ಮಂಗಳಕರ ನುಡಿಗಳನ್ನಾಡಿ ಕುಟುಂಬ ಮುನ್ನಡೆಸಿ

ಗೋಣಿಕೊಪ್ಪಲು: ಮನೆಯಲ್ಲಿ ಮಂಗಳಕರ ನುಡಿಗಳನ್ನಾಡುವ ಅಭ್ಯಾಸವನ್ನು ರೂಢಿಸಿಕೊಂಡು ಕುಟುಂಬವನ್ನು ಮುನ್ನಡೆಸುವಂತೆ ಮಹಿಳೆಯರಿಗೆ ಬೆಂಗಳೂರಿನ ಅಫೆಕ್ಸ್ ಬ್ಯಾಂಕ್ ನಿವೃತ್ತ ಡೆಪ್ಯುಟಿ ಜನರಲ್ ಮ್ಯಾನೇಜರ್ ಮಾಧುರಿ ಚಂಗಪ್ಪ ಸಲಹೆ ನೀಡಿದರು.

ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಉತ್ತಮ ದಾರಿಯಲ್ಲಿ ಮುನ್ನಡೆಸುವ ಮಹತ್ತರ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದರು.

ಯಾವುದೇ ಮಹಿಳೆ ತಾನು ಸಾಧನೆ ಮಾಡಬೇಕು ಎಂದು ದೃಢ ಸಂಕಲ್ಪಮಾಡಿ ಮುನ್ನಡೆದರೆ ಆಕೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪ್ರತಿಯೊಂದು ಹೆಣ್ಣಿಗೂ ಜೀವನದುದ್ದಕ್ಕೂ ಹಲವಾರು ಸವಾಲುಗಳು ಎದುರಾಗುತ್ತವೆ, ಅವುಗಳನ್ನು ಎದುರಿಸಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.

ಪ್ರಾಂಶುಪಾಲ ಪ್ರೊ.ಎಸ್.ಆರ್.ಉಷಾಲತಾ ಮಾತನಾಡಿ, ಹೆಣ್ಣಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬ ವಿದ್ಯಾವಂತರಾಗುತ್ತಾರೆ. ಶಿಕ್ಷಣವೊಂದೇ ಮಹಿಳಾ ಅಸಮಾನತೆಯನ್ನು ತೊಡೆದುಹಾಕಲು ಇರುವ ಮಾರ್ಗ. ಯಾವುದೇ ಹೆಣ್ಣು ಒಂದು ಕುಟುಂಬದ ಸಾಮರಸ್ಯವನ್ನು ಕದಡದೆ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಬೇಕು ಎಂದರು.

ಕಾವೇರಿ ಕಾಲೇಜಿನಲ್ಲಿ ಸುದೀರ್ಘ 25 ವರ್ಷಗಳನ್ನು ಪೂರೈಸಿ ಸೇವೆಸಲ್ಲಿಸುತ್ತಿರುವ ಪ್ರಾಧ್ಯಾಪಕರಾದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ರೇಖಾ ವಸಂತ್ ಹಾಗೂ ದ್ವಿತೀಯ ದರ್ಜೆ ಸಹಾಯಕಿ ಡಿ. ನಾಗಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.

ಉಪ ಪ್ರಾಂಶುಪಾಲರಾದ ಪ್ರೊ.ಕೆ.ಎಸ್.ತುಳಸಿ, ಕಾವೇರಿ ಕಾಲೇಜು ಮಹಿಳಾ ಸಂಘಟನೆಯ ಸಂಚಾಲಕಿ ಡಾ. ಎ.ಎಸ್.ಪೂವಮ್ಮ, ಐಕ್ಯೂಎಸಿ ಸಂಚಾಲಕಿ ಪ್ರೊ.ಎಂ. ಎಸ್.ಭಾರತಿ, ಕಚೇರಿ ಅಧೀಕ್ಷಕಿ ಎಚ್.ಕೆ.ಸೀತಾಲಕ್ಷ್ಮೀ ಉಪಸ್ಥಿತರಿದ್ದರು.