ತು ಈಜುಕೊಳ ಬಳಿ ಇರುವ ಇಲಾಖೆ ಕೊಳವೆ ಬಾವಿಯ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ ಬೇಸಿಗೆಯಲ್ಲಿ ಇಲ್ಲಿನ ನೀರು ಬತ್ತಿರುವುದರಿಂದ ಟ್ಯಾಂಕರ್ ನೀರು ಅನಿವಾರ್ಯ ಎನ್ನುತ್ತಾರೆ ಅಧಿಕಾರಿಗಳು.

ವಾರಕ್ಕೊಮ್ಮೆ ನೀರು ಬದಲು: ಈಜುಕೊಳದ ನೀರು ವಾರಕ್ಕೊಮ್ಮೆ ಬದಲಾಯಿಸಲಾಗುತ್ತದೆ. ಈಜುಕೊಳ ತುಂಬಲು 10 ಲಕ್ಷ ಲೀಟರ್ ನೀರು ಬೇಕು. ಪ್ರತಿದಿನ ಕೊಳದ ನೀರನ್ನು ರಾಸಾಯನಿಕ ಬಳಸಿ ಶುದ್ಧೀಕರಿಸಲಾಗುತ್ತಿದೆ. ಬೇಸಿಗೆಯಲ್ಲಿ ಪ್ರತಿದಿನ ಇಂದ್ರಾಳಿಯಿಂದ ಟ್ಯಾಂಕರ್‌ನಲ್ಲಿ 3-4 ಟ್ರಿಪ್‌ಗಳಲ್ಲಿ 48 ಸಾವಿರ ಲೀಟರ್ ನೀರು ತಂದು ತುಂಬಿಸಲಾಗುತ್ತಿದೆ. ಇದರಲ್ಲಿ ಸುಮಾರು 12 ಸಾವಿರ ಲೀಟರ್‌ನಷ್ಟು ನೀರು ಸ್ನಾನಗೃಹಕ್ಕೆ ಬಳಕೆಯಾಗುತ್ತದೆ. ಟ್ಯಾಂಕರ್‌ನ ಒಂದು ಟ್ರಿಪ್‌ಗೆ 1500 ರೂ. ಹಣ ಪಾವತಿಸಿ ನೀರು ತರಿಸಿಕೊಳ್ಳಲಾಗುತ್ತಿದೆ. ಪ್ರತಿದಿನ ನೀರಿಗಾಗಿ 4500 ರೂ. ವೆಚ್ಚವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಎರಡು ತಿಂಗಳಲ್ಲಿ 8-10 ಲಕ್ಷ ರೂ. ಆದಾಯ: ಈಜುಕೊಳಕ್ಕೆ ಸಮಯ ನಿಗದಿಪಡಿಸಲಾಗಿದ್ದು, ಪ್ರತಿಯೊಬ್ಬರಿಗೂ 30 ರೂ. ಪ್ರವೇಶ ಶುಲ್ಕವಿದೆ. ಈಜುಕೊಳಕ್ಕೆ ಭೇಟಿ ಕೊಡುವವರ ಸಂಖ್ಯೆ ಬೇರೆ ತಿಂಗಳಲ್ಲಿ 150-250 ಸರಾಸರಿ ಇದ್ದರೆ ಏಪ್ರಿಲ್, ಮೇ ತಿಂಗಳಲ್ಲಿ 400-450ಕ್ಕೆ ಏರಿಕೆಯಾಗುತ್ತದೆ. ಏಪ್ರಿಲ್ ಮತ್ತು ಮೇ ಹೊರತುಪಡಿಸಿದರೆ ಉಳಿದ ತಿಂಗಳಲ್ಲಿ ಈಜುಕೊಳದ ಆದಾಯ 1-2 ಲಕ್ಷ ರೂ. ಆಗುತ್ತದೆ. ಏಪ್ರಿಲ್ -ಮೇ ತಿಂಗಳಲ್ಲಿ ಸುಮಾರು 8-10 ಲಕ್ಷ ರೂ. ಆದಾಯ ಬರುತ್ತದೆ. ಎರಡು ತಿಂಗಳಲ್ಲಿ ಇಷ್ಟೇ ಮೊತ್ತದ ಆದಾಯ ಗಳಿಸಲಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮೂರು ಹಂತದಲ್ಲಿ ಈಜು ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸುಮಾರು 150ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು. ಇವರಿಗೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಜು ಕೊಳ ಪ್ರವೇಶ ಶುಲ್ಕದಿಂದ ಸಂಗ್ರಹವಾದ ಹಣವನ್ನು ಈಜುಕೊಳದ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ. ಕಳೆದ ವರ್ಷ ಲೋಕೋಪಯೋಗಿ ಇಲಾಖೆ ಮೂಲಕ 12 ಲಕ್ಷ ರೂ. ವೆಚ್ಚದಲ್ಲಿ ಈಜುಕೊಳದ ದುರಸ್ತಿ ಕಾರ್ಯ ಮಾಡಲಾಗಿತ್ತು. ಬೇಸಿಗೆಯಲ್ಲೂ ಈಜುಕೊಳ ಕಾರ್ಯಾಚರಿಸಲು ಇಂದ್ರಾಳಿಯಿಂದ ಟ್ಯಾಂಕರ್ ಮೂಲಕ ನೀರು ತರಿಸಲಾಗುತ್ತದೆ. ವಾರಕ್ಕೊಮ್ಮೆ ನೀರು ಬದಲಾಯಿಸಿದರೂ ನಿರಂತರ ಶುದ್ಧೀಕರಣ ಮಾಡಲಾಗುತ್ತದೆ.
ಡಾ.ರೋಶನ್ ಕುಮಾರ್ ಶೆಟ್ಟಿ ಸಹಾಯಕ ನಿರ್ದೇಶಕ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ.

Leave a Reply

Your email address will not be published. Required fields are marked *