ಹುಚ್ಚೆದ್ದಿದೆ ಹೊನ್ನಪೇಟೆ

ಹತ್ತು ಗ್ರಾಂ ಚಿನ್ನಕ್ಕೆ 40 ಸಾವಿರ ರೂಪಾಯಿ ಎಂಬುದು ಈಗ ಹೆಣ್ಣುಮಕ್ಕಳಿಗೆ ಹಾರ್ಟ್ ಅಟ್ಯಾಕ್ ಆಗುವ ಸಂಗತಿ. ಎಂದೆಂದೂ ಕಾಣದ ಬೆಲೆ ಏರಿಕೆಯು ಈಗ ಚಿನ್ನಕ್ಕೆ ಬಂದುಬಿಟ್ಟಿದೆ. ಈಚೆಗಷ್ಟೇ ಅಪರಂಜಿ ಚಿನ್ನಕ್ಕೆ ಹತ್ತು ಗ್ರಾಂ.ಗೆ 33 ಸಾವಿರ ರೂಪಾಯಿ ಇತ್ತು. ಅದೇ ದೊಡ್ಡ ಬೆಲೆ. ದುಬಾರಿ ಬೆಲೆ. ವಿಪರೀತಕ್ಕೆ ಹೋಗಿದೆ ಚಿನ್ನದ ಬೆಲೆ ಎನ್ನುತ್ತಿದ್ದರು ಜನರು. ಆದರೆ, ಈಗ ನೋಡಿ. 24 ಕ್ಯಾರಟ್ ಅಪರಂಜಿ ಚಿನ್ನವಿರಲಿ, 22 ಕ್ಯಾರಟ್ ಚಿನ್ನಕ್ಕೆ 10 ಗ್ರಾಂ.ಗೆ 36 ಸಾವಿರ ರೂಪಾಯಿ! ಅಪರಂಜಿಗೆ 40 ಸಾವಿರ ರೂಪಾಯಿ!

ಈಗ ನಿಜಕ್ಕೂ ಚಿನ್ನ ಗಗನಚುಂಬಿ! ಇದೇ ವಿತ್ತವಾಣಿಯಲ್ಲಿ ಜೂನ್ 23ರಂದು ಬರೆದಿದ್ದೆ, ‘ಹತ್ತು ಗ್ರಾಂ ಚಿನ್ನದ ಬೆಲೆ 50 ಸಾವಿರ ರೂ.ಆಗಲಿದೆ’ ಎಂದು. ಈಗಿನ ವಿಶ್ವದ ಉಗ್ರ ಪರಿಸ್ಥಿತಿ ನೋಡಿದರೆ ‘50 ಸಾವಿರ ರೂ.ಏನು ಮಹಾ’ ಎಂಬಂತೆ ಕಾಣುತ್ತಿದೆ. ಚಿನ್ನದ ಪೇಟೆಗೆ, ಜನರಿಗೆ ದಿಗಿಲು-ಮುಗಿಲು ಮುಟ್ಟಿದೆ. ಇದೆಲ್ಲ ಈಗ ಎರಡು ತಿಂಗಳ ಹಿಂದೆ ಇರಲಿಲ್ಲ. ಕಳೆದ ಡಿಸೆಂಬರ್ ವೇಳೆಗೆ ವಿಶ್ವಪೇಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 1200 ಡಾಲರ್ ಬಳಿ ಇತ್ತು. ಎಲ್ಲ ಪರಿಸ್ಥಿತಿ ನೋಡಿದರೆ ಶೇ.50ರಷ್ಟು ಏರಿಕೆ ಬರಬಹುದು ಎಂಬ ಲೆಕ್ಕಾಚಾರ ಇತ್ತು. ಅಂದರೆ, 1800 ಡಾಲರ್​ಗೆ ಚಿನ್ನದ ಬೆಲೆ ಬರುತ್ತದೆ ಎಂಬುದು ಆಗಿನ ನಿರೀಕ್ಷೆ. ಈಗ ವಿಶ್ವಪೇಟೆಯಲ್ಲಿ ಚಿನ್ನವು 1500 ಡಾಲರ್ ದಾಟಿ ನಿಂತಿದೆ. ಅದು ಗೂಳಿಯಂತೆ ನುಗ್ಗುತ್ತಿದೆ. ಇದು ನಾವು ಕಂಡು ಕೇಳರಿಯದ್ದು.

