ಮನೆಯಲ್ಲಿರುವ ಚಿನ್ನಕ್ಕೆ ಇನ್ಶೂರೆನ್ಸ್ ಸಿಗುವುದೇ?

| ಸಿ.ಎಸ್. ಸುಧೀರ್ 

# ತಾಯಿಯಿಂದ ಒಂದಷ್ಟು ಚಿನ್ನಾಭರಣ ಪಡೆದುಕೊಂಡಿದ್ದೇನೆ. ಬ್ಯಾಂಕ್ ಲಾಕರ್​ನಲ್ಲಿ ಇಡಲು ಇಷ್ಟವಿಲ್ಲ. ಮನೆಯಲ್ಲಿ ಇಟ್ಟುಕೊಳ್ಳುವ ಒಡವೆಗಳಿಗೆ ಇನ್ಶೂರೆನ್ಸ್ ಮಾಡಿಸಬಹುದೇ? ಕಳ್ಳತನ ಆದಲ್ಲಿ ಇನ್ಶೂರೆನ್ಸ್ ಕ್ಲೇಮ್ ಸಿಗುವುದೇ?

| ಹೆಸರು ಊರು ಬೇಡ

ಮನೆಯಲ್ಲಿಡುವ ಚಿನ್ನಾಭರಣಗಳಿಗೆ ಇನ್ಶೂರೆನ್ಸ್ ಮಾಡಿಸಿಕೊಳ್ಳಬಹುದು. ವಿಮಾ ಕಂಪನಿಯು ಚಿನ್ನಾಭರಣಗಳ ಮೌಲ್ಯ ಅಳೆಯಲು ಮೂರನೇ ವ್ಯಕ್ತಿಯೊಬ್ಬರನ್ನು ನೇಮಿಸುತ್ತದೆ. ಆತ ನೀಡುವ ಮೌಲ್ಯದ ಆಧಾರದ ಮೇಲೆ ಆಭರಣಗಳ ಸುರಕ್ಷತೆಗಾಗಿ ಇನ್ಶೂರೆನ್ಸ್ ಮಾಡಲಾಗುತ್ತದೆ. 1 ಲಕ್ಷ ರೂ. ಮೌಲ್ಯದ ಕವರೇಜ್ ನೀಡಲು ಸಾಮಾನ್ಯವಾಗಿ 1 ಸಾವಿರ ರೂ. ನಿಗದಿಪಡಿಸಲಾಗುತ್ತದೆ. ಚಿನ್ನಕ್ಕೆ ಇನ್ಶೂರೆನ್ಸ್ ಪಡೆದುಕೊಳ್ಳುವಾಗ ಅದನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಕೈಗೊಂಡ ಕ್ರಮಗಳೇನು ಎನ್ನುವುದನ್ನು ಇನ್ಶೂರೆನ್ಸ್ ಕಂಪನಿಗೆ ತಿಳಿಸಬೇಕಾಗುತ್ತದೆ. ಮನೆಯಲ್ಲಿರುವ ಚಿನ್ನಾಭರಣಗಳಿಗೆ ಇನ್ಶೂರೆನ್ಸ್ ನೀಡುವಾಗ ನಿರ್ದಿಷ್ಟ ಮಾನದಂಡಗಳ ಬಗ್ಗೆ ಸ್ಪಷ್ಟನೆ ಇಲ್ಲ. ಹಾಗಾಗಿ ಇನ್ಶೂರೆನ್ಸ್​ನ ಡಾಕ್ಯುಮೆಂಟ್, ನಿಬಂಧನೆಗಳನ್ನು ಅರಿತು ಮುನ್ನಡೆಯಿರಿ. ಕ್ಲೇಮ್ ಸಂದರ್ಭದಲ್ಲಿ ಗೊಂದಲವಾಗದಂತೆ ಮುನ್ನೆಚ್ಚರಿಕೆ ವಹಿಸಿ.

