More

    2 ಕೋಟಿ ರೂಪಾಯಿ ಮೌಲ್ಯದ ಚಿನ್ನ ಪತ್ತೆ: ಕಳ್ಳಸಾಗಣೆಗೆ ಕಂಡುಕೊಂಡ ವಿಧಾನ ಕಂಡು ಹುಬ್ಬೇರಿಸಿದ ಅಧಿಕಾರಿಗಳು!

    ಮಂಗಳೂರು: ಕಳೆದೊಂದು ದಶಕದ ಅವಧಿಯಲ್ಲಿ ಅತೀ ದೊಡ್ಡ ಮೊತ್ತದ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ(ಡಿಆರ್‌ಐ) ಅಧಿಕಾರಿಗಳು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.
    ವಿದೇಶದಿಂದ 2 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ಸೋಮವಾರ ಕಾರ್ಯಾಚರಣೆ ನಡೆಸಿ ಚಿನ್ನ ವಶಪಡಿಸಿಕೊಂಡಿದ್ದಾರೆ.
    ಉಡುಪಿಯ ಸ್ವರೂಪ್ ಮಿನರಲ್ ರಿಸೋರ್ಸಸ್ ಕಂಪನಿ ನಿರ್ದೇಶಕ ಮನೋಹರ್ ಕುಮಾರ್ ಪೂಜಾರಿ ಮತ್ತು ಮಂಗಳೂರಿನ ಅಶೋಕನಗರ ನಿವಾಸಿ ಲೋಹಿತ್ ಶ್ರೀಯಾನ್ ಬಂಧಿತ ಆರೋಪಿಗಳು.

    ಗಣಿ ಉದ್ಯಮದಲ್ಲಿ ಬಳಸುವ ಲೋಹದ ಕನ್ವೆಯರ್ ಡ್ರೈವ್ ಚೈನ್‌ನ ಒಳಭಾಗದಲ್ಲಿರಿಸಿ ಚಿನ್ನ ಕಳ್ಳಸಾಗಣೆ ಮಾಡಿದ್ದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಮನೋಹರ್ ಕುಮಾರ್‌ನನ್ನು ಬೆಂಗಳೂರಿನಲ್ಲಿ ಬಂಧಿಸಿದರೆ, ಲೋಹಿತ್‌ನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಬೆಂಗಳೂರು ಮತ್ತು ಮಂಗಳೂರು ಡಿಆರ್‌ಐ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದರು.

    ಸ್ವರೂಪ್ ಮಿನರಲ್ ರಿಸೋರ್ಸಸ್ ಕಂಪನಿ ಮೈನಿಂಗ್ ಕನ್ವೆಯರ್ ಡ್ರೈವ್ ಚೈನ್ ಆಮದು ಮಾಡಿಕೊಳ್ಳುತ್ತಿದ್ದು, ಸರಕು ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತ್ತು. ಅದರೊಳಗೆ ಚಿನ್ನ ಅಡಗಿಸಿಟ್ಟು ಸಾಗಾಟ ಮಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಲಭಿಸಿದ ಮಾಹಿತಿ ಪ್ರಕಾರ ಸರಕನ್ನು ಸ್ಕ್ಯಾನ್ ಮಾಡಲಾಗಿದ್ದು, ತಾಂತ್ರಿಕ ಸಿಬ್ಬಂದಿ ಮತ್ತು ಲೇಥ್ ಬಳಸಿ ಅದನ್ನು ತೆರೆಯಲಾಯಿತು.

    ಮೈನಿಂಗ್ ಕನ್ವೇಯರ್ ಬೆಲ್ಟ್‌ನ ಒಳಭಾಗದಲ್ಲಿ ಐದು ವೃತ್ತಾಕಾರದ ಚಿನ್ನದ ತಟ್ಟೆಗಳನ್ನು ಅಡಗಿಸಿಡಲಾಗಿತ್ತು. ಅವುಗಳಲ್ಲಿ 24 ಕ್ಯಾರಟ್ ಗುಣಮಟ್ಟದ ಒಟ್ಟು 4.995 ಕೆ.ಜಿ. ಚಿನ್ನ ಪತ್ತೆಯಾಗಿದೆ. ಚಿನ್ನ ಕಳ್ಳಸಾಗಣೆಯ ಜಾಲ ಮತ್ತು ಅದರಲ್ಲಿ ಹೂಡಿಕೆ ಮಾಡುತ್ತಿದ್ದವರು ಹಾಗೂ ಈವರೆಗೆ ನಡೆದಿರುವ ಕಳ್ಳಸಾಗಣೆಯ ಒಟ್ಟು ಪ್ರಮಾಣದ ಕುರಿತು ತನಿಖೆ ಮುಂದುವರಿದಿದೆ ಎಂದು ಡಿಆರ್‌ಐ ಉಪ ನಿರ್ದೇಶಕ ಶ್ರೇಯಸ್ ಕೆ.ಎಂ. ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts