More

    ಮೊದಲ ಎಂಆರ್​ಐ ಚಿತ್ರಕ್ಕೆ ಸುವರ್ಣ ಚೌಕಟ್ಟು

    ಮೊದಲ ಎಂಆರ್​ಐ ಚಿತ್ರಕ್ಕೆ ಸುವರ್ಣ ಚೌಕಟ್ಟುಬರೋಬ್ಬರಿ ಐವತ್ತು ವರ್ಷಗಳ ಹಿಂದೆ ಅಮೆರಿಕ ಮೂಲದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ಪಾಲ್ ಲಾಟರ್ ಬರ್ ಎಂಬ ಯುವ ವಿಜ್ಞಾನಿಯೊಬ್ಬ ತಾನು ಮಂಡಿಸಿದ ವಿಜ್ಞಾನ ಪ್ರಬಂಧದೊಡನೆ ಚಿತ್ರವೊಂದನ್ನು ಪ್ರಕಟಿಸಿದ. ಸ್ವಲ್ಪ ದೊಡ್ಡಗಾತ್ರದ ನಳಿಕೆಯೊಂದರಲ್ಲಿ ಅದಕ್ಕಿಂತ ತುಸು ಚಿಕ್ಕ ಗಾತ್ರದ ನಳಿಕೆಯನ್ನಿಟ್ಟು ಅಡ್ಡತ್ತಲಾಗಿ ಚಿತ್ರೀಕರಿಸಿರುವ ಚಿತ್ರವದು. ಚಿತ್ರ ಪ್ರಕಟವಾಗಿದ್ದೇ ದೊಡ್ಡ ಸಂಚಲನವನ್ನು ಸೃಷ್ಟಿಸಿತು. ಅದುವರೆಗೂ ಯಾರಿಗೂ ಕ್ಲಿಕ್ಕಿಸಲಾಗದ ವಿಜ್ಞಾನ ಕ್ಷೇತ್ರದ ಹತ್ತುಹಲವು ಘಟಾನುಘಟಿಗಳ ಕನಸಿನ ಕೂಸಾದ ಆ ಚಿತ್ರವನ್ನು ಅಂದು ಪಾಲ್ ನನಸಾಗಿಸಿದ್ದ. ಅಷ್ಟಕ್ಕೂ ಆ ಚಿತ್ರದಲ್ಲಿದ್ದುದು ಒಂದರಲ್ಲಿ ಇನ್ನೊಂದಿರುವ ಎರಡು ನಳಿಕೆಗಳು. ಚಿಕ್ಕ ನಳಿಕೆಯಲ್ಲಿ ಭಟ್ಟಿ ಇಳಿಸಿದ ನೀರಿದ್ದರೆ ಅದನ್ನು ಆವರಿಸಿಕೊಂಡ ದೊಡ್ಡ ನಳಿಕೆಯಲ್ಲಿ ಭಾರಜಲವಿತ್ತು. ಬರಿಗಣ್ಣಿನಲ್ಲಿ ಅಥವಾ ಕ್ಯಾಮೆರಾದಲ್ಲಿ ವ್ಯತ್ಯಾಸವನ್ನು ಗುರುತಿಸಲಾಗದಷ್ಟು ಸಾಮ್ಯತೆ ಹೊಂದಿರುವ ಈ ಎರಡು ವಿಧದ ನೀರುಗಳನ್ನು ಸ್ಪಷ್ಟವಾಗಿ ಗುರುತಿಸುವ ಛಾಯಾಚಿತ್ರವನ್ನು ಪಾಲ್ Nuclear magnetic resonance (NMR ಅಂದರೆ ಪರಮಾಣು ಆಯಸ್ಕಾಂತೀಯ ಅನುರಣನ ಎಂಬ ನೂತನ ತಂತ್ರಜ್ಞಾನವನ್ನು ಬಳಸಿ ಪ್ರಕಟಿಸಿದ್ದ. ಪಾಲ್ ಲಾಟರ್ ಬರ್​ನ ಈ ಆವಿಷ್ಕಾರ ಮುಂದಿನ ದಿನಗಳಲ್ಲಿ ಆಯಸ್ಕಾಂತೀಯ ಅನುರಣನ ಛಾಯಾಗ್ರಹಣ- Magnetic resonance imaging (MRI) ಎಂಬ ಹೆಸರಿನಲ್ಲಿ ಅಭಿವೃದ್ಧಿ ಹೊಂದಿತು ಮತ್ತು ಕಳೆದ ದಶಕದ ಮಾನವಕುಲಕ್ಕೆ ಉಪಯುಕ್ತ ವೈಜ್ಞಾನಿಕ ಸಂಶೋಧನೆಗಳಲ್ಲೊಂದೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.

    ವೈದ್ಯಕೀಯಶಾಸ್ತ್ರವೂ ಸೇರಿ ಹತ್ತುಹಲವು ಕ್ಷೇತ್ರಗಳಲ್ಲಿ ಬಳಸಲ್ಪಡುವ ರೇಡಿಯಾಲಾಜಿಯ (ವಿಕಿರಣಶಾಸ್ತ್ರ) ಒಂದು ವಿಭಾಗವಾಗಿರುವ ಎಮ್​ರ್ಐ ಭೌತಶಾಸ್ತ್ರದ ಕೆಲವು ಸೂತ್ರಗಳನ್ನು ಬಳಸುತ್ತದೆ. ಈ ತಂತ್ರಜ್ಞಾನ ವೈದ್ಯಶಾಸ್ತ್ರದಲ್ಲಿ ಹೆಚ್ಚಾಗಿ ಬಳಕೆಯಾಗತೊಡಗಿದ್ದು 1980ರ ಆಸುಪಾಸಿನಲ್ಲಿಯಾದರೂ ಇದರ ಮೂಲಯೋಚನೆಯನ್ನು 1930ರಲ್ಲಿ ಐ ಐ ರಬಿ ಎಂಬ ಭೌತಶಾಸ್ತ್ರಜ್ಞ ಹುಟ್ಟುಹಾಕಿದ್ದ. ಶಕ್ತಿಶಾಲಿ ಆಯಸ್ಕಾಂತೀಯ ಕ್ಷೇತ್ರದಲ್ಲಿ ಸೋಡಿಯಮ್ ಲವಣದ ಪ್ರತಿಕ್ರಿಯೆ ಕುರಿತು ರಬಿ ಮಾಡಿದ ಸಂಶೋಧನೆಗಳನ್ನು ಆಧಾರವಾಗಿ ಇರಿಸಿಕೊಂಡು ಪೀಟರ್ ಮಾನ್ಸಫೀಲ್ಡ್, ಎಡ್ವರ್ಡ್ ಪರ್ಸೆಲ್, ಫೇಲಿಕ್ಸ್ ಬ್ಲಾಶ್​ರಂಥ ಹಿರಿಯ ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ಮುಂದುವರಿಸಿದರು. ಈ ಸಮಯದಲ್ಲಿ ಎನ್​ಎಮ್​ರ್ ಕ್ಷೇತ್ರದಲ್ಲಿ ಎರಡು ರೀತಿಯ ಪ್ರಯತ್ನಗಳು ಒಟ್ಟಿಗೆ ನಡೆಯುತ್ತಿದ್ದವು. ನೀರು ಮತ್ತು ಇತರ ದ್ರವ್ಯಗಳಲ್ಲಿ ಆಯಸ್ಕಾಂತೀಯ ಅನುರಣನದ ವ್ಯತ್ಯಾಸವನ್ನು ಒಂದು ತಂಡ ಪತ್ತೆಹಚ್ಚುತ್ತಿದ್ದರೆ ಮತ್ತೊಂದು ತಂಡ ಈ ವ್ಯತ್ಯಾಸವನ್ನು ಛಾಯಾಚಿತ್ರದ ರೂಪದಲ್ಲಿ ಸೆರೆಹಿಡಿಯಲು ಶ್ರಮಿಸುತ್ತಿತ್ತು. ಈ ಎರಡನೇ ತಂಡದವರ ಪೈಕಿಯಲ್ಲಿ ಮುಂದಿದ್ದುದು ಪಾಲ್ ಲಾಟರ್ ಬರ್. ಕೊನೆಗೆ ಆ ಪ್ರಯತ್ನದಲ್ಲಿ ಮೊದಲ ಯಶಸ್ಸನ್ನು ಕಂಡವನು ಸಹ ಆತನೇ. ಇನ್ನು ಮೊದಲ ತಂಡದಲ್ಲಿದ್ದ ಎಡ್ವರ್ಡ್ ಪರ್ಸೆಲ್ ಮತ್ತು ಫೇಲಿಕ್ಸ್ ಬ್ಲಾಶ್ ಅವರಿಗೆ 1952ರಲ್ಲಿ ತಮ್ಮ ಸಂಶೋಧನೆಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಬಂತು.

