Goni Basaveshwara Kolahalli Harapanahalli Rathotsava

ಗೋಣಿ ಬಸವೇಶ್ವರ ತೇರಿಗೆ ಭಕ್ತ ಸಾಗರ

ಹರಪನಹಳ್ಳಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕೂಲಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಸಹಸ್ರಾರು ಭಕ್ತರ ಮಧ್ಯೆ ಶ್ರೀ ಗೋಣಿ ಬಸವೇಶ್ವರ ರಥೋತ್ಸವ ನೆರವೇರಿತು.

ಬೆಳಗ್ಗೆ 5 ಗಂಟೆಯಿಂದಲೇ ದೇವಸ್ಥಾನದಲ್ಲಿ ಫಲ ಪುಷ್ಪಾಲಂಕಾರ, ಅಭಿಷೇಕ, ಪೂಜೆ ನಡೆದವು. ಸರದಿಯಲ್ಲಿ ನಿಂತಿದ್ದ ಭಕ್ತರಿಗೆ ದೇವರ ದರ್ಶನ ಪಡೆಯಲು ಆಡಳಿತ ಮಂಡಳಿ ಅವಕಾಶ ಮಾಡಿಕೊಟ್ಟಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ಬಂದ ಸಾವಿರಾರು ಭಕ್ತರು ಗೋಣಿ ಬಸವೇಶ್ವರರ ದರ್ಶನ ಪಡೆದರು.

ಬಿರು ಬಿಸಿಲಿನಲ್ಲಿ ನಾಲ್ಕು ದಿಕ್ಕಿನಿಂದ ಬಂದ ಭಕ್ತರಿಗೆ ಎರಡೆತ್ತಿನಹಳ್ಳಿ, ಕಾನಹಳ್ಳಿ, ಚಿಕ್ಕಹಳ್ಳಿ, ಬಂಡ್ರಿ ಸೇರಿ ವಿವಿಧ ಹಳ್ಳಿಯಲ್ಲಿ ಉಪಾಹಾರ, ತಂಪು ಪಾನೀಯ ಉಚಿತವಾಗಿ ವಿತರಿಸುತ್ತಿದ್ದ ದೃಶ್ಯ ಕಂಡುಬಂತು. ದೇವಸ್ಥಾನದ ಆವರಣದಲ್ಲಿ ಕುಳಿತಿದ್ದ ಜೋಗತಿಯರು, ಜೋಗಪ್ಪರಿಗೆ ಭಕ್ತರು ಅನ್ನಸಂತರ್ಪಣೆ, ಪೂಜೆ ನೆರವೇರಿಸಿದರು.

ಗೋಣಿ ಬಸವೇಶ್ವರ ಸಂಸ್ಥಾನ ಆವರಣದ ಗದ್ದುಗೆಯ ಮೇಲೆ ವಿರಾಜಮಾನರಾಗಿದ್ದ ಪಟ್ಟಾಧೀಶರಾದ ಶ್ರೀ ಚಿನ್ಮಯಿ ಸ್ವಾಮೀಜಿ, ಶ್ರೀ ಕಾಶೀನಾಥ ಸ್ವಾಮೀಜಿ ಮತ್ತು ಅವರ ವಂಶಸ್ಥ ಅರ್ಚಕರು ಸಾಲಾಗಿ ಬರುತ್ತಿದ್ದ ಭಕ್ತ ಸಮೂಹಕ್ಕೆ ಆಶೀರ್ವಾದ ಕರುಣಿಸಿದರು. ಒಂದೇ ಬಣ್ಣದ ಧಿರಿಸಿನಲ್ಲಿ 56 ಕಿ.ಮೀ. ಕಾಲ್ನಡಿಗೆ ಬಂದ ಚಿಕ್ಕಮೇಗಳೆರೆಯ 20 ಭಕ್ತರು ಗಮನಸೆಳೆದರು.

