ವಿಜೃಂಭಣೆಯ ಕೊಂಡೋತ್ಸವ

ಕೊಳ್ಳೇಗಾಲ: ಪಟ್ಟಣದ ಪೀಸ್‌ಪಾರ್ಕ್ ರಸ್ತೆಯಲ್ಲಿರುವ ಶ್ರೀಬಣ್ಣಾರಿ ಅಮ್ಮನ್ ದೇವಸ್ಥಾನದ ಮುಂಭಾಗ ಮಂಗಳವಾರ ಮುಂಜಾನೆ ಕೊಂಡೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಆದಿಶಕ್ತಿ ಶ್ರೀಬಣ್ಣಾರಿ ಅಮ್ಮನ್ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸುಂದರಂ ಅವರು ಕೊಂಡ ಹಾಯುವ ಮೂಲಕ ಮುಂಜಾನೆ ಕೊಂಡೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಬಳಿಕ ಹತ್ತಾರು ಭಕ್ತರು ಹರ್ಷೋದ್ಘಾರದೊಂದಿಗೆ ಕೊಂಡ ಹಾಯ್ದು ಭಕ್ತಿಭಾವ ಮೆರೆದರು.

ಸೋಮವಾರ ಸಂಜೆ ಪಟ್ಟಣದ ಶ್ರೀಮರಳೇಶ್ವರಸ್ವಾಮಿ ಪುಷ್ಕರಣಿಯಿಂದ ಸಪ್ತ ಕನ್ಯರಿಂದ ದೇಗುಲಕ್ಕೆ ಮಂಗಳವಾದ್ಯದ ಮೆರವಣಿಗೆ ಮೂಲಕ ತೀರ್ಥ ತರಲಾಯಿತು. ನಂತರ ದೇಗುಲದ ಮುಂಭಾಗ ಮರದ ದಿಮ್ಮಿಗೆ ಅಗ್ನಿ ಸ್ಪರ್ಶಿಸಿ ಕೊಂಡ ಸಿದ್ಧಪಡಿಸಲಾಯಿತು.

ಮಂಗಳವಾರ ಮುಂಜಾನೆ 5 ಗಂಟೆಯಲ್ಲಿ ಶ್ರೀಮರಳೇಶ್ವರಸ್ವಾಮಿ ದೇಗುಲದ ಪುಷ್ಕರಣಿಯಿಂದ ನೂರಾರು ಭಕ್ತರು ಕಳಸಹೊತ್ತು ತಂದು ಕೊಂಡ ಹಾಯ್ದರು. ಏತನ್ಮಧ್ಯೆ ಮಣ್ಣಿನ ಮಡಕೆಯಲ್ಲಿ ಸಿದ್ಧಗೊಳಿಸಿದ ಅಗ್ನಿ ಕುಂಡವನ್ನು ಎರಡು ಕೈಯಲ್ಲಿಡಿದ ಹತ್ತಾರು ಮಹಿಳಾ ಭಕ್ತರು ಮತ್ತು ಮಕ್ಕಳು ಕೊಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು.

ಇದೇ ವೇಳೆ ದೇಗುಲಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಬಣ್ಣಾರಿ ಅಮ್ಮನ್ ಟ್ರಸ್ಟ್ ವತಿಯಿಂದ ತೀರ್ಥ, ಪ್ರಸಾದ ವಿನಿಯೋಗ ಮಾಡಲಾಯಿತು. ಮಧ್ಯಾಹ್ನ 1 ಗಂಟೆಯಲ್ಲಿ ದೇಗುಲದಲ್ಲಿ ಶ್ರೀಸ್ವಾಮಿಗೆ ಅಭಿಷೇಕ ಮತ್ತು ವಿಶೇಷ ಪುಷ್ಪಾಲಂಕೃತದೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ಸಂಜೆ 6 ಗಂಟೆಯಲ್ಲಿ ಮಡಿಯುಟ್ಟ ಮಹಿಳಾ ಭಕ್ತರು, ಪುಷ್ಪಗಳಿಂದ ಅಲಂಕೃತಗೊಂಡ ತಂಬಿಟ್ಟಿನ ಆರತಿ ಬೆಳಗಿದರು.

ಬುಧವಾರ ಶ್ರೀಮರಳೇಶ್ವರಸ್ವಾಮಿ ದೇವಸ್ಥಾನದಿಂದ ಬಣ್ಣಾರಿ ದೇಗುಲದವರೆಗೆ ಪಾದಯಾತ್ರೆ ಮೂಲಕ ಹರಕೆ ಹೊತ್ತ 50ಕ್ಕೂ ಹೆಚ್ಚು ಭಕ್ತರು 1 ಅಡಿಯಿಂದ 12 ಅಡಿ ಉದ್ದದ ಕಬ್ಬಿಣದ ಸಲಾಕೆಯಿಂದ ಬಾಯಿ ಬೀಗ ಸೇವೆ ಆರಂಭಿಸಲಿದ್ದಾರೆ. ಗುರುವಾರ ಬೆಳಗ್ಗೆ ತೀರ್ಥಕೊಡ ಮೆರವಣಿಗೆ, ಸಂಜೆ 4 ಗಂಟೆಗೆ ರಾಜಬೀದಿಗಳಲ್ಲಿ ಶ್ರೀಬಣ್ಣಾರಿ ಅಮ್ಮನವರ ಉತ್ಸವ ಜರುಗಲಿದೆ.

ಶ್ರೀಬಣ್ಣಾರಿ ಅಮ್ಮನ್ ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್, ಪದಾಧಿಕಾರಿಗಳಾದ ಶ್ರೀನಿವಾಸ್, ಕೃಷ್ಣ, ವೆಂಕಟೇಶ್ ಬಾಬು, ರಘು, ಕಂದಸ್ವಾಮಿ, ಮಣಿ, ಕಾರ್ತಿಕ್, ಪರಮೇಶ್ವರ್, ಸುಶೀಲಮ್ಮ, ಪದ್ಮ, ಜಯಮ್ಮ, ಲತಾ, ಮಂಜುಳ ಅವರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಕೊಂಡೋತ್ಸವ ಹಿನ್ನೆಲೆ ಪೀಸ್ ಪಾರ್ಕ್ ರಸ್ತೆಯಲ್ಲಿ ಮುಂಜಾನೆಯಿಂದ ಬೆಳಗ್ಗೆ 8 ಗಂಟೆವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪಟ್ಟಣ ಠಾಣೆ ಸಬ್‌ಇನ್ಸ್‌ಪೆಕ್ಟರ್ ವೀಣಾನಾಯಕ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.