    ‘ಯಶಸ್ಸಿಗೆ ಹಲವು ಅಪ್ಪಂದಿರು’ ಅಂತಾರಲ್ಲ ಈ ಪ್ರಶಸ್ತಿ ವಿಷಯದಲ್ಲೂ ಆದದ್ದೂ ಅದೇ. ಅದು ಘೊಷಣೆ ಆಗಿದ್ದೇ ತಡ ಹಲವು ವಿಜ್ಞಾನಿಗಳು ಇದು ತಮ್ಮ ಸಾಧನೆಯೆಂದು ಅಪಸ್ವರ ಎತ್ತಿದರು. ಬಹುಶಃ ನೊಬೆಲ್ ಪ್ರಶಸ್ತಿಯ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ಪ್ರಶಸ್ತಿ ಇದು ಎನ್ನುವಷ್ಟರ ಮಟ್ಟಿಗೆ ಈ ರಂಪಾಟ ನಡೆಯಿತು. ಅದಕ್ಕೊಂದು ಉದಾಹರಣೆಯೆಂದರೆ ಈ ಪ್ರಶಸ್ತಿ ಘೊಷಣೆಯಾಗುವ ಕೆಲವು ದಿನಗಳ ಮೊದಲು ರೇಮಂಡ್ ದಮಾಡಿಯನ್ ಎಂಬ ವಿಜ್ಞಾನಿ ಪ್ರತಿಷ್ಠಿತ ‘ನ್ಯೂಯಾರ್ಕ್ ಟೈಮ್್ಸ’ ಪತ್ರಿಕೆಯಲ್ಲಿ ಈ ಸಂಶೋಧನೆಯ ಅಸಲಿ ಹಕ್ಕುದಾರ ತಾನೆಂದು ಬಿಂಬಿಸಿಕೊಂಡು ಒಂದು ಪುಟದ ಜಾಹೀರಾತನ್ನು ಹಾಕಿಕೊಂಡ. ಆದರೆ ಅದೇನೆ ಇದ್ದರೂ ಮಾನವನ ಉಪಯೋಗದ ದೃಷ್ಟಿಕೋನದಿಂದ ಯೋಚಿಸಿದಲ್ಲಿ ಎಂಆರ್​ಐ ಶ್ರೇಯಸ್ಸು ರೇಮಂಡ್ ದಮಾಡಿಯನ್​ಗೆ ಸಲ್ಲಬೇಕು.

    ಕಳೆದ ವರ್ಷ ನಿಧನಹೊಂದಿದ ರೇಮಂಡ್, ಎಂಆರ್​ಐ ತಂತ್ರಜ್ಞಾನವನ್ನು ಬಳಸಿ ಮಾನವನಲ್ಲಿ ಕ್ಯಾನ್ಸರ್ ಸೇರಿ ಹತ್ತುಹಲವು ರೋಗಗಳನ್ನು ಪತ್ತೆಹಚ್ಚಬಲ್ಲ ವಿಶ್ವದ ಪ್ರಥಮ ಎಂಆರ್​ಐ ಸ್ಕಾ್ಯನಿಂಗ್ ಯಂತ್ರವನ್ನು ತಯಾರಿಸಿದ. ಇಲ್ಲಿ ಬಳಕೆಯಾದ ಸೂತ್ರ ಇಷ್ಟೇ. ಮಾನವನ ಅಂಗಾಂಶಗಳನ್ನು ದಟ್ಟ ಆಯಸ್ಕಾಂತೀಯ ಕ್ಷೇತ್ರದಲ್ಲಿ ಒಡ್ಡಿದ ನಂತರ ಅವುಗಳು ಪುನಃ ಸಹಜ ಸ್ಥಿತಿಗೆ ಬರುವ ಮುನ್ನ ರೇಡಿಯೋ ತರಂಗಗಳನ್ನು ಬಿಡುಗಡೆ ಮಾಡುತ್ತವೆ ಮತ್ತು ಈ ತರಂಗಗಳು ಅಂಗಾಂಶಗಳ ಆರೋಗ್ಯದ ಪರಿಸ್ಥಿತಿ ಮೇಲೆ ನಿರ್ಭರವಾಗಿರುತ್ತವೆ. ಅಂದರೆ ಒಂದೇ ಅಂಗಾಂಶವು ತಾನು ಆರೋಗ್ಯವಾಗಿರುವಾಗ ಮತ್ತು ಕ್ಯಾನ್ಸರ್​ನಂಥ ರೋಗಗಳು ಕಾಡಿದಾಗ ಭಿನ್ನ ರೀತಿಯ ರೇಡಿಯೋ ತರಂಗಗಳನ್ನು ಬಿಡುಗಡೆ ಮಾಡುತ್ತವೆ. ಈ ಭಿನ್ನತೆಯ ಆಧಾರದ ಮೇಲೆ ಸ್ಕಾ್ಯನ್ ಮಾಡಿದ ಅಂಗಾಂಶದ ಆರೋಗ್ಯದ ಪರಿಸ್ಥಿತಿಯನ್ನು ಎಂಆರ್​ಐ ಸ್ಕಾ್ಯನಿಂಗ್ ಯಂತ್ರವು ಪತ್ತೆಹಚ್ಚುತ್ತದೆ.

