ನಗರ ಜೀವನಕ್ಕೆ ಬೈ, ಹೈನುಗಾರಿಕೆಗೆ ಜೈ

< ಚಾಲಕ ವೃತ್ತಿಯಿಂದ ಹಸು ಸಾಕಣಿಕೆಗೆ ಇಳಿದ ರಮೇಶ್ ಪೂಜಾರಿ>

ಶ್ರೀಪತಿ ಹೆಗಡೆ ಹಕ್ಲಾಡಿ ಕೋಟ

ಪ್ರಸ್ತುತ ಹಳ್ಳಿ ಜೀವನಕ್ಕೆ ಬೇಸತ್ತು ಪೇಟೆ ಕಡೆ ಮುಖ ಮಾಡುವವರೇ ಹೆಚ್ಚು. ಆದರೆ ಉದ್ಯೋಗಕ್ಕಾಗಿ ಬೆಂಗಳೂರು ಸೇರಿ ಚಾಲಕ ವೃತ್ತಿ ಮಾಡುತ್ತಿದ್ದ ಯುವಕ ಪೇಟೆ ಜೀವನಕ್ಕೆ ಬೇಸತ್ತು ಹಳ್ಳಿ ಸೇರಿ ಹೈನುಗಾರಿಕೆ ಆರಂಭಿಸಿ ಯಶಸ್ಸು ಕಂಡು ಮಾದರಿಯಾಗಿದ್ದಾರೆ.

ಕೋಟ ಕೋಟತ್ತಟ್ಟು ಗ್ರಾಮ ನಿವಾಸಿ ರಮೇಶ್ ಪೂಜಾರಿ, ಬೆಂಗಳೂರು ಜೀವನಕ್ಕೆ ವಿದಾಯ ಹೇಳಿ ಹುಟ್ಟೂರಲ್ಲಿ ಬದುಕು ಕಟ್ಟಿಕೊಂಡವರು. ಬಡತನದಲ್ಲಿ ಹುಟ್ಟಿದ ರಮೇಶ್ ಪೂಜಾರಿ ಪ್ರೌಢ ಶಿಕ್ಷಣದ ನಂತರ ಹೊಟ್ಟೆ ಪಾಡಿಗಾಗಿ ಬೆಂಗಳೂರು ಸೇರಿ, ಚಾಲಕ ವೃತ್ತಿ ಮಾಡಿಕೊಂಡಿದ್ದರು. ಬೆಂಗಳೂರು ನಗರದ ಒತ್ತಡ, ಗೌಜಿಗದ್ದಲ ಸಾಕಾಯಿತು. ಸ್ವಂತ ದುಡಿಮೆ ಶ್ರೇಷ್ಠ ಎಂದು ಅನ್ನಿಸಿದ್ದೇ ತಡ ಬೆಂಗಳೂರಿಗೆ ಗುಡ್‌ಬೈ ಹೇಳಿ ಊರಿಗೆ ಬಂದು ಹೈನುಗಾರಿಕೆಗೆ ಜೈ ಎಂದಿದ್ದಾರೆ. ಜತೆಗೆ ಆಟೋರಿಕ್ಷಾ ಇಟ್ಟು ಬದುಕು ಕಟ್ಟಿಕೊಂಡಿದ್ದು, ಉದ್ಯೋಗ ಯಾವುದಾದರೇನು, ಮನಸ್ಸಿದ್ದರೆ ಮಾರ್ಗ ಇದೆ ಎಂಬುದನ್ನು ನಿರೂಪಿಸಿದ್ದಾರೆ. ಇವರಿಗೆ ಬೆನ್ನೆಲುಬಾಗಿ ಪತ್ನಿ ಆಶಾ ನಿಂತಿದ್ದಾರೆ.

ಬೆಂಗಳೂರು ಜೀವನದಲ್ಲಿ 20 ವರ್ಷ ದುಡಿದು ಸಾಧಿಸಲಾಗದ ಕಾರ್ಯ ತನ್ನೂರಲ್ಲಿ ಮಾಡಿ ತೋರಿಸಬೇಕೆಂಬ ತುಡಿತದೊಂದಿಗೆ ತನ್ನ ಹಿತೈಷಿಗಳ ಪ್ರೋತ್ಸಾಹ ಪಡೆದು ಹೈನುಗಾರಿಕೆ ಕ್ಷೇತ್ರಕ್ಕೆ ಕಾಲಿಟ್ಟರು. ಒಂದು ಆಕಳು, ಕರು ತಂದೆ ಮನೆಯವರ ಉಡುಗೊರೆಯೊಂದಿಗೆ ಪ್ರಾರಂಭಿಸಿ ಇಂದು ಆರು ಹಸುವಿನ ಸಾಕಾಣಿಕೆಯೊಂದಿಗೆ ದಿನಕ್ಕೆ 35 ಲೀಟರ್ ಹಾಲು ಉತ್ಪಾದಿಸಿ ಕೋಟ ಪರಿಸರದಲ್ಲಿ ಹೈನುಗಾರಿಕೆ ಕ್ರಾಂತಿ ಮಾಡಿದ್ದಾರೆ.

