ಕೊನೆಗೂ ಹರಿಯಿತು ನಾಲೆಗೆ ನೀರು

ಗೊಳಸಂಗಿ: ರೈಲು ಅಧಿಕಾರಿಗಳ ಕಟ್ಟಪ್ಪಣೆಯಿಂದ ಸ್ಥಗಿತಗೊಂಡಿದ್ದ ವಿಜಯಪುರ ಮುಖ್ಯ ಕಾಲುವೆ ಮೂಲಕ ಕೆರೆಗಳಿಗೆ ನೀರಿನ ಹರಿಸುವ ಕಾರ್ಯ ಸೋಮವಾರ ಪುನರಾರಂಭಗೊಂಡು ರೈತರಲ್ಲಿ ಹರ್ಷಕ್ಕೆ ಕಾರಣವಾಯಿತು.

ಕಳೆದ ಗುರುವಾರ ಆರೋಗ್ಯ ಸಚಿವ ಶಿವಾನಂದ ಪಾಟೀಲರಿಂದ ಪ್ರಾಯೋಗಿಕವಾಗಿ ಚಾಲನೆ ಪಡೆದಿದ್ದ ಕೆರೆಗೆ ನೀರು ತುಂಬುವ ಯೋಜನೆ ಸಂಜೆಯಾಗುತ್ತಿದ್ದಂತೆಯೇ ಕೂಡಗಿ ಬಳಿಯ ರೈಲ್ವೆ ಕ್ರಾಸಿಂಗ್ ಸೇತುವೆಯಲ್ಲಿ ಏಕಾಏಕಿ ನೀರು ಜಿಣುಗಲು ಆರಂಭಿಸಿದಾಗ ಆತಂಕಕ್ಕೊಳಗಾದ ರೈಲು ಅಧಿಕಾರಿಗಳು, ನೀರಿನ ಹರಿವನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಕೆಬಿಜೆಎನ್​ಎಲ್ ಅಧಿಕಾರಿಗಳಿಗೆ ಕಟ್ಟಪ್ಪಣೆ ವಿಧಿಸಿ ಬಂದ್ ಮಾಡಿಸಿದ್ದರು.

ಕೆರೆಗೆ ನೀರಿನ ಹರಿವು ಸ್ಥಗಿತಗೊಳ್ಳುತ್ತಿದ್ದಂತೆಯೇ ರೊಚ್ಚಿಗೆದ್ದ ರೈತರು ಶುಕ್ರವಾರ ಕಾಲುವೆ ಬಳಿ ರೈತರ ಸಭೆ ಮಾಡಿ ನ.19 ರಂದು ರೈಲು ಅಧಿಕಾರಿಗಳ ನಿರ್ಣಯವನ್ನು ಖಂಡಿಸಿ ರೈಲು ತಡೆ ನಡೆಸುವುದಾಗಿ ಘೊಷಿಸಿದ್ದರು. ರೈತರ ನಿರ್ಧಾರದಿಂದ ಕಂಗೆಟ್ಟ ರೈಲು ಅಧಿಕಾರಿಗಳು ಜಿಣುಗುತ್ತಿದ್ದ ನೀರನ್ನು ತಾತ್ಕಾಲಿಕವಾಗಿ ತಡೆಗಟ್ಟಿ ಕೆರೆಗೆ ನೀರು ಹರಿಸಲು ಕೆಬಿಜೆಎನ್​ಎಲ್ ಅಧಿಕಾರಿಗಳಿಗೆ ಅವಕಾಶ ನೀಡುವ ಮೂಲಕ ರೈಲು ತಡೆ ನಡೆಯದಂತೆ ಜಾಗೃತಿ ವಹಿಸಿದರು. ಸೋಮವಾರ ಬೆಳಗ್ಗೆ ಕಾಲುವೆ ಮೂಲಕ ಕೆರೆಗಳಿಗೆ ನೀರಿನ ಹರಿವು ಆರಂಭಗೊಂಡಾಗ ರೈಲು ತಡೆ ನಿರ್ಧಾರದಿಂದ ಹಿಂದೆ ಸರಿದ ರೈತರು ಹರ್ಷಚಿತ್ತರಾದರು.

ನೀರು ತುಂಬಲಿರುವ ಕೆರೆಗಳು ಯಾವವು?

ವಿಜಯಪುರ ಮುಖ್ಯ ಕಾಲುವೆ ಮೂಲಕ ಸದ್ಯ 15 ಕೆರೆಗಳಿಗೆ ನೀರು ತುಂಬಲಾಗುತ್ತಿದೆ. ವಿಜಯಪುರ ಮುಖ್ಯ ಕಾಲುವೆಯ ದೇವೂರ ಕೆರೆ, ದೇವರ ಹಿಪ್ಪರಗಿ ಇಂಗು ಕೆರೆ, ಆಹೇರಿ ಕೆರೆ, ಕೌಲಗಿ ಕೆರೆ, ಕುಮಟಗಿಯ ಹಳೇ ಮತ್ತು ಹೊಸ ಕೆರೆ, ಮಾರ್ಕಪ್ಪನಹಳ್ಳಿ ಕೆರೆ, ತಿಡಗುಂದಿ ಶಾಖಾ ಕಾಲುವೆಯ ಮದಬಾವಿ ಕೆರೆ, ಹೂವಿನ ಹಿಪ್ಪರಗಿ ಶಾಖಾ ಕಾಲುವೆಯ ನಾಗವಾಡ ಕೆರೆ, ಮುಕಾರ್ತಿಹಾಳ ಕೆರೆ, ಮಣ್ಣೂರ ಕೆರೆ, ಕಿರಿಶಾಳ ಕೆರೆ, ಬಸವನ ಬಾಗೇವಾಡಿ ಶಾಖಾ ಕಾಲುವೆಯ ಡೋಣೂರ ಕೆರೆ, ಬಿಸನಾಳ ಕೆರೆ, ರೆಬಿನಾಳ ಕೆರೆಗಳಿಗೆ ನೀರು ತುಂಬಲಾಗುತ್ತಿದೆ. ಸುಮಾರು 30 ದಿನಗಳವರೆಗೆ ಕೆರೆಗೆ ನೀರು ಹರಿಸುವ ಭರವಸೆಯನ್ನು ರೈತ ಮುಖಂಡರು ಹೊತ್ತಿದ್ದಾರೆ.