    ಪಾಲ್ ಲಾಟರ್ ಬರ್ 1973ರಲ್ಲಿ ಎಂಆರ್​ಐ ತಂತ್ರಜ್ಞಾನದಿಂದ ಮೊಟ್ಟಮೊದಲ ಬಾರಿಗೆ ಭಾರಜಲ ಮತ್ತು ಭಟ್ಟಿ ಇಳಿಸಿದ ನೀರನ್ನು ಪ್ರತ್ಯೇಕವಾಗಿ ಗುರುತಿಸುವ ಚಿತ್ರ ಪ್ರಕಟಿಸಿದ್ದೇ ತಡ ಈ ಕ್ಷೇತ್ರದಲ್ಲಿ ಹೊಸನೀರು ಹರಿಯತೊಡಗಿತು. ರೇಮಂಡ್ ದಮಾಡಿಯನ್ 1974ರಲ್ಲಿ ಎಂಆರ್​ಐ ಉಪಕರಣವನ್ನು ತಯಾರಿಸಿ ಅದಕ್ಕೆ ಪೇಟೆಂಟ್ ಕೂಡ ಪಡೆದ. 1979ರಲ್ಲಿ ಈ ಯಂತ್ರದಿಂದ ವಿಶ್ವದ ಮೊಟ್ಟಮೊದಲ ಮಾನವದೇಹದ ಎಂಆರ್​ಐ ಚಿತ್ರ ಹೊರಬಂತು. ಇದಾದ ಮೇಲೆ ಈ ತಂತ್ರಜ್ಞಾನ ಹಲವು ಮಜಲುಗಳನ್ನು ದಾಟಿದೆ. 80ರ ದಶಕದಲ್ಲಿ ಆಸ್ಪತ್ರೆಗಳಿಗೆ ನಿಧಾನವಾಗಿ ಲಗ್ಗೆ ಇಟ್ಟ ಈ ಯಂತ್ರಗಳು ಮೊದಲಿಗೆ ಸಿರಿವಂತರಿಗಾಗಿ ಮಾತ್ರ ಎಂಬ ಸ್ಥಿತಿಯಿತ್ತು. ನಂತರ ತಂತ್ರಜ್ಞಾನವು ಹೆಚ್ಚು ಅಭಿವೃದ್ಧಿ ಹೊಂದುತ್ತ ಅವುಗಳ ಖರ್ಚುವೆಚ್ಚ ಗಣನೀಯವಾಗಿ ಇಳಿದು ಇದೀಗ ಜನಸಾಮಾನ್ಯರಿಗೂ ಎಟುಕುವಂತಾಗಿದೆ. ಈ ಮೊದಲು ಹೆಚ್ಚು ಚಾಲ್ತಿಯಲ್ಲಿದ್ದMagnetic resonance imaging (MRI) CT ಸ್ಕಾ್ಯನ್ ಹಾಗೂ ಎಕ್ಸ್​ರೇಗಳು ಕಡಿಮೆಶಕ್ತಿಯ ವಿಕಿರಣವನ್ನು ಬಳಕೆದಾರರಿಗೆ ನೀಡುವುದೂ ಎಂಆರ್​ಐ ಕಡೆಗೆ ಅವರುಗಳು ವಾಲಲು ಬಹುಮುಖ್ಯ ಕಾರಣ. ಜನರಲ್ಲಿರುವ ವಿಕಿರಣ ಕುರಿತ ಭಯವನ್ನು ಅರಿತು, ಅದನ್ನು ಎನ್​ಕ್ಯಾಶ್ ಮಾಡಿಕೊಳ್ಳಲು ಮೊದಲಿದ್ದ Nuclear magnetic resonance (NMR) ಹೆಸರನ್ನು ಬದಲಿಸಿ Magnetic resonance imaging (MRI) ಎಂಬ ಹೆಸರಿಟ್ಟಿರುವುದು ಎನ್ನುವ ಅಪವಾದ ಅದರ ತಯಾರಕರ ಮೇಲೆ ಮೊದಲಿನಿಂದಲೂ ಇದೆ.