# ಬೆಂಗಳೂರಿನಿಂದ ದೆಹಲಿಗೆ ಕಾರನ್ನು ರೈಲಿನ ಮೂಲಕ ರವಾನಿಸಬೇಕು. ಸಾಗಾಟದ ವೇಳೆ ಕಾರಿಗೆ ಹಾನಿಯಾದರೆ ಅದರ ನಷ್ಟವನ್ನು ಯಾರು ಭರಿಸುತ್ತಾರೆ?

| ರಘು ಬೆಂಗಳೂರು

ರೈಲಿನ ಮೂಲಕ ಕಾರನ್ನು ಸಾಗಾಟ ಮಾಡಲು ನೀವು ಪಡೆದುಕೊಂಡಿರುವ ಕಾಂಪ್ರಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯೇ ಸಾಕು. ಅದಕ್ಕೆ ಮತ್ತೊಂದು ಇನ್ಶೂರೆನ್ಸ್ ಮಾಡಿಸಬೇಕಿಲ್ಲ. ಸಾಗಾಟದ ವೇಳೆ ಹಾನಿಯಾದರೆ ಕಾಂಪ್ರಹೆನ್ಸಿವ್ ಕಾರ್ ಇನ್ಶೂರೆನ್ಸ್​ನಿಂದ ಕ್ಲೇಮ್ ಪಡೆದುಕೊಳ್ಳಬಹುದು. ಬಹುತೇಕ ಸಂದರ್ಭದಲ್ಲಿ ನಿಮ್ಮ ವಾಹನ ಸಾಗಾಟ ಮಾಡುವ ರೈಲ್ವೆ ಇಲಾಖೆ ಸಹ ಇನ್ಶೂರೆನ್ಸ್ ಹೊಂದಿರುತ್ತದೆ. ಅವರ ನಿರ್ಲಕ್ಷ್ಯದಿಂದ ಕಾರ್​ಗೆ ಹಾನಿಯಾದರೆ ನೀವು ರೈಲ್ವೆ ಇಲಾಖೆಯ ಮೂಲಕ ಕ್ಲೇಮ್ೆ ಮುಂದಾಗಬೇಕು. ಅವರು ಇನ್ಶೂರೆನ್ಸ್ ಮಾಡಿಸಿರುವ ವಿಮಾ ಕಂಪನಿ ಕಾರಿಗೆ ಆಗಿರುವ ಹಾನಿಗೆ ಪರಿಹಾರ ನೀಡುವ ಸಾಧ್ಯತೆ ಇರುತ್ತದೆ. ಹೀಗೆ ಮಾಡುವುದರಿಂದ ಕಾರ್​ಗೆ ಮಾಡಿಸಿರುವ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್​ನ ನೋ ಕ್ಲೇಮ್ ಬೋನಸ್​ನ ಅನುಕೂಲ ನಿಮಗೆ ಸಿಗುತ್ತದೆ. ಅಕಸ್ಮಾತ್ತಾಗಿ ರೈಲ್ವೆ ಇಲಾಖೆ ಇನ್ಶೂರೆನ್ಸ್ ಹೊಂದಿರುವ ಕಂಪನಿಯಿಂದ ಇನ್ಶೂರೆನ್ಸ್ ಕ್ಲೇಮ್ ಸಿಗದಿದ್ದಲ್ಲಿ ನೀವು ಕಾಂಪ್ರಹೆನ್ಸಿವ್ ಕಾರ್ ಇನ್ಶೂರೆನ್ಸ್​ನ ನೆರವು ಪಡೆದು ಕ್ಲೇಮ್ ಪಡೆಯಲು ಸಾಧ್ಯ.

# ನಾನು ದುಬೈನಲ್ಲಿ ವಾಸವಿರುವ ಎನ್​ಆರ್​ಐ. ನನ್ನ ಮಗ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅವನಿಗೆ ಕಾರ್ ಕೊಡಿಸಬೇಕೆಂದುಕೊಂಡಿದ್ದೇನೆ. ನಾನು ಎನ್​ಆರ್​ಇ (ನಾನ್ ರೆಸಿಡೆಂಟ್ ಎಕ್ಸ್​ಟರ್ನಲ್) ಅಕೌಂಟ್​ನಿಂದ ಹಣ ಬಳಸುತ್ತೇನೆ. ನನ್ನ ಹೆಸರಿನಲ್ಲಿಯೇ ಕಾರ್ ಇದ್ದರೆ ತೆರಿಗೆ ಹೇಗೆ ಅನ್ವಯಿಸುತ್ತದೆ?

| ಪ್ರೀತಂ ಶೆಟ್ಟಿ ದುಬೈ

ನೀವು ‘ಎನ್​ಆರ್​ಇ’ ಅಕೌಂಟ್​ನಿಂದ ಹಣ ಪಡೆದುಕೊಂಡು ಕಾರ್ ಖರೀದಿಸಬಹುದು. ಭಾರತದಲ್ಲಿ ಕಾರ್ ಖರೀದಿಸುವುದರಿಂದ ಯಾವುದೇ ತೆರಿಗೆ ಬರುವುದಿಲ್ಲ. ಆದರೆ, ನೀವು ಭಾರತದಲ್ಲಿ ಐಟಿ ರಿಟರ್ನ್್ಸ ಸಲ್ಲಿಸುತ್ತಿದ್ದು, ನಿಮ್ಮ ಒಟ್ಟು ಆದಾಯ 50 ಲಕ್ಷ ರೂ.ಗಿಂತ ಹೆಚ್ಚಿದ್ದಲ್ಲಿ ನೀವು ಸ್ವತ್ತುಗಳು ಮತ್ತು ಸಾಲಗಳ ಅಡಿಯಲ್ಲಿ ಮಾಹಿತಿ ಒದಗಿಸಬೇಕಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳಿಸುವ ಮುನ್ನ ಅಗತ್ಯವೆನಿಸಿದರೆ ಚಾರ್ಟರ್ಡ್ ಅಕೌಂಟೆಂಟ್ ನೆರವು ಪಡೆದುಕೊಳ್ಳಿ.

# ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್​ಗೂ ಫ್ಯಾಮಿಲಿ ಫ್ಲೋಟರ್ ಪಾಲಿಸಿಗೂ ಇರುವ ವ್ಯತ್ಯಾಸವೇನು? ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು?

| ಶರಣು ಹಂಪಿ, ಬಳ್ಳಾರಿ

ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಅಂದರೆ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ಪ್ರತ್ಯೇಕವಾಗಿ ಪಾಲಿಸಿ ಪಡೆದುಕೊಳ್ಳುವುದು. ಪ್ರತಿ ಪಾಲಿಸಿಯ ಪರಿಹಾರ ಮೊತ್ತ ಇಲ್ಲಿ ಬೇರೆ ಬೇರೆ ಇರುತ್ತದೆ. ಯಾರಿಗೆ ಎಷ್ಟು ಇನ್ಶೂರೆನ್ಸ್ ಕವರೇಜ್ ಬೇಕು ಎನ್ನುವುದರ ಆಧಾರದ ಮೇಲೆ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್​ನ ಪ್ರೀಮಿಯಂ ನಿಗದಿಯಾಗುತ್ತದೆ. ಉದಾಹರಣೆಗೆ, ಎ ಎಂದು ಪರಿಗಣಿಸಲ್ಪಡಬಹುದಾದ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಪರಿಹಾರ ಮೊತ್ತವು (ಸಮ್ ಅಶೂರ್ಡ್) ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಮಾದರಿಯದ್ದಾಗಿರಬಹುದು. ಮನೆಯ ಯಜಮಾನನಿಗೆ ರೂ. 2 ಲಕ್ಷ, ಮನೆಯೊಡತಿಗೆ ರೂ. 3 ಲಕ್ಷ, ಮಗಳಿಗೆ ರೂ. 1 ಲಕ್ಷ, ಮಗನಿಗೆ ರೂ. 1 ಲಕ್ಷ ಹೀಗೆ. ಆದರೆ, ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್​ನಲ್ಲಿ ಒಂದೇ ಪಾಲಿಸಿಯಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ಚಿಕಿತ್ಸೆ ಲಭ್ಯ. ಕುಟುಂಬದ ಯಾರಿಗೇ ಅನಾರೋಗ್ಯ ಉಂಟಾದರೂ ಇನ್ಶೂರೆನ್ಸ್​ನಲ್ಲಿ ನಿಗದಿಯಾಗಿರುವ ಮೊತ್ತವು ಅನುಕೂಲಕ್ಕೆ ಬರುತ್ತದೆ. ಆದರೆ ಫ್ಯಾಮಿಲಿ ಫ್ಲೋಟರ್​ನಲ್ಲಿ ಕುಟುಂಬದ ಅತ್ಯಂತ ಹಿರಿಯ ಸದಸ್ಯನ ವಯಸ್ಸನ್ನು ಪರಿಗಣಿಸಿ ಪ್ರೀಮಿಯಂ ನಿಗದಿ ಮಾಡುವುದರಿಂದ ಪ್ರೀಮಿಯಂ ಮೊತ್ತ ಜಾಸ್ತಿ ಇರುತ್ತದೆ. ವಯಸ್ಸಾದ ಪಾಲಕರಿದ್ದಲ್ಲಿ ಅನಾರೋಗ್ಯದ ಸಮಸ್ಯೆ ಜಾಸ್ತಿ. ಹಾಗಾಗಿ ಫ್ಯಾಮಿಲಿ ಫ್ಲೋಟರ್ ಪಾಲಿಸಿ ಬದಲು ಅವರಿಗೆ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಮಾಡಿಸುವುದು ಸೂಕ್ತ. ಇದರಲ್ಲಿ ನಿಗದಿತ ವರ್ಷದಲ್ಲಿ ಕ್ಲೇಮ್ ಪಡೆದಿಲ್ಲ ಎಂದಾದಲ್ಲಿ ನೋ ಕ್ಲೇಮ್ ಬೋನಸ್ ಸಿಗುತ್ತದೆ. ಫ್ಯಾಮಿಲ್ ಫ್ಲೋಟರ್​ನಲ್ಲಿ ಕುಟುಂಬದ ಯಾವುದೇ ವ್ಯಕ್ತಿ ಕ್ಲೇಮ್ ಪಡೆದರೂ ಆ ನಿಗದಿತ ವರ್ಷಕ್ಕೆ ನೋ ಕ್ಲೇಮ್ ಬೋನಸ್ ಸಿಗದು. 18 ವರ್ಷ ಒಳಪಟ್ಟವರಿಗೆ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಸಿಗುವುದಿಲ್ಲ. ಫ್ಯಾಮಿಲ್ ಫ್ಲೋಟರ್​ನಲ್ಲಿ ಮಾತ್ರ ಸಣ್ಣ ಮಕ್ಕಳನ್ನು ಕೂಡ ಇನ್ಶೂರೆನ್ಸ್ ಪಾಲಿಸಿಯಲ್ಲಿ ಸೇರಿಸಬಹುದು.

