ಮಾಯಕೊಂಡ: ಮಹಾಶಿವರಾತ್ರಿ ಬಂತೆಂದರೆ ಎಲ್ಲೆಲ್ಲೂ ಕಲ್ಲಂಗಡಿ ಕಲರವ, ಈ ಬಾರಿ ದಾವಣಗೆರೆ ಜಿಲ್ಲೆಯಲ್ಲಿ ನಿರೀಕ್ಷಿಸಿದಷ್ಟು ಕಲ್ಲಂಗಡಿ ಬೆಳೆ ಇಲ್ಲದ ಕಾರಣ ಕಳೆದೆರಡು ದಿನಗಳಿಂದ ಹಬ್ಬಕ್ಕಾಗಿ ತಮಿಳುನಾಡಿನಿಂದ ಆಮದು ಮಾಡಿಕೊಳ್ಳುತ್ತಿದ್ದು, ಮಾಯಕೊಂಡ ಗ್ರಾಮಕ್ಕೆ ಭಾನುವಾರ 2 ಲಾರಿಗಳಲ್ಲಿ 13 ರಿಂದ 14 ಟನ್ ಹಣ್ಣು ಬಂದಿಳಿದಿದೆ.

ಈಗಾಗಲೇ ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು, ಕೊಡಗನೂರು ಕ್ರಾಸ್ ಸರ್ಕಲ್, ಅಣಜಿ, ಬಾಡ, ಲೋಕಿಕೆರೆ ಸೇರಿ ಹಲವು ಗ್ರಾಮಗಳಲ್ಲಿ ಕಲ್ಲಂಗಡಿ ಚಿಲ್ಲರೆ ಮಾರಾಟಗಾರರು ತಮಿಳುನಾಡಿನಿಂದ ಸಗಟು ದರದಲ್ಲಿ ಖರೀದಿಸಿ ಬಸ್ಟ್ಯಾಂಡ್ ಸರ್ಕಲ್ನಲ್ಲಿ ರಾಶಿ ಹಾಕಿ ಮಾರಾಟ ಶುರು ಮಾಡಿದ್ದಾರೆ.
ನಾಮಧಾರಿ ತಳಿಯ ಕಲ್ಲಂಗಡಿಯನ್ನು ಶಿವರಾತ್ರಿ ಸಮಯದಲ್ಲಿ ತಮಿಳುನಾಡಿನ ಹಲವಾರು ಜಿಲ್ಲೆಯಲ್ಲಿ ಯಥೇಚ್ಛವಾಗಿ ಬೆಳೆಯುತ್ತಾರೆ. ಅಲ್ಲದೆ ಕರ್ನಾಟಕ ರಾಜ್ಯ ಸೇರಿ ದೇಶದ ಅನೇಕ ರಾಜ್ಯಗಳಿಗೆ ಮಹಾಶಿವರಾತ್ರಿಯಂದು ರಪ್ತು ಮಾಡುತ್ತಾರೆ.
ತಮಿಳುನಾಡಿನಿಂದ 12 ರಿಂದ 14 ಟನ್ ಕಲ್ಲಂಗಡಿ ಹಣ್ಣನ್ನು ಮಾಯಕೊಂಡಕ್ಕೆ ಲಾರಿಯಲ್ಲಿ ತರಿಸಲು ಸುಮಾರು 30 ಸಾವಿರ ಖರ್ಚಾಗುತ್ತದೆ. ಹಾಗಾಗಿ ಪ್ರತಿ ಕೆಜಿಗೆ 30 ರೂ. ನಿಗದಿಗೊಳಿಸಲಾಗಿದೆ.
ಬಿಸಿಲಿನ ತಾಪಮಾನ ಪ್ರತಿಶತ 30 ಡಿಗ್ರಿಗಿಂತ ಹೆಚ್ಚಾದ ಪರಿಣಾಮ ಕಲ್ಲಂಗಡಿ ಹಣ್ಣಿನ ವ್ಯಾಪಾರ ಉತ್ತಮವಾಗಿ ಆಗುವ ನಿರೀಕ್ಷೆ ಇದೆ ಎನ್ನುತ್ತಾರೆ ಕಲ್ಲಂಗಡಿ ಹಣ್ಣಿನ ಚಿಲ್ಲರೆ ವ್ಯಾಪಾರಿ ಶಿವಕುಮಾರ್.