    ಬಹುಶಃ ಎಲುಬುಗಳನ್ನು ಹೊರತುಪಡಿಸಿ ದೇಹದ ಉಳಿದ ಅಂಗಾಂಶಗಳನ್ನು ಯಾವುದೇ ಕೋನದಿಂದ ಸ್ಕಾ್ಯನ್ ಮಾಡಬಲ್ಲ ಸಾಮರ್ಥ್ಯದ ಜೊತೆಗೆ ಅವುಗಳ ಉತ್ತಮದರ್ಜೆಯ ಚಿತ್ರಗಳನ್ನು ನೀಡಬಲ್ಲ ಕ್ಷಮತೆ ಈ ಯಂತ್ರಗಳಿಗಿರುವುದು ಮತ್ತೊಂದು ಹೆಗ್ಗಳಿಕೆ. ಇದರ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಲು ಬಹುಮುಖ್ಯ ತೊಡಕಾಗಿದ್ದ ತುಟ್ಟಿ ಬಾಬ್ತು ಎಂಬ ಹಣೆಪಟ್ಟಿಯನ್ನು ಕಳಚಲು ಈ ಯಂತ್ರದ ತಯಾರಕರು ಅಳವಡಿಸಿಕೊಂಡ ಹೊಸ ತಂತ್ರಜ್ಞಾನದ ಫಲವಾಗಿ ಖರ್ಚುವೆಚ್ಚದ ಜೊತೆಗೆ ವಿದ್ಯುತ್ ಬಳಕೆಯ ಪ್ರಮಾಣವನ್ನೂ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬರುತ್ತಿರುವ ಸುಧಾರಿತ ಯಂತ್ರಗಳಲ್ಲಿ ಗಣನೀಯವಾಗಿ ತಗ್ಗಿಸಲಾಗುತ್ತಿದೆ.

    ಮತ್ತೊಂದೆಡೆ ಈ ಯಂತ್ರಗಳಿಂದ ಮೂಡುವ ಚಿತ್ರಗಳ ಸ್ಪಷ್ಟತೆಗೆ ಹಲವು ಕಸರತ್ತುಗಳನ್ನು ಮಾಡಲಾಗುತ್ತದೆ. ಇತ್ತೀಚಿನವರೆಗೂ ಅದಕ್ಕಾಗಿ ಆಯಸ್ಕಾಂತೀಯ ಕ್ಷೇತ್ರದ ಶಕ್ತಿಯನ್ನು ಹೆಚ್ಚಿಸುತ್ತಿದ್ದರಾದರೂ ಈಗಿನ ತಾಂತ್ರಿಕತೆಯಲ್ಲಿ ರೋಗಿಯ ದೇಹದಲ್ಲಿ ಚುಚ್ಚುಮದ್ದುಗಳ ಮೂಲಕ ಕೆಲವೊಂದು ಸಂಯುಕ್ತಗಳನ್ನು ಸೇರಿಸಿ ಆ ಮೂಲಕ ಸ್ಕಾ್ಯನ್ ಯಂತ್ರದಿಂದ ಮೂಡಿಬರುವ ಚಿತ್ರಗಳ ಗುಣಮಟ್ಟ ಅತ್ಯುತ್ತಮವಾಗಿರುವಂತೆ ನೋಡಿಕೊಳ್ಳಲಾಗುತ್ತದೆ.