# ನನ್ನ ಕ್ರೆಡಿಟ್ ರಿಪೋರ್ಟ್​ನಲ್ಲಿ ಮಾಹಿತಿ ತುಂಬುವವರು ಯಾರು? ಅದರಲ್ಲಿ ಕೆಲ ತಪ್ಪುಗಳು ಯಾಕಾಗುತ್ತವೆ?

| ಗಿರೀಶ್ ಊರು ಬೇಡ

ಕ್ರೆಡಿಟ್ ರಿಪೋರ್ಟ್​ನ ಮಾಹಿತಿಯನ್ನು ಪ್ರತಿ ತಿಂಗಳು ಭರ್ತಿ ಮಾಡುವ ಹೊಣೆಗಾರಿಕೆ ಆಯಾಯ ಬ್ಯಾಂಕ್​ಗಳದ್ದೇ ಆಗಿರುತ್ತದೆ. ಹೀಗೆ ಕಾಲಮಿತಿಯಲ್ಲಿ ಮಾಹಿತಿ ಅಪ್​ಡೇಟ್ ಮಾಡುವಾಗ ಕೆಲ ತಪ್ಪುಗಳಾಗುವ ಸಾಧ್ಯತೆ ಇರುತ್ತದೆ. ಸಾಲ ಪಡೆದಿರುವ ವ್ಯಕ್ತಿಯ ಹೆಸರು, ದಿನಾಂಕ, ಸಾಲದ ಮಾದರಿಯನ್ನು ತಪ್ಪಾಗಿ ನಮೂದಿಸುವುದು, ವಿಳಾಸ ಸರಿಯಿಲ್ಲದಿರುವುದು, ಸಾಲ ಪಡೆದ ಬ್ಯಾಂಕ್ ಖಾತೆಯನ್ನು ತಪ್ಪಾಗಿ ಬರೆಯುವುದು, ಮಂಜೂರಾಗಿರುವ ಸಾಲದ ಮೊತ್ತವನ್ನು ತಪ್ಪಾಗಿ ನಮೂದಿಸುವುದು, ಸಾಲ ಮರುಪಾವತಿಯ ಕೊನೆಯ ಕಂತನ್ನು ರಿಪೋರ್ಟ್​ನಲ್ಲಿ ಬರೆಯದಿರುವುದು, ಸಾಲ ಪಡೆಯಲು ನೀಡಿರುವ ದಾಖಲೆಗಳು ತಾಳೆಯಾಗದಿರುವುದು ಸೇರಿ ಹತ್ತಾರು ಕಾರಣಗಳಿಂದ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್​ನಲ್ಲಿ ತಪ್ಪುಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಸಾಲ ಪಡೆಯುವ ಸಂದರ್ಭದಲ್ಲಿ ನೀಡಿರುವ ದಾಖಲೆಗಳೂ ಕೆಲವೊಮ್ಮೆ ಕಾರಣವಾಗುತ್ತವೆ. ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್​ನಲ್ಲಿರುವ ಲೋಪಗಳನ್ನು ಬ್ಯಾಂಕ್​ನವರು ಮಾತ್ರ ಸರಿಪಡಿಸಬಹುದು. ಮಧ್ಯವರ್ತಿಗಳಿಂದ ಇದನ್ನು ಸರಿಪಡಿಸಲಾಗದು.

ಉಚಿತ ಕ್ರೆಡಿಟ್ ಸ್ಕೋರ್ ಪರೀಕ್ಷೆ

# IndianMoney.com ವೆಬ್​ಸೈಟ್​ಗೆ ಲಾಗಿನ್ ಆಗಿ.

# ಕ್ರೆಡಿಟ್ ಸ್ಕೋರ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

# ಪ್ಯಾನ್ ನಂಬರ್, ಇನ್ನಿತರ ಮಾಹಿತಿ ನೀಡಿ.

# ಕೆಲವೇ ಸೆಕೆಂಡುಗಳಲ್ಲಿ ಕ್ರೆಡಿಟ್ ಸ್ಕೋರ್ ಮಾಹಿತಿ ಲಭ್ಯ.