ಕಲಾಪದಲ್ಲಿ ನೇಕಾರರ ಸಮಸ್ಯೆ ಚರ್ಚೆ

ತರೀಕೆರೆ: ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ನೇಕಾರರ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಡ ಹೇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಮಂಗಳವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕರ್ನಾಟಕ ದೇವಾಂಗ ಸಂಘ ಹಾಗೂ ತಾಲೂಕು ದೇವಾಂಗ ಸಮಾಜದಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ದೇವಾಂಗ (ನೇಕಾರ) ಬೃಹತ್ ಸಮಾವೇಶದ ನೇಕಾರ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.

ಸೂಕ್ತ ನಿರ್ಣಯ ಕೈಗೊಳ್ಳದಿದ್ದಲ್ಲಿ ಸದನದ ಕಲಾಪ ಮಾಡಲು ಬಿಡುವುದಿಲ್ಲ. ದೇವಾಂಗ ಸಮುದಾಯದ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಲಾಗುವುದು. ಅಧಿಕಾರ ಸಿಕ್ಕಲ್ಲಿ ಅನ್ನದಾತನಿಗೆ ಕೊಟ್ಟ ಸವಲತ್ತುಗಳನ್ನು ನೇಕಾರರಿಗೂ ಕೊಡುತ್ತೇನೆ ಎಂದರು.

ನೇಕಾರರ ಆರ್ಥಿಕ ಸಬಲೀಕರಣಕ್ಕೆ ರಾಜ್ಯದಲ್ಲಿ ಸುವರ್ಣ ಜವಳಿ ನೀತಿ ಜಾರಿಗೊಳಿಸಿದ್ದೆ. ದೇವಾಂಗ ಸಮಾಜದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಿದ್ದೆ. ಆದರೆ ನಂತರ ಬಂದ ಸರ್ಕಾರಗಳು ಸಮರ್ಪಕವಾಗಿ ಯೋಜನೆ ಅನುಷ್ಠಾನಗೊಳಿಸದೆ ನಿರ್ಲಕ್ಷ್ಯ ವಹಿಸಿವೆ ಎಂದು ದೂರಿದರು.

ಭಾರತದ ಇತಿಹಾಸದಲ್ಲಿ ನೇಕಾರರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗುರುತಿಸಿದೆ. ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ನೀಡಿ ಕೌಶಲ್ಯಾಭಿವೃದ್ಧಿಗೆ ಉತ್ತೇಜಿಸಿದೆ. ಟೆಕ್ಸ್​ಟೈಲ್ ಪಾರ್ಕ್ ಅಭಿವೃದ್ಧಿಪಡಿಸುವ ಮೂಲಕ ಉದ್ಯೋಗ ಸೃಷ್ಟಿಸಿದೆ. ನೆರೆ ರಾಜ್ಯಗಳು ನೇಕಾರರಿಗೆ ನೀಡುತ್ತಿರುವ ಸೌಲಭ್ಯವನ್ನು ಇಲ್ಲಿನ ಮೈತ್ರಿ ಸರ್ಕಾರವೂ ನೀಡಬೇಕು ಎಂದು ಆಗ್ರಹಿಸಿದರು.

ಸಿಎಂ ಗೈರು ಬೇಸರದ ಸಂಗತಿ: ಜವಳಿ ಖಾತೆಯನ್ನು ತಮ್ಮಲ್ಲೇ ಇಟ್ಟುಕೊಂಡಿರುವ ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಜೆ.ಜಾರ್ಜ್ ಅವರನ್ನು ದೇವಾಂಗ ಸಮಾವೇಶಕ್ಕೆ ಪಕ್ಷಾತೀತವಾಗಿ ಆಹ್ವಾನಿಸಿದರೂ ಬಾರದಿರುವುದು ಬೇಸರದ ಸಂಗತಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಹಿಂದುಳಿದವರ ಕಲ್ಯಾಣಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಗಲಿರುಳು ಶ್ರಮಿಸಿದ್ದಾರೆ. ರೈತ ಅನ್ನ ನೀಡಿದರೆ, ನೇಕಾರ ವಸ್ತ್ರವನ್ನು ಕೊಟ್ಟು ಮಾನ ಕಾಪಾಡಿದ್ದಾನೆ. ಯೋಧ ನಮ್ಮನ್ನು ಕಾಪಾಡುವ ದೊಡ್ಡ ಹೊಣೆಗಾರಿಕೆ ಹೊತ್ತಿದ್ದಾನೆ. ಇತ್ತೀಚೆಗೆ ಭಾರತೀಯ ಸೈನಿಕರ ಮೇಲಿನ ದಾಳಿ ಅಮಾನವೀಯವಾಗಿದೆ. ಹಾಗೆಯೇ ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕರ ಅಡಗುತಾಣಗಳನ್ನು ಧ್ವಂಸಗೊಳಿಸಿರುವ ನಮ್ಮ ಸೈನ್ಯ ಪ್ರತೀಕಾರ ತೀರಿಸಿಕೊಂಡಿರುವುದು ಅಭಿನಂದನಾರ್ಹವಾಗಿದೆ ಎಂದರು.