ನವದೆಹಲಿ: ಮದುವೆ ಸೀಸನ್ ಹಿನ್ನೆಲೆಯಲ್ಲಿ ಆಭರಣ ತಯಾರಕರಿಂದ ಖರೀದಿ ಹೆಚ್ಚಾದ ಪರಿಣಾಮ ಬುಧವಾರವೂ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 700 ರೂ.ನಷ್ಟು ಏರಿಕೆಯಾಗಿದೆ.
ಮಂಗಳವಾರ 10 ಗ್ರಾಂಗೆ 91,250 ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಬುಧವಾರ 91,950 ರೂ.ಗೆ ಮುಟ್ಟಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನ ಕೂಡ 700 ರೂ.ನಷ್ಟು ಏರಿಕೆಯಾಗಿ 10 ಗ್ರಾಂಗೆ 91,500 ರೂ.ಗಳ ದಾಖಲೆ ಮಟ್ಟ ತಲುಪಿದೆ. ಬೆಳ್ಳಿಯ ದರ ಕೂಡ ಬುಧವಾರ 1000 ರೂ.ನಷ್ಟು ಏರಿಕೆಯಾಗಿದೆ. ಮಂಗಳವಾರ ಕೆಜಿಗೆ 1,02,500 ರೂ. ಇದ್ದದ್ದು ಬುಧವಾರ 1,03,500 ರೂ. ಆಗಿದೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚಾದ ಯುದ್ಧ ಭೀತಿ, ಅಮೆರಿಕದ ಆರ್ಥಿಕ ಹಿಂಜರಿತದ ಭಯವೇ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ದೂರ ಸರಿದು ಸುರಕ್ಷಿತವಾದ ಚಿನ್ನದಲ್ಲಿ ಹಣ ಹೂಡುವಂತೆ ಮಾಡಿದೆ. ಹಬ್ಬ ಮತ್ತು ಮದುವೆ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿದ್ದರಿಂದ ಸ್ಥಳೀಯ ಆಭರಣ ತಯಾರಕರು ಕೂಡ ಚಿನ್ನದ ಖರೀದಿಗೆ ಮುಗಿಬಿದ್ದಿದ್ದಾರೆ. ಸಾಗರೋತ್ತರ ಮಾರುಕಟ್ಟೆಯಲ್ಲಿನ ದೃಢ ಪ್ರವೃತ್ತಿ ಕೂಡ ಚಿನ್ನದ ಬೆಲೆ ಈ ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಲು ಕಾರಣವಾಗಿದೆ.