ರಾಮೇಶ್ವರ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಗೋಣಿಕೊಪ್ಪಲು: ಇರ್ಪು ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಗೋಣಿಕೊಪ್ಪ ಕಾವೇರಿ ಕಲಾಸಿರಿ ತಂಡ ನಡೆಸಿಕೊಟ್ಟ ರಸ ಸಂಜೆ ಜನಮನ ಗೆದ್ದಿತು. ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಕೊಡವ, ಕನ್ನಡ, ತಮಿಳು ಮಲಯಾಳಂ ಭಾಷೆಯ ಗೀತೆಗಳನ್ನು ತಂಡದ ಕಲಾವಿದರು ಹಾಡಿದರು. ನೃತ್ಯ, ಹಾಸ್ಯ ಹಾಗೂ ಮಿಮಿಕ್ರಿ ಜನರನ್ನು ರಂಜಿಸಿದವು. ಕಲಾವಿದರಾದ ಚೆನ್ನನಾಯಕ್, ವನೀತ್‌ಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು.

ಸಾಮೂಹಿಕ ಸತ್ಯ ನಾರಾಯಣ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳ ನಡೆಯಿತು. ಶಿವರಾತ್ರಿಯ ಮಾರನೆ ದಿನ ಜಾತ್ರಾ ಮಹೋತ್ಸವ ಮತ್ತು ದೇವರ ಅವಭೃತ ಸ್ನಾನ ಮಹೋತ್ಸವ ನಡೆಯಿತು. ಸಾವಿರಾರು ಭಕ್ತರು ಲಕ್ಷ್ಮಣ ತೀರ್ಥ ನದಿಯ ಇರ್ಪು ಜಲಪಾತದಲ್ಲಿ ತೀರ್ಥ ಸ್ನಾನ ಮಾಡಿ ಪ್ರಸಾದ ಸ್ವೀಕರಿಸಿದರು.

ಶ್ರೀ ರಾಮೇಶ್ವರ ದೇವಾಲಯದಲ್ಲಿ ಪವಿತ್ರ ಅನ್ನ ಸಂತರ್ಪಣೆ ನಡೆಯಿತು. ದೇವರ ಉತ್ಸವದ ಉಸ್ತುವಾರಿಯನ್ನು ದೇವಾಲಯದ ಆಡಳಿತಾಧಿಕಾರಿ ತಹಸೀಲ್ದಾರ್ ಗೋವಿಂದರಾಜು ವಹಿಸಿದ್ದರು. ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೌತಮ್ ದೇಶಪಾಂಡೆ ಪ್ರಸಾದದ ಗುಣಮಟ್ಟ ಪರಿಶೀಲಿಸಿದರು.

ಕರುಣಾ ಟ್ರಸ್ಟ್ ಭಕ್ತರು ವೈದ್ಯಕೀಯ ಸೇವೆ ಒದಗಿಸಿದ್ದರು. ಡಿವೈಎಸ್ಪಿ ನಾಗಪ್ಪ, ವೃತ್ತನಿರೀಕ್ಷಕ ದಿವಾಕರ್, ಎಸ್‌ಐ ಮರಿಸ್ವಾಮಿ ಪೊಲೀಸ್ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು.