ಬಾಳೆಹೊನ್ನೂರು: ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಬಲರಾದರೆ ಸಮಾಜ ಸದೃಢವಾಗಿ ನಿರ್ಮಾಣವಾಗಲಿದೆ ಎಂದು ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ತಮನ್ನಾ ಮುನಾವರ್ ಹೇಳಿದರು.
ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ನಿರ್ಮಲಾ ಕಾನ್ವೆಂಟ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಜ.24ನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಘೋಷಿಸಿದ್ದು, ರಾಷ್ಟ್ರಾದ್ಯಂತ ಹೆಣ್ಣು ಮಕ್ಕಳ ಭ್ರೂಣ ಹತ್ಯೆ, ಕೌಟುಂಬಿಕ ದೌರ್ಜನ್ಯ, ಮಹಿಳೆ ಮತ್ತು ಹೆಣ್ಣು ಮಕ್ಕಳ ನ್ಯೂನ ಪೋಷಣೆ, ಶಿಕ್ಷಣ ಮುಂತಾದ ಸಮಸ್ಯೆಗಳ ಬಗ್ಗೆ ಅರಿವು ನೀಡಲಾಗುತ್ತಿದೆ ಎಂದರು.
ಲಿಂಗ ಅಸಮಾನತೆ ಹೋಗಲಾಡಿಸಿ ಹೆಣ್ಣಿಗೆ ಸಮಾನ ಅವಕಾಶ ಹಾಗೂ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶದಿಂದ ಈ ದಿನ ಆಚರಿಸಲಾಗುತ್ತದೆ. ಹೆಣ್ಣು ಮಕ್ಕಳನ್ನು ಸಮಾಜದಲ್ಲಿ ಸಮಾನತೆಯಿಂದ ಕಂಡು ಅವರಿಗೂ ಮೌಲ್ಯ, ಗೌರವ ತೋರಿಸುವ ಸಲುವಾಗಿ ಆ ಭಾವನೆ ಜನರಲ್ಲಿ ಮೂಡಿಸಲು ಈ ದಿನ ಪೂರಕವಾಗಿದೆ ಎಂದರು.
ಹೆಣ್ಣುಮಕ್ಕಳ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ, ಸುಕನ್ಯ ಸಮೃದ್ಧಿ ಯೋಜನೆ, ಭಾಗ್ಯಲಕ್ಷತ್ಮಿ ಯೋಜನೆಗಳಂಥ ಹಲವು ಯೋಜನೆಗಳನ್ನು ಕೈಗೊಂಡಿದೆ. ಹೆಣ್ಣುಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ ತಡೆಗೆ ಅನೇಕ ಕಠಿಣ ಕಾನೂನನ್ನು ಜಾರಿಗೆ ತರಲಾಗಿದೆ. ಹೆಣ್ಣು ಮಕ್ಕಳ ಸುರಕ್ಷೆ ಹಾಗೂ ರಕ್ಷಣೆಗಾಗಿ ಸರ್ಕಾರ ಹಾಗೂ ಸರ್ಕಾರೇತರ ಹಲವು ಸಂಘ ಸಂಸ್ಥೆಗಳು ನಾನಾ ಜಾಗತಿ ಕಾರ್ಯಕ್ರಮಗಳನ್ನು ನಡೆಸುತ್ತವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ತೋರಿದ ಹೆಣ್ಣು ಮಕ್ಕಳನ್ನು ಗೌರವಿಸುತ್ತಿದೆ ಎಂದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಜಾಹ್ನವಿ ಜಯರಾಮ್, ಕಾರ್ಯದರ್ಶಿ ಸವಿತಾ ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷೆ ಕವಿತಾ ಕೇಶವ್, ಜೇಸಿಐ ಕಾರ್ಯದರ್ಶಿ ವಿ.ಅಶೋಕ್, ಪೂರ್ವಾಧ್ಯಕ್ಷ ಸುಧಾಕರ್, ಮುಖ್ಯಶಿಕ್ಷಕಿ ಡಯಾನ ಮತ್ತಿತರರು ಹಾಜರಿದ್ದರು.