2013ರಲ್ಲಿ ಗರಿಷ್ಠ ಬೆಲೆ: ನಮ್ಮ ಚಿನ್ನದ ಪೇಟೆಯಲ್ಲಿ ಗರಿಷ್ಠ ಬೆಲೆ ಬಂದಿದ್ದು 2013ರಲ್ಲಿ. ಆಗ 10 ಗ್ರಾಂ ಅಪರಂಜಿ ಚಿನ್ನಕ್ಕೆ 33 ಸಾವಿರ ರೂಪಾಯಿ ಆಗಿತ್ತು. ವಿಶ್ವಪೇಟೆಯಲ್ಲಿ ಆಗ ಒಂದು ಔನ್ಸ್​ಗೆ 19 ಸಾವಿರ ಡಾಲರ್ ಆಗಿತ್ತು. ಬಳಿಕ ಚಿನ್ನದ ಪೇಟೆ ಕುಸಿಯಿತು. ಅದಕ್ಕೆ ಕಾರಣ ಕಾಣೆಯಾದ ಹಣದ ಪ್ರವಾಹ! 2008ರ ವಿಶ್ವ ಆರ್ಥಿಕ ಮುಗ್ಗಟ್ಟಿನ ಪರಿಣಾಮವಾಗಿ ವಿಶ್ವಾದ್ಯಂತ ಬ್ಯಾಂಕುಗಳು ಅರ್ಥ ವ್ಯವಸ್ಥೆಯ ಏಳಿಗೆಗೆ ಎರಡು ಟ್ರಿಲಿಯನ್ (2 ಸಾವಿರ ಬಿಲಿಯನ್) ಡಾಲರ್ ಹಣ ತುಂಬಿದ್ದವು. ಈ ಹಣವು ಅರ್ಥವ್ಯವಸ್ಥೆಗೆ ಹೋಗಲಿಲ್ಲ, ಅದು ಚಿನ್ನದ ಪೇಟೆಗೆ ಬಂದಿತ್ತು. ಹೀಗಾಗಿ, ಆಗ 900 ಡಾಲರ್ ಬಳಿ ಇದ್ದ ಔನ್ಸ್ ಬಂಗಾರದ ಬೆಲೆ 1900 ಡಾಲರ್​ಗೆ ಜಿಗಿದಿತ್ತು. ಬಳಿಕ, ಈ ಹಣದ ಪ್ರವಾಹವು ಬಂದ್ ಆಯಿತು. ಹಣವಿಲ್ಲದೆ ಹೊನ್ನಪೇಟೆಯು ಪಾತಾಳಕ್ಕೆ ಇಳಿಯಿತು. 2015ರಲ್ಲಿ ಅದು 1050 ಡಾಲರ್​ಗೂ ಕುಸಿದಿತ್ತು. ಆಗ ನಮ್ಮ ಪೇಟೆಯಲ್ಲಿ ಚಿನ್ನದ ಬೆಲೆ 28 ಸಾವಿರ ರೂ.ನತ್ತ ಸಾಗಿತ್ತು. ಈ ಹೊನ್ನ ಮುಗ್ಗಟ್ಟು 2013ರಿಂದ 2018ರವರೆಗೆ ಹರಡಿತ್ತು. ಚಿನ್ನದ ಬೆಲೆ ವಿಶ್ವಪೇಟೆಯಲ್ಲಿ ಈ ಅವಧಿಯಲ್ಲಿ 1360 ಡಾಲರ್ ದಾಟಲೇ ಇಲ್ಲ. ಆದರೂ ನಮ್ಮ ಪೇಟೆಯಲ್ಲಿ ಚಿನ್ನದ ಬೆಲೆ ಮೇಲಿತ್ತು. ಅದಕ್ಕೆ ಕಾರಣ ಕುಸಿದ ರೂಪಾಯಿ ಮೌಲ್ಯ.

