ಚೆಕ್ಕೇರ ಅಪ್ಪಯ್ಯ ಅವರ 100ನೇ ಜನ್ಮ ದಿನಾಚರಣೆ

ಗೋಣಿಕೊಪ್ಪಲು: ಸಂಗೀತ ಕಲಾವಿದ, ವೀಣಾ ವಾದಕ ಕೂರ್ಗ್‌ಸ್ಟಾರ್ ಚೆಕ್ಕೇರ ಅಪ್ಪಯ್ಯ ಅವರ 100ನೇ ವರ್ಷದ ಜನ್ಮ ದಿನಾಚರಣೆಯಲ್ಲಿ ಮಗ ಹಾಗೂ ಮೊಮ್ಮಗನ ಸಂಗೀತದ ಕಂಪು ಮೆರುಗು ನೀಡಿತು.

ಹುದಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಚೆಕ್ಕೇರ ಕುಟುಂಬ ಹಾಗೂ ಕೊಡವ ಮಕ್ಕಡ ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚೆಕ್ಕೇರ ಅಪ್ಪಯ್ಯ ಸಂಗೀತದ ಗುಣಗಾನ, ಏಕಕಾಲದಲ್ಲಿ ಎರಡು ಭಾಷೆಯಲ್ಲಿ ಅಪ್ಪಯ್ಯ ಅವರ ಜೀವನಚರಿತ್ರೆಯ ಪುಸ್ತಕ ಅನಾವರಣಗೊಂಡಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಕೊಡವ ಸಮಾಜ ಕಾರ್ಯಾಧ್ಯಕ್ಷ ಇಟ್ಟೀರ ಬಿದ್ದಪ್ಪ, ಆರ್ಥಿಕ, ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದ ಕಾಲದಲ್ಲಿ ಅಪ್ಪಯ್ಯ ಅವರು ಸಂಗೀತ ಆಸಕ್ತಿ ಮೂಲಕ ದೇವರಿಗೆ ಮೆಚ್ಚುಗೆಯಾದ ಸಂಗೀತವನ್ನು ಮೈಗೂಡಿಸಿಕೊಂಡು ದೊಡ್ಡ ಸಂಗೀತಕಾರರಾದರು. ಇವರ ಸಂಶೋಧನಾ ಗ್ರಂಥ ಕೊಡವ ಸಾಹಿತ್ಯಕ್ಕೆ ಅವಶ್ಯಕತೆ ಇದೆ. ಈ ಬಗ್ಗೆ ಚಿಂತನೆ ನಡೆಯಬೇಕಿದೆ ಎಂದರು.

ದ್ವಿಭಾಷಾ ಪುಸ್ತಕ ಅನಾವರಣ:  ಕನ್ನಡ ಹಾಗೂ ಕೊಡವ ಭಾಷೆಯಲ್ಲಿ ಸಾಹಿತಿ ಉಳುವಂಗಡ ಕಾವೇರಿ ಉದಯ ಬರೆದಿರುವ ಕೊಡವ ಭಾಷೆಯ ಕೊಡಗ್‌ರ ಸಂಗೀತ ಸಾಹಿತ್ಯ ಕಲಾವಿದಂಗ ಹಾಗೂ ಕನ್ನಡ ಅನುವಾದದ ಕೊಡಗಿನ ಸಂಗೀತ ಸಾಹಿತ್ಯ ಕಲಾವಿದರು ಎಂಬ ಪುಸ್ತಕವನ್ನು ಕೊಡವ ಮಕ್ಕಡ ಕೂಟದಿಂದ ಅನಾವರಣಗೊಳಿಸಲಾಯಿತು.


ಮಗ, ಮೊಮ್ಮಗನಿಂದ ಸಂಗೀತ: ಕೂರ್ಗ್ ಸ್ಟಾರ್ ಚೆಕ್ಕೇರ ಅಪ್ಪಯ್ಯ ಅವರ ಮಗ ಚೆಕ್ಕೇರ ತ್ಯಾಗರಾಜ್ ಹಾಗೂ ಮೊಮ್ಮಗ ಚೆಕ್ಕೇರ ಪಂಚಮ್ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ಮೂರು ತಲೆಮಾರಿನ ಕಲಾವಿದರನ್ನು ನೆನೆಸಿಕೊಳ್ಳುವಂತಾಯಿತು.

ಪತ್ರಕರ್ತ ಉಳ್ಳಿಯಡ ಪೂವಯ್ಯ ಪುಸ್ತಕ ಬಿಡುಗಡೆ ಮಾಡಿದರು. ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಮಾತನಾಡಿದರು. ಕೂರ್ಗ್ ಸ್ಟಾರ್ ಚೆಕ್ಕೇರ ಅಪ್ಪಯ್ಯ ಅವರ ಪುತ್ರ ಚೆಕ್ಕೇರ ತ್ಯಾಗರಾಜ್, ಶತಾಯುಷಿ ಹೊಟ್ಟೇಂಗಡ ಚೋಂದಮ್ಮ ಹಾಗೂ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರನ್ನು ಸನ್ಮಾನಿಸಲಾಯಿತು. ಸಮಾಜ ಸೇವಕ ಡಾ.ಕಾಳಿಮಾಡ ಶಿವಪ್ಪ, ಹಿರಿಯ ವಕೀಲ ಅಜ್ಜಿನಿಕಂಡ ಭೀಮಯ್ಯ, ಚೆಕ್ಕೇರ ಕುಟುಂಬದ ಅಧ್ಯಕ್ಷ ಚೆಕ್ಕೇರ ಕೆ. ಕಾಳಯ್ಯ ಉಪಸ್ಥಿತರಿದ್ದರು.