ಲಕ್ಷಾಂತರ ಭಕ್ತರಿಗೆ ರಥಬೀದಿ ಜಮೀನುಗಳಲ್ಲಿ, ಕೋಡಿಹಳ್ಳಿ, ಬಾಗಳಿ ರಸ್ತೆಯ ಹೊಲಗಳಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ದೇವಸ್ಥಾನದಲ್ಲಿ ಸ್ವಯಂ ಸೇವಕರು, ಪೊಲೀಸರು ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು. ವ್ಯಾಪಕ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಮಾಡಿದ ತಪ್ಪಿಗೆ ಸೇವೆಯೇ ಶಿಕ್ಷೆ
ಗೋಣಿಬಸವೇಶ್ವರರು 16ನೇ ಶತಮಾನದಲ್ಲಿ ಮಾಡುತ್ತಿದ್ದ ಪವಾಡಗಳು ಅಚ್ಚರಿ ಮೂಡಿಸಿದ್ದವು. ಆ ವೇಳೆ ಅವರಿಗೆ ಕೇಡು ಬಯಸಿದ ವಿವಿಧ ಗ್ರಾಮಗಳು ಪ್ರಾಯಶ್ಚಿತ್ತಕ್ಕಾಗಿ ಸ್ವಾಮಿ ಆಜ್ಞೆಯಂತೆ ಸೇವೆ ಮಾಡುತ್ತಾ ಬಂದಿವೆ. ಹರಪನಹಳ್ಳಿ ಉಪ್ಪಾರರು ದೇವಸ್ಥಾನಕ್ಕೆ ಸುಣ್ಣ-ಬಣ್ಣ ಹಚ್ಚುವುದು, ಓಬಳಾಪುರ ಗ್ರಾಮಸ್ಥರು ಹಗ್ಗ ಕಟ್ಟುವುದು, ಚಿಗಟೇರಿ, ಇತರೆ ಒಂದೊಂದು ಹಳ್ಳಿಯವರು ದೇವಸ್ಥಾನದಲ್ಲಿ ಸೇವೆ ಸಲ್ಲಿಸುವುದು ಈಗಲೂ ಕಾಣಬಹುದು.

ಪಂಚಗಣಾಧೀಶ್ವರರ ಚರಿತ್ರೆ
15ನೇ ಶತಮಾನದಲ್ಲಿ ಸಾಕ್ಷಾತ್ ದೇವರ ಸ್ವರೂಪದಲ್ಲಿ ಪ್ರತ್ಯಕ್ಷರಾದ ಪಂಚಗಣಾಧೀಶ್ವರರು ಚರಿತ್ರೆ ಮಧ್ಯ ಕರ್ನಾಟಕದಲ್ಲಿ ವಿಶಿಷ್ಟ ಗಮನ ಸೆಳೆದಿವೆ. ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ಕೊಟ್ಟೂರಿನ ಕೊಟ್ಟೂರೇಶ್ವರ, ಹರಪನಹಳ್ಳಿ ಕೆಂಪೇಶ್ವರ, ಅರಸೀಕೆರೆ ಕೋಲಶಾಂತೇಶ್ವರ ಮತ್ತು ಹರಪನಹಳ್ಳಿ ತಾಲೂಕಿನ ಮದ್ದಾನೇಶ್ವರ ಸಹೋದರರು ತಮ್ಮ ಪವಾಡ ಶಕ್ತಿಸಾಮರ್ಥ್ಯದಿಂದ ಪಂಚಗಣಾಧೀಶ್ವರರಾಗಿ ಖ್ಯಾತಿ ಪಡೆದವರು.

ರಥದಲ್ಲಿ ಕೊಟ್ಟೂರೇಶ್ವರ ಮೂರ್ತಿ
ಮದ್ದಾನೇಶ್ವರರ ಪುತ್ರ ಗೋಣಿಬಸವೇಶ್ವರ ಪವಾಡಗಳು ಇಂದಿಗೂ ಜನಮಾನಸದಲ್ಲಿ ನೆಲೆಸಿವೆ. ನಾಡಿನ ಅಲ್ಲಲ್ಲಿ 777 ಮಠ ಸ್ಥಾಪಿಸಿರುವ ಗೋಣಿ ಬಸವೇಶ್ವರರು ಚಿಕ್ಕ ವಯಸ್ಸಿನಲ್ಲಿ ಹಾವು ಹಿಡಿದು ಹುಲಿಗಳಿಂದ ಬೇಸಾಯ, ತುಂಗಭದ್ರ ನದಿ ದಾಟಿದ್ದು, ಸಾಯಿಸಿ ಕೆರೆಗೆಸೆದಾಗ ಬದುಕಿ ಬಂದ ಕಥೆಗಳು ದಾಖಲಾಗಿವೆ. ಅವರ ಹೆಸರಿನಲ್ಲಿ ಪ್ರಸಿದ್ಧಿಯಾಗಿರುವ ಜಾತ್ರೆಯಂದು ಗೋಣಿಬಸವೇಶ್ವರ ದೊಡ್ಡಪ್ಪ ಕೊಟ್ಟೂರಿನ ಗುರುಬಸವೇಶ್ವರರ ಮೂರ್ತಿ ರಥದಲ್ಲಿ ಪ್ರತಿಷ್ಠಾಪಿಸಿ ನೆರವೇರಿಸುವುದು ವಾಡಿಕೆ.