ಕರು ಸಾಕಾಣಿಕೆಯೊಂದಿಗೆ ಹೈನುಗಾರಿಕೆಗೆ ಇಳಿದ ರಮೇಶ್ ಪೂಜಾರಿ ಇನ್ನೆರಡು ಹಾಲು ನೀಡುವ ಹಸು ಖರೀದಿಸಿದರು. ದೂರದ ಊರಿನಿಂದ ಮತ್ತೊಂದು ಹಸು ಖರೀದಿಸಿ ತಮ್ಮ ಸಮೃದ್ಧ ಜೀವನಕ್ಕೆ ಅಡಿಪಾಯ ಇಟ್ಟರು. ಅಷ್ಟರೊಳಗೆ ಅವರಿಗೊಂದು ಆಘಾತ ಉಂಟಾಯಿತು. ಖರೀದಿಸಿದ ತುಂಬು ಗರ್ಭಿಣಿ ಗುಜರಾತ್ ತಳಿ ಹಸು ಕರುವಿಗೆ ಜನ್ಮ ನೀಡಿ ಮೃತಪಟ್ಟಿತು. ಇದರಿಂದ ಗಲಿಬಿಲಿಗೊಂಡ ರಮೇಶ್ ತಾನು ಸಾಲ ಮಾಡಿ ಹೈನುಗಾರಿಕೆ ಇಟ್ಟ ಹೆಜ್ಜೆ ತಪ್ಪಿತ್ತೆಂಬ ಭಾವನೆಯಿಂದ ನೊಂದಿದ್ದರು. ಆದರೂ ಧೃತಿಗೆಡದೆ ಮುಂದೆ ಸಾಗಿದರು. ಇಂದು ಆರು ಹಸುವಿನ ಆರೈಕೆ ಜತೆಗೆ ಆಟೋ ಚಾಲನೆ ಮೂಲಕ ಸುಖಮಯವಾಗಿ ಜೀವನ ಸಾಗಿಸುತ್ತಿದ್ದಾರೆ. ದಿನಕ್ಕೆ 25 ಲೀಟರ್ ಹಾಲು ತಮ್ಮ ಹತ್ತಿರದ ಕೆಎಂಎಫ್ ಹಾಲು ಉತ್ಪಾದಕ ಕೇಂದ್ರಕ್ಕೆ ನೀಡುತ್ತಿದ್ದಾರೆ. ಇದರಿಂದ ಒಟ್ಟು ಮಾಸಿಕ 30 ಸಾವಿರ ರೂ. ಆದಾಯ ಬರುತ್ತಿದ್ದು, ತನ್ನ ದುಡಿಮೆ ಇಂಜಿನಿಯರಿಂಗ್ ಅಥವಾ ಸ್ವಾಫ್ಟ್‌ವೇರ್ ಉದ್ಯೋಗಸ್ಥರ ಸಂಬಳಕ್ಕೆ ಸರಿಸಮಾನ ಎನ್ನುತ್ತಾರೆ.

ತಾನು ಬೆಂಗಳೂರಿನಲ್ಲಿ 20 ವರ್ಷ ಕಾರ್ಯನಿರ್ವಹಿಸುವ ಸಂದರ್ಭ ನನಗೆ ಸರಿಯಾದ ಆದಾಯ ಇರಲ್ಲಿಲ್ಲ. ಅಲ್ಲಿ ಚಾಲಕನ ಕೆಲಸ ನಿರ್ವಹಿಸಿಕೊಂಡು ಜೀವನ ಸಾಗಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಇದನ್ನು ಮನಗಂಡು ಊರಿಗೆ ಬಂದು ಹೈನುಗಾರಿಕೆ ಆರಂಭಿಸಿದೆ. ಅದಕ್ಕೆ ಪತ್ನಿ ಆಶಾಳ ಸಹಕಾರದಿಂದ ಇಂದು ಈ ರೀತಿ ಬೆಳೆಯಲು ಸಾಧ್ಯವಾಗಿದೆ.
ರಮೇಶ್ ಪೂಜಾರಿ ಕೋಟತ್ತಟ್ಟು