    ಜಾಗತಿಕವಾಗಿ ಪ್ರತಿವರ್ಷ 130 ಮಿಲಿಯನ್ ಎಂಆರ್​ಐ ಸ್ಕಾ್ಯನ್​ಗಳನ್ನು ಮಾಡಲಾಗುತ್ತಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಭಾರತದ ಮಟ್ಟಿಗೆ ಹೇಳುವುದಾದರೆ ನಮ್ಮಲ್ಲಿ ಅಂದಾಜು ನಾಲ್ಕೂವರೆ ಸಾವಿರ ಎಂಆರ್​ಐ ಸ್ಕಾ್ಯನಿಂಗ್ ಯಂತ್ರಗಳಿವೆ. ಆದರೆ ಇದು ನಮ್ಮಲ್ಲಿನ ಜನಸಂಖ್ಯೆ ದೃಷ್ಟಿಯಿಂದ ತುಂಬ ಕಡಿಮೆ. ಇದಕ್ಕೆ ಕಾರಣ ಈ ಯಂತ್ರಗಳು ತಯಾರಾಗುವುದು ವಿದೇಶದಲ್ಲಿ. ಹೀಗಾಗಿ ನಮ್ಮಲ್ಲಿ ಬಂದು ತಲುಪುವಷ್ಟರಲ್ಲಿ ಖರ್ಚು ಐದು ಕೋಟಿ ಆಜೂಬಾಜೂ. ಇದರ ಜೊತೆಗೆ ಈ ಯಂತ್ರಗಳ ಆಯಸ್ಕಾಂತಗಳನ್ನು ತಣಿಸಲು ಬಳಸಲ್ಪಡುವ ಹೀಲಿಯಮ್ ಇದೀಗ ನಡೆಯುತ್ತಿರುವ ರಷ್ಯಾ-ಯೂಕ್ರೇನ್ ಯುದ್ಧದ ಕಾರಣ ಮಾರುಕಟ್ಟೆಯಲ್ಲಿ ಸಿಗುವುದು ದುಸ್ತರವಾಗಿದೆ. ಇದು ನಮ್ಮಲ್ಲಿ ಈ ಯಂತ್ರಗಳ ಕೊರತೆಗೆ ಮುಖ್ಯ ಕಾರಣವೆಂದು ಹೇಳಲಾಗುತ್ತದೆ. ಆದರೆ ಅದಕ್ಕೆಲ್ಲ ಉತ್ತರ ಸಿಗುವ ಕಾಲ ಇದೀಗ ಒದಗಿಬಂದಿದೆ. ಬೆಂಗಳೂರು ಮೂಲದ ಒಕ್ಸೆಲ್ ಗ್ರಿಡ್ ಎಂಬ ಕಂಪನಿಯೊಂದು ಭಾರತದ ಮೊದಲ ಸ್ವದೇಶಿ ಎಂಆರ್​ಐ ಸ್ಕಾ್ಯನಿಂಗ್ ಯಂತ್ರವನ್ನು ಕೆಲದಿನಗಳ ಹಿಂದೆ ಬಿಡುಗಡೆ ಮಾಡಿದೆ. ವಿದೇಶಿ ವಿನಿಮಯವನ್ನು ಉಳಿಸುವ, ಅಲ್ಲಿನ ಯಂತ್ರಗಳ ಶೇಕಡ ಅರವತ್ತರಷ್ಟು ಖರ್ಚಿನಲ್ಲಿ ನಮ್ಮಲ್ಲೇ ದೊರಕುವ ಜೊತೆಗೆ ದ್ರವ್ಯ ನೈಟ್ರೋಜನ್ ಬಳಸಿ ಹೀಲಿಯಮ್ ಕೊರತೆಗೂ ಕ್ಯಾರೇ ಅನ್ನದ ಈ ಯಂತ್ರದ ಕುರಿತು ವೈದ್ಯಕೀಯ ಕ್ಷೇತ್ರದಲ್ಲಿ ಕುತೂಹಲವಿದೆ. ಮೊದಲ ಎಂಆರ್​ಐ ಚಿತ್ರದ ಸುವರ್ಣಸಂಭ್ರಮದ ಸಮಯದಲ್ಲಿ ಬಂದಿರುವ ಈ ಸ್ಕಾ್ಯನಿಂಗ್ ಯಂತ್ರ ಶ್ರೀಸಾಮಾನ್ಯನಿಗೆ ನಿಜಕ್ಕೂ ವರವಾಗಲಿದೆಯೇ ಕಾದುನೋಡೋಣ.

    (ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

    ವಿಶ್ವಕಪ್​ ಫೈನಲ್ ಪಂದ್ಯಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಕಪಿಲ್ ದೇವ್

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts