ಆಯುರ್ವೇದದಿಂದ ಉತ್ತಮ ಆರೋಗ್ಯ

ಮಂಡ್ಯ: ಆಯುರ್ವೇದದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದೆಂಬುದು ಸನಾತನ ಕಾಲದಲ್ಲಿಯೇ ಸಾಬೀತಾಗಿದೆ ಎಂದು ಮರಲಿಂಗನದೊಡ್ಡಿ ಸಿದ್ದಲಿಂಗೇಶ್ವರ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಮರಲಿಂಗನದೊಡ್ಡಿ ಗ್ರಾಮದ ಮಾಧವ ವಿದ್ಯಾಮಂದಿರದ ಆವರಣದಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಆಯೋಜಿಸಿದ್ದ ಆಯುರ್ವೇದ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆಂಗ್ಲ ಪದ್ಧತಿಯ ಔಷಧದಿಂದ ಹೆಚ್ಚು ಅನಾರೋಗ್ಯ ಉಂಟಾಗುತ್ತಿದೆ. ಹಿಂದೆ ಹಿರಿಯರು ಮನೆಯಲ್ಲಿಯೇ ಔಷಧ ತಯಾರಿಸಿಕೊಳ್ಳುತ್ತಿದ್ದರು. ಪ್ರಸ್ತುತ ಸಣ್ಣ ಪುಟ್ಟ ಜ್ವರ, ಕೆಮ್ಮು, ನೆಗಡಿಗೂ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ನಮ್ಮ ಪರಿಸರದಲ್ಲಿಯೇ ಹಲವಾರು ಔಷಧ ಗುಣವುಳ್ಳ ಸಸ್ಯಗಳಿವೆ. ತರಕಾರಿ, ಸೊಪ್ಪು, ಧಾನ್ಯಗಳಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ರೋಗ ಬರುತ್ತದೆ. ಪರಿಸರ ಮತ್ತು ಆಹಾರ ಉತ್ತಮವಾಗಿದ್ದರೆ ಆರೋಗ್ಯದಿಂದ ಇರಬಹುದು ಎಂದರು.

ಸ್ವದೇಶಿ ಜಾಗರಣ ಮಂಚ್‌ನ ಪ್ರಾಂತ ಸಂಚಾಲಕ ಜಗದೀಶ್, ಜಿಲ್ಲಾ ಮಹಿಳಾ ಪ್ರಮುಖರಾದ ರಶ್ಮಿ ವಿಜಯಕುಮಾರ್, ಪ್ರಕೃತಿ ಚಿಕಿತ್ಸಾ ತಜ್ಞ ಡಾ.ಅರುಣ್‌ಕುಮಾರ್ ಇತರರಿದ್ದರು.