ಹಿರೇಕೆರೂರ: ಮೀನುಗಾರಿಕೆ ಉತ್ತಮ ಆದಾಯ ತರುವ ಕಸುಬಾಗಿದ್ದು, ಈ ಬಗ್ಗೆ ಹೆಚ್ಚಿನ ಆಸಕ್ತಿ ಮುಖ್ಯವಾಗಿದೆ ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಕೊಪ್ಪದ ಹೇಳಿದರು.
ತಾಲೂಕಿನ ಚಿಕ್ಕೇರೂರ ಗ್ರಾಮದಲ್ಲಿ ಜಿಲ್ಲಾ ಮೀನುಗಾರಿಕೆ ಇಲಾಖೆ, ಸ್ಕೂಡ್‌ವೇಸ್ ಸಂಪನ್ಮೂಲ ಸಂಸ್ಥೆ ಶಿರಸಿ ಹಾಗೂ ಕಾರ್ಪ್ ಫಿಶ್ ರೈತ ಉತ್ಪಾದಕ ಕಂಪನಿ ಚಿಕ್ಕೇರೂರ ವತಿಯಿಂದ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕಂಪನಿಗಳು ಮತ್ತು ಸಹಕಾರಿ ಸಂಘಗಳು ಮೀನಿನ ಉತ್ಪನ್ನಗಳನ್ನ ಮೌಲ್ಯವರ್ಧನೆ ಮಾಡುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು. ಇದಕ್ಕೆ ಇಲಾಖೆಯ ಸೌಲಭ್ಯ ಬಳಸಿಕೊಳ್ಳಬೇಕು ಎಂದರು.
ಮಿನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಸ್.ಪಿ. ದಂದೂರ ಮಾತನಾಡಿ, ಆರ್ಥಿಕ ಸ್ವಾವಲಂಬನೆ ಸಾಧಿಸಲು ಮೀನುಗಾರಿಕೆ ಕೃಷಿಗೆ ಮುಂದಾಗಬೇಕು ಎಂದರು.
ಶಿರಸಿಯ ಸ್ಕೂಡ್‌ವೆಸ್ ಸಂಪನ್ಮೂಲ ಸಂಸ್ಥೆಯ ಜಿಲ್ಲಾ ಸಂಯೋಜಕ ಜಗದೀಶ ಮಡಿವಾಳರ ಮಾತನಾಡಿ, ಮೀನು ಕೃಷಿಕರಿಗೆ ಹಾಗೂ ಮೀನುಗಾರರಿಗೆ ಉತ್ತಮ ಲಾಭದಾಯಕ ಉದ್ಯಮ. ಕಂಪನಿ ಉತ್ತಮ ಮಾರುಕಟ್ಟೆ ಸಂಪರ್ಕ ಹೊಂದುವುದು ಪ್ರಮುಖವಾಗಿದೆ ಎಂದರು.
ಹಾವೇರಿ, ಗದಗ ಜಿಲ್ಲಾ ಸಂಯೋಜಕರಾದ ನರಸಪ್ಪ ಮಡಿವಾಳ, ಕಂಪನಿ ಅಧ್ಯಕ್ಷ ಸಿಕಂದರ್ ಎಂ ಗಾಸಿ, ಸಹಾಯಕ ಮೀನುಗಾರಿಕಾ ನಿರ್ದೇಶಕ ವಿನಾಯಕ ಬೇವಿನಹಳ್ಳಿ, ಮೀನುಗಾರಿಕೆ ಸಹಕಾರಿ ಸಂಘದ ಪ್ರವರ್ತಕ ರಿಯಾಜ್ ಘಾಸಿ ಮಾತನಾಡಿದರು.
ಮೀನುಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ಆಸ್ಕರಲಿ ಬಳ್ಳಾರಿ ಹಾಗೂ ಕಾರ್ಪ್ ಫಿಶ್ ಕಂಪನಿ ನಿರ್ದೇಶಕ ಮಂಡಳಿಯವರು, ಕಂಪನಿ ಮತ್ತು ಮೀನುಗಾರಿಕೆ ಸಂಘದ ಸಿಬ್ಬಂದಿ, ರೈತರು ಮತ್ತು ಸದಸ್ಯರು ಇದ್ದರು.