ಎನ್​ಟಿಪಿಸಿ ಚಾಕೊಲೇಟ್ ನಿರಾಕರಿಸಿದ ಮಕ್ಕಳು!

ಗೊಳಸಂಗಿ: ಗಣರಾಜ್ಯೋತ್ಸವ ನಿಮಿತ್ತ ಕೂಡಗಿ ಎನ್​ಟಿಪಿಸಿಯಿಂದ ಬಾಧಿತ ಗ್ರಾಮಗಳ ಶಾಲೆಗಳಿಗೆ ನೀಡಲಾಗುತ್ತಿದ್ದ ಚಾಕೊಲೇಟ್​ನ್ನು ಗೊಳಸಂಗಿ ಮಾದರಿ ಬಡಾವಣೆಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ಬುಧವಾರ ಮತ್ತೆ ನಿರಾಕರಿಸಿದ್ದಾರೆ.

ಪ್ರತಿವರ್ಷ ಜ.26 ಹಾಗೂ ಆ.15ರ ನಿಮಿತ್ತ ಐದು ಬಾಧಿತ ಗ್ರಾಮಗಳ ಸರ್ಕಾರಿ, ಖಾಸಗಿ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಎನ್​ಟಿಪಿಸಿಯಿಂದ ಚಾಕೊಲೇಟ್ ಅಥವಾ ಬಿಸ್ಕತ್ ನೀಡಲಾಗುತ್ತದೆ.

ಅದೇ ರೀತಿ ಪ್ರಸ್ತುತ ಗಣರಾಜ್ಯೋತ್ಸವ ನಿಮಿತ್ತ ಬುಧವಾರ ಎನ್​ಟಿಪಿಸಿ ಆರ್ ಆಂಡ್ ಆರ್ ಸಿಬ್ಬಂದಿ ಚಾಕೊಲೇಟ್ ನೀಡಲು ಬಡಾವಣೆ ಶಾಲೆಗೆ ಬಂದಿದ್ದರು. ಶಾಲೆ ಅಭಿವೃದ್ಧಿಗಾಗಿ ನಯಾ ಪೈಸೆ ನೀಡದ ಎನ್​ಟಿಪಿಸಿ ಕೊಡುವ 2ರೂ. ಚಾಕೊಲೇಟ್ ನಮಗೆ ಬೇಡ ಎಂದು ಮಕ್ಕಳು ತಿರಸ್ಕರಿಸಿದರು.

ಈ ವೇಳೆ ಎಸ್​ಡಿಎಂಸಿ ಅಧ್ಯಕ್ಷ ಡಿ.ಬಿ. ಕುಪ್ಪಸ್ತ ಮಾತನಾಡಿ, ಬಾಧಿತ ಗ್ರಾಮಾಭಿವೃದ್ಧಿಗಾಗಿ ಕೋಟ್ಯಂತರ ರೂ.ಖರ್ಚು ಮಾಡಿದ ಎನ್​ಟಿಪಿಸಿ ನಮ್ಮ ಶಾಲೆ ಮತ್ತು ಮಾದರಿ ಬಡಾವಣೆ ಅಭಿವೃದ್ಧಿಗಾಗಿ ನಯಾ ಪೈಸೆ ಖರ್ಚು ಮಾಡಿಲ್ಲ. ವಿಡಿಎಸಿ ಸದಸ್ಯರ ತಾರತಮ್ಯ ಧೋರಣೆಯೇ ಇದಕ್ಕೆ ಕಾರಣ. ನಮ್ಮ ಶಾಲೆ, ಬಡಾವಣೆ ಬಾಧಿತ ಗ್ರಾಮಕ್ಕೆ ಒಳಪಟ್ಟಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇವಲ 2 ರೂ. ಚಾಕೊಲೇಟ್​ನ್ನು ನಮ್ಮ ಮಕ್ಕಳಿಗೆ ನೀಡಲಾಗದಷ್ಟು ಅಸಹಾಯಕರು ನಾವಲ್ಲ. ಶಾಲಾಭಿವೃದ್ಧಿಗಾಗಿ ನಿಗದಿತ ಹಣ ನೀಡುವವರೆಗೆ ಇನ್ನು ಮುಂದೆ ನಿಮ್ಮ ಚಾಕೊಲೇಟ್, ಬಿಸ್ಕತ್ ಹಾಗೂ ಪುಸ್ತಕಗಳು ನಮ್ಮ ಮಕ್ಕಳಿಗೆ ಬೇಡವೇ ಬೇಡವೆಂದು ಹೇಳಿದರು. ಎನ್​ಟಿಪಿಸಿಯ ಯಂಕಣ್ಣ ಚನಗೊಂಡ, ಮುಖ್ಯಶಿಕ್ಷಕ ಜಿ.ಎಸ್.ಕಾಳಗಿ, ಶಿಕ್ಷಕ ಎಸ್.ವಿ.ಕತ್ನಳ್ಳಿ ಮತ್ತಿತರರು ಇದ್ದರು.

