ಏಕಮುಖ ಸಂಚಾರ ವ್ಯವಸ್ಥೆಗೆ ಬೆಂಬಲ

ಗೋಣಿಕೊಪ್ಪಲು : ಪಟ್ಟಣದ ಮುಖ್ಯರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಅನುಷ್ಠಾನಗೊಳಿಸುವ ಯೋಜನೆಗೆ ಎಲ್ಲ ವರ್ತಕರು ಒಂದಾಗಿ ಬೆಂಬಲಿಸುವ ನಿರ್ಧಾರವನ್ನು ಗೋಣಿಕೊಪ್ಪ ವರ್ತಕರ ಸಂಘದ ಸದಸ್ಯರ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಏಕಮುಖ ಸಂಚಾರ ವ್ಯವಸ್ಥೆ ಬಗ್ಗೆ ವರ್ತಕರಲ್ಲಿ ಪರ-ವಿರೋಧ ಅಭಿಪ್ರಾಯ ಮೂಡಿದ್ದರಿಂದ ಸ್ಥಳೀಯ ವರ್ತಕರ ಸಂಘದ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ವರ್ತಕರ ಸಂಘದ ಸಭಾಂಗಣದಲ್ಲಿ ವರ್ತಕರ ಸಭೆ ಕರೆದು ಚರ್ಚಿಸಲಾಯಿತು. ಅನವಶ್ಯಕವಾಗಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವುದನ್ನು ನಿಯಂತ್ರಿಸಿ ಏಕಮುಖ ಸಂಚಾರ ವ್ಯವಸ್ಥೆಗೆ ಬೆಂಬಲ ನೀಡಲು ನಿರ್ಧರಿಸಲಾಯಿತು.

ಜಿಪಂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಹಾಗೂ ಎಸ್ಪಿಯನ್ನು ಭೇಟಿ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ನಿಯೋಗದಲ್ಲಿ ವರ್ತಕರ ಸಂಘದ ಪದಾಧಿಕಾರಿಗಳು ಹಾಗೂ ವರ್ತಕರು ತೆರಳಿ, ಜ.28ರಂದು ಗೋಣಿಕೊಪ್ಪದಲ್ಲಿ ಕರೆದಿರುವ ಪೊಲೀಸ್-ಸಾರ್ವಜನಿಕರ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚಿಸಲಾಯಿತು.

ಹಿರಿಯ ವರ್ತಕರಾದ ಪುರುಷೋತ್ತಮ್, ಮಹಮ್ಮದ್ ರಫೀ ಚಡ್‌ಖಾನ್, ಶಿವಾಜಿ, ಪಿ.ಕೆ.ಪ್ರವೀಣ್, ಎಂ.ಜಿ.ನಾರಾಯಣ್ ಸಭೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆಯಿಂದ ವರ್ತಕರಿಗೆ ಆದ ಸಮಸ್ಯೆಯ ಬಗ್ಗೆ ಮಾತನಾಡಿದರು.

ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸಬೇಕಿದೆ. ಸಂಚಾರ ವ್ಯವಸ್ಥೆಯಲ್ಲಿನ ಬದಲಾವಣೆ ಈಗಾಗಲೇ ಆರಂಭವಾಗಿರುವುದರಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆತಿದೆ ಎಂದು ಅಧ್ಯಕ್ಷ ಸುನಿಲ್ ಮಾದಪ್ಪ ಹೇಳಿದರು.

ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್.ಪ್ರಕಾಶ್, ಪ್ರಮುಖರಾದ ಕಾಡ್ಯಮಾಡ ಗಿರೀಶ್ ಗಣಪತಿ, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ವರ್ತಕರಲ್ಲಿದ್ದ ಗೊಂದಲ ನಿರ್ವಹಣೆಗೆ ಸಲಹೆ ನೀಡಿದರು.

ಜಿಪಂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ ಮಾತನಾಡಿ, ಏಕಮುಖ ಸಂಚಾರದಿಂದ ಕೆಲ ಸಮಸ್ಯೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ವರ್ತಕರು ಬಂದ್ ನಡೆಸಿರುವುದು ಮನಸ್ಸಿಗೆ ನೋವಾಗಿದೆ. ಮುಂದೆ ಎಲ್ಲರನ್ನು ಒಟ್ಟಾಗಿ ವಿಶ್ವಾಸಕ್ಕೆ ಪಡೆದು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿದೆ ಎಂದರು.

ನಮ್ಮ ನಮ್ಮಲ್ಲೇ ಸ್ವ ಪ್ರತಿಷ್ಠೆಗಳು ಬೇಡ. ಶಾಸಕರ ಹಾಗೂ ಜಿಪಂ ಅನುದಾನದಲ್ಲಿ ಈಗಾಗಲೇ ಬೈಪಾಸ್ ರಸ್ತೆಯನ್ನು ವಿಸ್ತರಣೆಗೊಳಿಸಲು ಕಾಮಗಾರಿ ಆರಂಭಿಸಲಾಗಿದೆ. ಡಾಂಬರೀಕರಣ ಕೆಲವೆ ದಿನಗಳಲ್ಲಿ ಮುಗಿಯಲಿದೆ. ನಂತರ ಈ ರಸ್ತೆಯನ್ನು ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಅಲ್ಲಿಯವರೆಗೂ ಆಗುವ ತೊಂದರೆಗಳಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಬೋಪಣ್ಣ ಹೇಳಿದರು.

ಚೇಂಬರ್ ಆಫ್ ಕಾಮರ್ಸ್‌ನ ತೆಕ್ಕಡ ಕಾಶಿ ಸ್ವಾಗತಿಸಿದರು. ನಿರ್ದೇಶಕಿ ಚೇಂದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು. ಉಪಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ವಂದಿಸಿದರು. ಖಜಾಂಚಿ ಮನೋಹರ್, ನಿರ್ದೇಶಕರಾದ ನಾಸೀರ್, ರಾಜಶೇಖರ್, ಅರವಿಂದ್ ಕುಟ್ಟಪ್ಪ, ಎಂ.ಅನಿತಾ ಹಾಜರಿದ್ದರು.

ಶ್ಲಾಘನೆ: ಏಕಮುಖ ಸಂಚಾರ ವ್ಯವಸ್ಥೆ ವಿಚಾರವಾಗಿ ಪರ-ವಿರೋಧದ ಗೊಂದಲದಿಂದ ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗಿತ್ತು. ಎರಡು ಗುಂಪುಗಳನ್ನು ಒಂದಾಗಿಸಿ ಗೋಣಿಕೊಪ್ಪ ಪ್ರೆಸ್‌ಕ್ಲಬ್ ಆಯೋಜಿಸಿದ್ದ ಮುಕ್ತ ಸಂವಾದದಿಂದ ಒಗ್ಗಟ್ಟು ಮೂಡುವಂತಾಗಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾಧ್ಯಮದ ಜವಾಬ್ದಾರಿ ಎತ್ತಿ ಹಿಡಿದಿರುವ ಪ್ರೆಸ್‌ಕ್ಲಬ್ ಯೋಜನೆಗೆ ಶ್ಲಾಘನೆ ವ್ಯಕ್ತವಾಯಿತು. ಪ್ರಸ್ತುತ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿರುವ ಸಂಚಾರ ವ್ಯವಸ್ಥೆ ಬಗ್ಗೆ ಪೊಲೀಸರ ಕ್ರಮವನ್ನು ಸ್ವಾಗತಿಸಲಾಯಿತು.
ಮೌನಾಚರಣೆ: ಶಿವಕುಮಾರ ಸ್ವಾಮೀಜಿ ನಿಧನದ ಹಿನ್ನೆಲೆಯಲ್ಲಿ ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು.