ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಶಿರ್ವ: ಮನೆ ಮಂದಿ ಮಲಗಿರುವಾಗ ಅಡುಗೆ ಮನೆ ಹೆಂಚು ತೆಗೆದು ಒಳ ಪ್ರವೇಶಿಸಿರುವ ಕಳ್ಳರು, ಕೋಣೆಯಲ್ಲಿದ್ದ ಬೀಗ ಹಾಕದ ಕಪಾಟನ್ನು ತೆರೆದು ಅದರೊಳಗಿದ್ದ ಕೀಲಿಕೈ ಬಳಸಿ ಇನ್ನೊಂದು ಕಪಾಟಲ್ಲಿದ್ದ ಒಟ್ಟು 195 ಗ್ರಾಂ (4ರಿಂದ 5 ಲಕ್ಷ ರೂ.) ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಕುರ್ಕಾಲು ಶಂಕರಪುರ ಸುಭಾಸ್‌ನಗರದ ನಿವೃತ್ತ ಶಿಕ್ಷಕಿ ಐರಿನ್ ಮಾರ್ಟಿಸ್ ಅವರ ಮನೆಯಲ್ಲಿ ಕಳವು ಪ್ರಕರಣ ನಡೆದಿದೆ. ಏ. 24ರಂದು ಶಂಕರಪುರ ಚರ್ಚ್‌ಗೆ ದೀಕ್ಷಾ ಪೂಜೆಯೊಂದಕ್ಕೆ ತೆರಳಿದ್ದ ಐರಿನ್ ಮನೆಗೆ ಬಂದು ಚಿನ್ನಾಭರಣಗಳನ್ನು ತೆಗೆದು ಕಪಾಟಿನಲ್ಲಿಟ್ಟು ಬೀಗ ಹಾಕಿದ್ದರು. ಯಾವತ್ತಿನಂತೆ ಬೀಗದ ಕೀಲಿಕೈಗಳನ್ನು ಇನ್ನೊಂದು ಕಪಾಟಿನ ಒಳಗಿಟ್ಟಿದ್ದರು.

ಐರಿನ್ ಮಾರ್ಟಿಸ್ ಅವರ 40 ಗ್ರಾಂ ತೂಕದ ಚಿನ್ನದ ಕರಿಮಣಿ ಸರ -1, 40 ಗ್ರಾಂ ತೂಕದ ಬಂಗಾರದ ಬಳೆ- 4 , 9 ಗ್ರಾಂ ತೂಕದ ಚಿನ್ನದ ಉಂಗುರ -2 ಹಾಗೂ 15 ಗ್ರಾಂ ತೂಕದ ದಪ್ಪ ಬಳೆ- 1, ಐರಿನ್ ಅವರ ತಂಗಿ ಕ್ಲಾರೆಟ್ ಅವರ 60 ಗ್ರಾಂ ತೂಕದ ಚಿನ್ನದ ಬಳೆ- 4, 7 ಗ್ರಾಂ ತೂಕದ ಒಂದು ಜೊತೆ ಚಿನ್ನದ ಕಿವಿಯೋಲೆ, ಐರಿನ್ ಅವರ ಮಗಳು ದಿವ್ಯ ಅವರ12 ಗ್ರಾಂ ತೂಕದ ಚಿನ್ನದ ಬಳೆ-1, 12 ಗ್ರಾಂ ತೂಕದ ಚಿನ್ನದ ಸರ-1 ಸೇರಿ ಒಟ್ಟು 195 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿವೆ.
ಐರಿನ್ ಮಾರ್ಟಿಸ್ ಅವರೊಂದಿಗೆ ಮನೆಯಲ್ಲಿ ಪತಿ, ಪುತ್ರ ಮತ್ತು ಕೆಲಸದಾಕೆ ಇದ್ದಾರೆ.ಇನ್ನೋರ್ವ ಮಗಳು ಮತ್ತು ಮಗ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಊರಿನಲ್ಲಿರುವ ಮಗ ಮತ್ತು ತಂದೆ ಶಂಕರಪುರದಲ್ಲಿ ಸ್ಟೇಶನರಿ ಅಂಗಡಿ ಹೊಂದಿದ್ದಾರೆ.

ತಿಳಿದವರ ಕೃತ್ಯ?: ರಾತ್ರಿ ಮನೆಯ ಎರಡು ಕೋಣೆಗಳಲ್ಲಿ ಮನೆಯವರು ಮಲಗಿದ್ದರು. ನಡುವಿನ ಕೋಣೆಯಲ್ಲಿ ಚಿನ್ನಾಭರಣವಿದ್ದ ಕಪಾಟು ಇತ್ತು. ಕೀಲಿಕೈ ಎಲ್ಲಿದೆ ಎಂದು ತಿಳಿದಿರುವವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ.ಇನ್ನೊಂದೆಡೆ ಬೀಗ ಹಾಕದ ಕಪಾಟನ್ನು ಜಾಲಾಡುವಾಗ ಕೀ ಸಿಕ್ಕಿದ್ದು ಕಳ್ಳರ ಕೆಲಸ ಸುಲಭವಾಯಿತೇ ಎಂಬ ಸಂಶಯ ಕಾಡುತ್ತದೆ.

Leave a Reply

Your email address will not be published. Required fields are marked *