ಈ ಆಟ ಬದಲಾಗಿದ್ದು ಜೂನ್ ತಿಂಗಳಿನಲ್ಲಿ. ಆಗ 1285 ಡಾಲರ್ ಬಳಿ ಇದ್ದ ವಿಶ್ವಪೇಟೆ ಚಿನ್ನದ ಬೆಲೆ ಜುಲೈನಲ್ಲಿ 1400 ಡಾಲರ್ ದಾಟಿತು. ಆಗ ಆರು ವರ್ಷಗಳಿಂದ ಇದ್ದ 1360 ಡಾಲರ್​ನ ಸೀಮಾರೇಖೆಯನ್ನು ಉಲ್ಲಂಘನೆ ಮಾಡಿತು. ಜುಲೈ ಅಂತ್ಯಕ್ಕೆ 1400 ಡಾಲರ್ ಬಳಿಯಿದ್ದ ಬೆಲೆ ಈಗ 1509 ಡಾಲರ್ ದಾಟಿದೆ. ಇನ್ನು ಇಳಿಯುವ ಮಾತೇ ಇಲ್ಲ, ಏರಿಕೆಯೇ ಎಲ್ಲ ಎಂದು ನಂಬುವ ಸನ್ನಿವೇಶ ಮೂಡಿದೆ.

ಏಕೆ ಈ ಬದಲಾವಣೆ?: 1360 ಡಾಲರ್ ಅಂದರೆ ನಮ್ಮಲ್ಲಿ 33 ಸಾವಿರ ರೂಪಾಯಿ ಬೆಲೆ ಕಿತ್ತೊಗೆಯುವ ಕಾಲ ಏಕೆ ಬಂತು? ವಿಶ್ವದಲ್ಲಿ ಹಲವು ಬದಲಾವಣೆಗಳು ಜುಲೈನಲ್ಲಿ ಆದವು. ಅವುಗಳಲ್ಲಿ ಮೊದಲನೆಯದು ವಿಶ್ವಪೇಟೆಯಲ್ಲಿ ಬಡ್ಡಿದರ ಇಳಿಕೆ ಸರಣಿ ಆರಂಭವಾದದ್ದು. ಅಮೆರಿಕದ ಕೇಂದ್ರ ಬ್ಯಾಂಕ್ ‘ಫೆಡ್’ ಇಲ್ಲಿಯವರೆಗೆ ಬಡ್ಡಿದರವನ್ನು ವರ್ಷಗಟ್ಟಲೆಯಿಂದ ಏರಿಸುತ್ತಿತ್ತು. ಬಡ್ಡಿದರ ಏರಿಕೆಯು ಡಾಲರ್ ಅನ್ನು ಬಲಪಡಿಸುತ್ತಿತ್ತು. ‘ಡಾಲರ್​ಗೆ ಬಲ, ಚಿನ್ನ ದುರ್ಬಲ’ ಇದು ಪೇಟೆ ಸತ್ಯ. ಈಗ ಈ ಸತ್ಯ ಅಳಿಸಿ ಹೋಯಿತು. ಫೆಡ್ ಬಡ್ಡಿದರ ಏರಿಕೆಗೆ ಜಗತ್ತಿನ ದಾದ, ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಅಮೆರಿಕದಲ್ಲಿ ಏಳಿಗೆ ಬರುತ್ತಿದೆ, ಬಡ್ಡಿ ಏರಿಸಿ ಅದನ್ನು ನೀವು ಹಾಳು ಮಾಡುತ್ತಿದ್ದೀರಿ ಎಂದು ಅವರು ಗುಡುಗು ಹಾಕುತ್ತಿದ್ದರು. ಕೊನೆಗೆ ಇನ್ನೊಂದು ಅಸ್ತ್ರ ಬಂತು, ಅದೇ ಚೀನಾ-ಅಮೆರಿಕ ವ್ಯಾಪಾರ ಸಮರ. ಈ ಸಮರವು ಜಗತ್ತಿಗೇ ಪೀಡೆ ಎಂದು ವಿಶ್ವವೆಲ್ಲ ಬೊಬ್ಬೆ ಹಾಕಿತು. ವಿಶ್ವ ಆರ್ಥಿಕ ಮುಗ್ಗಟ್ಟು ಹಿಂಬಾಗಿಲಿನಿಂದ ಬರುತ್ತಿದೆ ಎಂಬ ಕೂಗೂ ಎದ್ದಿತು. ಆಗ ಫೆಡ್ ಬಡ್ಡಿದರ ಇಳಿಕೆ ಪ್ರವೃತ್ತಿ ಆರಂಭವಾಯಿತು. ಅದು ಬಡ್ಡಿ ಇಳಿಸುತ್ತೇನೆ ಎಂದಾಗಲೇ ವಿಶ್ವಪೇಟೆಯಲ್ಲಿ ಚಿನ್ನದ ಬೆಲೆ 1360 ಡಾಲರ್​ನ ಲಕ್ಷ್ಮಣರೇಖೆ ಮೀರಿ 1400 ಡಾಲರ್ ಬಂತು. ಈಗ ಈ ಬಡ್ಡಿದರ ಇಳಿಕೆ ಸತತವಾಗಿ ವರ್ಷಾಂತ್ಯದವರೆಗೆ ಎನ್ನುವ ನಿರೀಕ್ಷೆ ಮೂಡಿದೆ. ಹೀಗಾಗಿ, ಬೆಲೆ ಎರಡೇ ವಾರದಲ್ಲಿ 1400ರಿಂದ 1500 ಡಾಲರ್ ದಾಟಿದೆ. 1650 ಡಾಲರ್ ಬರುತ್ತದೆ ಎನ್ನುತ್ತಿದ್ದಾರೆ. 2000 ಡಾಲರ್ ಸಹ ಬರಲಿದೆ ಎನ್ನುವವರಿದ್ದಾರೆ. 10 ಸಾವಿರ ಡಾಲರ್ ಕೂಗು ಹಾಕುವವರೂ ಇದ್ದಾರೆ! ಒಟ್ಟಿನಲ್ಲಿ ಹೊನ್ನಪೇಟೆ ಹುಚ್ಚೆದ್ದಿದೆ.

ಕರೆನ್ಸಿ ಕಾಳಗ!: ಮುಂದಿನ ಮಹಾಕಾಳಗ ಎಂದರೆ ಅಮೆರಿಕ-ಚೀನಾ ವ್ಯಾಪಾರ ಸಮರ. ಇದು ಗಂಡಾಂತರಕ್ಕೆ ಇಟ್ಟುಕೊಳ್ಳುವಂತಿದೆ. ಅಮೆರಿಕ 15 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ ಎಂದು ನಂ.1 ಪಟ್ಟ ಹೊಂದಿದೆ. ಚೀನಾ 13.5 ಟ್ರಿಲಿಯನ್ ಡಾಲರ್​ನಲ್ಲಿ ರನ್ನರ್​ಅಪ್ ಆಗಿದೆ. ಇವು ಎರಡು ದಶಕಗಳಿಂದ ಗಳಸ್ಯ-ಕಂಠಸ್ಯ ಆಗಿದ್ದವು. ಅವರ ಜೇಬಿನಲ್ಲಿ ಇವರ ಕೈ, ಇವರ ಕೈ ತುತ್ತು ಅವರ ಬಾಯಿಯಲ್ಲಿ ಎನ್ನುವ ಸ್ಥಿತಿ ಟ್ರಂಪ್ ಬರುವವರೆಗೂ ಇತ್ತು. ಆಗ ಅಮೆರಿಕದ ಸಾಲಪತ್ರ ತುಂಬಿತ್ತು ಚೀನಾದಲ್ಲಿ. ಅಮೆರಿಕವು ಚೀನಾದ ಸಾಲದ ಮೇಲೆ ತುಪ್ಪ ಹಾಕಿ ಚಪ್ಪರಿಸುತ್ತಿತ್ತು. ಈಗ ಹಾಗಿಲ್ಲ. ‘ದುಷ್ಮನ್ ಕಂಹಾ ಹೈ?’ ಅಂದರೆ ‘ಬಗಲ್ ಮೇ ಹೈ’ ಎನ್ನುವಂತಾಗಿದೆ. ಚೀನಾ ಮಣಿಸಲು ಅಮೆರಿಕ ಹೊರಟಿದೆ. ಇದು ಚಿನ್ನಕ್ಕೆ ಸುವರ್ಣ ಕಾಲ ತಂದಿದೆ! ಫೆಡ್ ಬ್ಯಾಂಕ್​ನ ಬಡ್ಡಿದರ ಇಳಿಕೆ ಒಂದೇ ಸಾಕಾಗಿತ್ತು, ಚಿನ್ನದ ಬೆಲೆ ಏರಿಕೆಗೆ. ಈಗ ಕರೆನ್ಸಿ ಕಾಳಗವೂ ಆರಂಭವಾಗಿದೆ.

ಬಡ್ಡಿದರ ಇಳಿಕೆ ಸಂಗತಿಯು ಚಿನ್ನದ ಬೆಲೆಯನ್ನು 1360ರಿಂದ 1500 ಡಾಲರ್​ಗೆ, ನಮ್ಮಲ್ಲಿ 30 ಸಾವಿರ ರೂಪಾಯಿಯಿಂದ 40 ಸಾವಿರ ರೂಪಾಯಿಗೆ ಏರಿಸಿದೆ. ಈಗ ಕರೆನ್ಸಿ ಕಾಳಗವು ಚಿನ್ನದ ಬೆಲೆಯನ್ನು 50 ಸಾವಿರ ರೂಪಾಯಿಗೆ ಏರಿಸಬಹುದು.

ರೂಪಾಯಿ ಅಪಮೌಲ್ಯ: ಅಮೆರಿಕಕ್ಕೆ ಚೀನಾದಿಂದ ಬರುವ ಮಾಲಿಗೆ ಟ್ರಂಪ್ ಇನ್ನೂ ಶೇ.10 ಸುಂಕವನ್ನು ವಿಧಿಸಿದ್ದಾರೆ. 300 ಬಿಲಿಯನ್ ಡಾಲರ್ ಚೀನಿ ಸರಕಿನ ಮೇಲೆ ಈಗಷ್ಟೇ ವಿಧಿಸಿದ್ದಾರೆ. ಅಲ್ಲಿಗೆ ಚೀನಾ-ಅಮೆರಿಕದ ವ್ಯಾಪಾರ ಸಂಧಾನಕ್ಕೆ ಕೊಡಲಿ ಪೆಟ್ಟು ಬಿತ್ತು. ಈ ಸುಂಕದ ಭಾರವನ್ನು ತಪ್ಪಿಸಿಕೊಳ್ಳಲು ಚೀನಾ ಮತ್ತೊಂದು ಪೆಟ್ಟು ಹಾಕಿತು. ಅದೇ ಚೀನಿ ಕರೆನ್ಸಿ ಯುವಾನ್ ಅನ್ನು ದುರ್ಬಲಗೊಳಿಸಿ ಅಮೆರಿಕಕ್ಕೆ ಚೀನಿ ಮಾಲು ದುಬಾರಿ ಆಗದಂತೆ ಮಾಡುವುದು! ಇದು ಅವರ ಅಸ್ತ್ರ. ಹೀಗಾಗಿ, 1995ರ ಮೊದಲು ಒಂದು ಡಾಲರ್​ಗೆ 8 ಯುವಾನ್ ಇದ್ದ ಬೆಲೆ ಈವರೆಗೆ 6.50-6.75 ಯುವಾನ್ ನಡುವೆಯೇ ಉಳಿದಿತ್ತು. 25 ವರ್ಷಗಳಿಂದ ಈ ಸ್ಥಿತಿ ಇತ್ತು! ಈಗ ಸಡನ್ನಾಗಿ ಡಾಲರ್​ಗೆ 7.05 ಯುವಾನ್ ಆಗಿದೆ. ಅದು 8 ಯುವಾನ್ ಆಗುವಂತಿದೆ. ಯುವಾನ್ ದುರ್ಬಲಗೊಳ್ಳುತ್ತಿದ್ದಂತೆ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡ, ಭಾರತ, ರಷ್ಯಾ, ದಕ್ಷಿಣ ಆಫ್ರಿಕಾ, ಮೆಕ್ಸಿಕೋ ಮೊದಲಾದ ದೇಶಗಳ ಕರೆನ್ಸಿಗಳೂ ದುರ್ಬಲಗೊಂಡಿವೆ. ಕರೆನ್ಸಿ ಸಮರ ಡಾಲರ್ ವಿರುದ್ಧ ಸಾಗಿದೆ. ಇದು ಎಲ್ಲಿಗೆ ಮುಟ್ಟುವುದೋ ತಿಳಿಯದು. ಸಹಸ್ರಮಾನದ ಮೊದಲು ಕರೆನ್ಸಿ ಕಾಳಗದ ಕಾಲದಲ್ಲಿ ಮೂರು ವರ್ಷಗಳಲ್ಲಿ ಭಾರತದ ರೂಪಾಯಿಯು ಶೇ.50ರಷ್ಟು ಅಪಮೌಲ್ಯಗೊಂಡಿತ್ತು. ಈಗ ಈ ರೀತಿ ಆದರೆ, ಭಾರತದ ಚಿನ್ನಕ್ಕೆ ಡಬ್ಬಲ್ ರೇಟು ಬರುತ್ತದೆ. ಅಂದರೆ, ವಿಶ್ವಪೇಟೆಯಲ್ಲಿ ಚಿನ್ನದ ಬೆಲೆ 1800 ಡಾಲರ್​ನತ್ತ ಸಾಗಬಹುದು. ಈ ಬೆಲೆ ಏರಿಕೆ ಪಾಲು ಭಾರತದ ಚಿನ್ನಕ್ಕೆ ಬರುತ್ತದೆ. ಭಾರತದ ರೂಪಾಯಿ ಅಪಮೌಲ್ಯಗೊಂಡರೆ ಅದರಿಂದಲೂ ಚಿನ್ನದ ಬೆಲೆ ಇಲ್ಲಿ ಏರುತ್ತದೆ. ಅಂದರೆ, ನಾವು ಬಂಗಾರದ ಆಮದಿಗೆ 70 ರೂಪಾಯಿ ಬೆಲೆಯಲ್ಲಿ ಖರೀದಿಸಬೇಕಾಗುತ್ತದೆ. ಈ ಪಾಲಿನ ಬೆಲೆ ಏರಿಕೆಯೂ ಬಂಗಾರಕ್ಕೆ ಬಂದರೆ ಇಲ್ಲಿ ಅಪರಂಜಿ ಚಿನ್ನದ ಬೆಲೆ 50 ಸಾವಿರ ರೂಪಾಯಿ ದಾಟುವುದೂ ಸಾಧ್ಯ!

ಷೇರುಪೇಟೆ ಕುಸಿತದ ಕೊಡುಗೆ!

ಇನ್ನೂ ದೊಡ್ಡ ಗಂಡಾಂತರ ಬರುವ ಸಾಧ್ಯತೆ ಹೆಚ್ಚು. ಅದು ದೀಪಾವಳಿ ವೇಳೆಗೆ ಚಿನ್ನದ ಬೆಲೆಗೆ ರಾಕೆಟ್ ವೇಗ ನೀಡಬಹುದು! ಅದೆಂದರೆ, ಷೇರುಪೇಟೆಯಲ್ಲಿ ಕುಸಿತದ ಪ್ರವಾಹ. 2008ರಲ್ಲಿ ಕಂಡ ಉಗ್ರ ಷೇರುಪೇಟೆ ಕುಸಿತ ಈಗಲೂ ಬರುವಂತಿದೆ. ಮುಂದಿನ ವಾರಗಳಲ್ಲಿ ಕರಾಳ ಸೋಮವಾರಗಳು ಷೇರುಪೇಟೆಯಲ್ಲಿ ಬಂದು ಅಪಾರ ಸಂಪತ್ತಿನ ಸರ್ವನಾಶ ಆಗಬಹುದು. ನಮ್ಮ ದೇಶದ ಸೆನ್ಸೆಕ್ಸ್ ಸೇರಿದಂತೆ ವಿಶ್ವದ ಎಲ್ಲ ಷೇರುಪೇಟೆಗಳೂ ಶೇ.20ರಷ್ಟು ಕುಸಿತ ಕಾಣಬಹುದು. ಅಂದರೆ, ಸುವರ್ಣಕ್ಕೆ ಸುಭಿಕ್ಷ ಕಾಲ! ಕವಿ ದ.ರಾ.ಬೇಂದ್ರೆ ‘ಇದು ಬರಿ ಬೆಳಗಲ್ಲೋ ಅಣ್ಣ’ಎಂದರು, ‘ಇದು ಬರಿ ಹೊಂಬೆಳಗಲ್ಲೊ ಅಣ್ಣ’ ಎನ್ನುವಿರಿ ನೀವು, ಚಿನ್ನದ ಬೆಲೆ ಸ್ಫೋಟ ಕಂಡು!

| ಡಾ. ಕೆ.ವಿದ್ಯಾಶಂಕರ್​

(ಲೇಖಕರು ಹಿರಿಯ ಪತ್ರಕರ್ತರು, ಆರ್ಥಿಕ ಚಿಂತಕರು)

Leave a Reply

Your email address will not be published. Required fields are marked *