ನಿರಾಕರಣೆಗೇನು ಕಾರಣ?: ಕಳೆದ 7-8 ವರ್ಷಗಳಲ್ಲಿ ಎನ್​ಟಿಪಿಸಿ ವ್ಯಾಪ್ತಿಯ ಪುನರ್ವಾಸ ಮತ್ತು ಪುನರ್ ಸ್ಥಾಪನೆ (ಆರ್ ಆಂಡ್ ಆರ್) ಯೋಜನೆಯಡಿ ವಿಲೇಜ್ ಡೆವಲೆಪ್​ವೆುಂಟ್ ಆರ್ಗನೈಜ್ ಕಮಿಟಿ (ವಿಡಿಎಸಿ) ಮೂಲಕ ಐದು ಬಾಧಿತ ಗ್ರಾಮಗಳಾದ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಹಾಗೂ ಮುತ್ತಗಿ ಗ್ರಾಮದ ಕುಡಿಯುವ ನೀರು, ರಸ್ತೆ, ಚರಂಡಿ, ಸಮುದಾಯ ಭವನ, ಶಾಲೆ, ಕಾಲೇಜು, ಆಸ್ಪತ್ರೆ ಹೀಗೆ ಸರ್ವಾಂಗೀಣ ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತದೆ. ಆದರೆ, ಗೊಳಸಂಗಿ ಮಾದರಿ ಬಡಾವಣೆಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಆರಂಭದಿಂದಲೂ ಒಂದು ಕೊಠಡಿ, ಆಟದ ಮೈದಾನ ಅಭಿವೃದ್ಧಿ ಮತ್ತಿತರ ಬೇಡಿಕೆಗಳನ್ನು ಮೌಖಿಕ ಹಾಗೂ ಲಿಖಿತ ರೂಪದಲ್ಲಿ ಸಂಬಂಧಪಟ್ಟವರಿಗೆ ಸಲ್ಲಿಸಲಾಗಿದ್ದರೂ ನಯಾ ಪೈಸೆ ಈ ಶಾಲೆಗಾಗಲಿ, ಮಾದರಿ ಬಡಾವಣೆಗಾಗಲಿ ನೀಡಿಲ್ಲ. ಈ ಕುರಿತು 2018ರ ಜ.24 ರಂದೇ ಈ ಶಾಲೆ ಮಕ್ಕಳು ಕೋಣೆ ಮಂಜೂರಾತಿಗೆ ಒತ್ತಾಯಿಸಿ ಚಾಕೊಲೇಟ್ ತಿರಸ್ಕರಿಸಿದ್ದರು. ಅಧಿಕಾರಿಗಳ ಮನವೊಲಿಕೆ ಬಳಿಕ ಚಾಕೊಲೇಟ್ ಸ್ವೀಕರಿಸಿದ್ದರು.‘ಚಾಕೊಲೇಟ್ ತಿರಸ್ಕರಿಸಿದ ಮಕ್ಕಳು’ ಶೀರ್ಷಿಕೆಯಡಿ 2018 ಜ.25 ರಂದು ‘ವಿಜಯವಾಣಿ’ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿದ್ದು ಗಮನಾರ್ಹ. ಆದರೆ, ಇದುವರೆಗೂ ಶಾಲೆಗೆ ಯಾವುದೇ ರೀತಿಯ ಸೌಲಭ್ಯ ಸಿಗದಿರುವುದು ಮಕ್ಕಳ ಆಕ್ರೋಶಕ್ಕೆ ಮೂಲ ಕಾರಣವಾಗಿದೆ.

ಗೊಳಸಂಗಿ ಮಾದರಿ ಬಡಾವಣೆ ಮತ್ತು ಶಾಲೆಗೆ ಅನುದಾನ ಒದಗಿಸದೆ ಇರುವಲ್ಲಿ ಎನ್​ಟಿಪಿಸಿ ಪಾತ್ರವಿಲ್ಲ. ಯಾವುದೇ ಕಾಮಗಾರಿ, ಕ್ಷೇತ್ರಕ್ಕೆ ಅನುದಾನ ನೀಡುವುದು, ಬಿಡುವುದು ವಿಡಿಎಸಿಗೇ ಪರಮಾಧಿಕಾರ. ಅದರ ಆದೇಶದನ್ವಯ ನಾವು ಕಾರ್ಯನಿರ್ವಹಿಸಬೇಕಾಗುತ್ತದೆ.
| ಎಂ.ಎಚ್. ಮಂಜುನಾಥ, ಸೀನಿಯರ್ ಮ್ಯಾನೇಜರ್ (ಆರ್ ಆಂಡ್ ಆರ್) ಎನ್​ಟಿಪಿಸಿ ಕೂಡಗಿ