ಚಿನ್ನಾಭರಣ ಹರಾಜಿಗೆ ಖಂಡನೆ

ಮಂಡ್ಯ: ರೈತರು ಗಿರವಿ ಇಟ್ಟಿರುವ ಚಿನ್ನಾಭರಣಗಳನ್ನು ಬ್ಯಾಂಕ್ ಹರಾಜು ಹಾಕಲು ಮುಂದಾಗಿರುವ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲೂಕಿನ ಹೊಳಲು ಗ್ರಾಮದ ಎಸ್‌ಬಿಐ ಶಾಖೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬ್ಯಾಂಕ್ ಮುಂದೆ ಜಮಾಯಿಸಿದ ರೈತರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ನೋಟಿಸ್‌ಗಳನ್ನು ಹರಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಸತತ ನಾಲ್ಕೈದು ವರ್ಷಗಳಿಂದ ಬರಗಾಲವಿದ್ದು, ರೈತರು ತತ್ತರಿಸಿದ್ದಾರೆ. ಬೆಳೆ ಹಾಗೂ ಬೆಲೆ ನಷ್ಟ ಎರಡನ್ನೂ ಅನುಭವಿಸಿದ್ದಾರೆ. ಸಾಲ ತೀರಿಸಲಾಗದೆ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ರಾಜ್ಯ ಸರ್ಕಾರ ರೈತರಿಗೆ ನೋಟಿಸ್ ನೀಡುವುದು ಮತ್ತು ಚಿನ್ನಾಭರಣ ಹರಾಜು ಪ್ರಕ್ರಿಯೆ ನಡೆಸುವಂತಿಲ್ಲ ಎಂಬ ಆದೇಶ ನೀಡಿದೆ. ಆದರೂ, ಅಧಿಕಾರಿಗಳು ನೋಟಿಸ್ ಕೊಟ್ಟು ಮಾನಸಿಕವಾಗಿ ಕಿರುಕುಳ ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಪಿ.ಕೆ.ನಾಗಣ್ಣ, ಮುಖಂಡರಾದ ಹಲ್ಲೆಗೆರೆ ಹರೀಶ್, ಕನ್ನಲಿ ನವೀನ್, ನಾಗರಾಜು, ಎಚ್.ಕೆ.ಕೃಷ್ಣ, ರೇಣುಕುಮಾರ್, ಸಂದೀಪ್, ದೊರೆಸ್ವಾಮಿ, ಶಿವಣ್ಣ, ಸತೀಶ್, ಎಚ್.ಎಂ.ಪುಟ್ಟಸ್ವಾಮಿ, ಚಿಕ್ಕಣ್ಣ, ಆನಂದ್ ಇತರರಿದ್ದರು.