ಬಿಸಿಯೂಟದಲ್ಲಿ ಕಾಣಿಸಿದ ಬಾಲಹುಳು

ಗೊಳಸಂಗಿ: ಸಮೀಪದ ಉಣ್ಣಿಬಾವಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬಿಸಿಯೂಟದಲ್ಲಿ ಬಾಲಹುಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಯಿತು.

ಅಂದಾಜು 3-4 ತಿಂಗಳ ಹಿಂದಿನ ನಿರುಪಯುಕ್ತ ಅಕ್ಕಿ ಮತ್ತು ಬೇಳೆ ಬಳಕೆ ಮಾಡಿದ ಪರಿಣಾಮ ಊಟದಲ್ಲಿ ಬಾಲಹುಳು ಕಾಣಿಸಿ ಕೊಂಡಿವೆ. ಆತಂಕಕೊಂಡ ಮಕ್ಕಳು ತಟ್ಟೆಯೊಂದಿಗೆ ರಸ್ತೆಗಿಳಿದ ಪರಿಣಾಮ ಅಡುಗೆ ಸಿಬ್ಬಂದಿ ಹಾಗೂ ಶಿಕ್ಷಕರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ತಿಳಿದು ಶುಕ್ರವಾರ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಂಯೋಜಕ ವಿ.ಪಿ. ಜುಳಜುಳಿ ಮುಖ್ಯಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ಇಂಥ ಘಟನೆ ಮರುಕಳಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಪ್ರಭಾರಿ ಮುಖ್ಯಶಿಕ್ಷಕ ಎಂ.ಬಿ. ಮಿರಗಿ, ಸಹ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಇದ್ದರು.

ನಿರುಪಯುಕ್ತ ಅಕ್ಕಿ-ಬೇಳೆಯನ್ನು ಮರಳಿ ಕಳುಹಿಸಿ ಗುಣಮಟ್ಟದ ಧಾನ್ಯ ಬಳಕೆ ಮಾಡುವಂತೆ ಮುಖ್ಯಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ.
– ವಿ.ಪಿ. ಜುಳಜುಳಿ ಶಿಕ್ಷಣ ಸಂಯೋಜಕ