ಅಪಘಾತ ನಿಯಂತ್ರಣಕ್ಕೆ ಕ್ರಮ

ಗೊಳಸಂಗಿ: ಸ್ಥಾವರ ವ್ಯಾಪ್ತಿಯ ರಸ್ತೆಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಬೈಕ್ ಅಪಘಾತಗಳ ನಿಯಂತ್ರಣಕ್ಕೆ ಮುಂದಾಗಿರುವ ಎನ್‌ಟಿಪಿಸಿ ರಸ್ತೆ ಸುರಕ್ಷತೆಯ ಹಳೇ ನಿಯಮಗಳಿಗೆ ಹೊಸ ಭಾಷ್ಯ ಬರೆಯಲು ಮುಂದಾಗಿದ್ದು ಗುರುವಾರದಿಂದ ಕಾರ್ಮಿಕರ ಬೈಕ್‌ಗಳು ಎನ್‌ಟಿಪಿಸಿ ಗೇಟ್ ಹೊರಗಡೆ ನಿಲ್ಲುವಂತಾಗಿದೆ.

ಸಾವಿರಾರು ಕಾರ್ಮಿಕರಲ್ಲಿ ಬಹುತೇಕರು ಕೂಡಗಿ ಸುತ್ತಮುತ್ತಲಿನ ಪ್ರದೇಶದಿಂದ ನಿತ್ಯವೂ ಬೈಕ್ ಮೂಲಕ ಎನ್‌ಟಿಪಿಸಿಗೆ ಬಂದು ಕೆಲಸ ಮಾಡಿ ಮರಳಿ ಹೋಗುತ್ತಾರೆ. ಎನ್‌ಟಿಪಿಸಿ ಮುಖ್ಯದ್ವಾರದ ಸಿಆರ್‌ಪಿಎ್ ಸೆಕ್ಯೂರಿಟಿ ಸಿಬ್ಬಂದಿ ಬೈಕ್ ಸವಾರಿ ಮಾಡುವ ಕಾರ್ಮಿಕರಿಗೆ ಹಲವಾರು ಶರತ್ತುಗಳನ್ನು ವಿಧಿಸಿ ಬೈಕ್‌ಗಳ ಶರವೇಗಕ್ಕೆ ಬ್ರೇಕ್ ಹಾಕಿದ್ದಾರೆ.

ಈ ಹಿಂದೆ ಸ್ಥಾವರದೊಳಗೆ ಸಂಚರಿಸುವ ಕಾರ್ಮಿಕರ ಬೈಕ್‌ಗಳಿಗೆ ನಿಯಮಗಳಿದ್ದರೂ ಪಾಲನೆ ಮಾಡುವುದು ಕಡ್ಡಾಯಗೊಳಿಸಿರಲಿಲ್ಲ. ಆದರೆ ಇತ್ತೀಚೆಗೆ ಹೊಸ ಸಿಜಿಎಂ ಬಂದ ಬಳಿಕ ನಿಯಮಗಳು ಚಾಚೂ ತಪ್ಪದೆ ಪಾಲನೆಯಾಗುತ್ತಿವೆ ಎನ್ನುತ್ತಾರೆ ಕಾರ್ಮಿಕರು. ಇನ್ನು ಮುಂದೆ ಸ್ಥಾವರದ ಗೇಟ್ ಒಳಗೆ ಹೋಗುವ ಕಾರ್ಮಿಕರ ಬೈಕ್‌ಗಳಿಗೆ ಕಡ್ಡಾಯವಾಗಿ ಆರ್‌ಸಿ ಬುಕ್, ಬೈಕ್ ಇನ್ಶೂರೆನ್ಸ್, ಬೈಕ್ ಚಾಲನಾ ಪರವಾನಗಿ ಇರಬೇಕು. ಇದರ ಜತೆಗೆ ಬೈಕ್ ಸವಾರಿ ಮಾಡುವ ಕಾರ್ಮಿಕರು ಒಳಗೆ ಹೋಗುವಾಗ ಹೆಲ್ಮೆಟ್, ಸುರಕ್ಷತಾ ಬೂಟ್‌ಗಳನ್ನೂ ಕಡ್ಡಾಯವಾಗಿ ಧರಿಸಿರಲೇಬೇಕು. ನಿಯಮ ಉಲ್ಲಂಸಿದ ಕಾರ್ಮಿಕರು ಗೇಟ್ ಹೊರಗಡೆಯೇ ಬೈಕ್ ನಿಲ್ಲಿಸಿ ಒಳಗಡೆ ಹೋಗಬೇಕು.

ಕಾರ್ಮಿಕರ ಅಳಲೇನು ?:
ಈ ಮೊದಲು ಕಾರ್ಮಿಕರ ಗುರುತಿನ ಚೀಟಿಯೊಂದನ್ನು ಬಿಟ್ಟು ಯಾವ ನಿಯಮವೂ ಇದ್ದಿಲ್ಲ. ಪ್ರಸ್ತುತ ಕಡ್ಡಾಯಗೊಳಿಸಿದ ನಿಯಮಗಳು ಕಾರ್ಮಿಕರಿಗೆ ಬಿಸಿ ತುಪ್ಪವಾಗಿ ಕಾಡತೊಡಗಿವೆ. ಅದೆಷ್ಟೋ ಕಾರ್ಮಿಕರ ಬೈಕ್‌ಗಳಿಗೆ ಇನ್ಶೂರೆನ್ಸ್, ಆರ್‌ಸಿ ಪುಸ್ತಕ, ಡ್ರೈವಿಂಗ್ ಲೈಸೆನ್ಸ್ ಇಲ್ಲ. ಹೆಲ್ಮೆಟ್ ಬಳಕೆಯಂತೂ ಇಲ್ಲವೇ ಇಲ್ಲ. ಹೀಗಿದ್ದರೂ ನಿರಾಯಾಸವಾಗಿ ಕೆಲಸ ಮಾಡಿ ಬರುತ್ತಿದ್ದ ಕಾರ್ಮಿಕರಿಗೆ ಏಕಾಏಕಿ ಮಾನದಂಡಗಳನ್ನು ಪಾಲಿಸಲೂ ಆಗದೆ ಬಿಡಲೂ ಆಗದೆ ಪರದಾಡುವಂತಾಗಿದೆ. ಹೀಗಾದರೆ ಕೆಲಸ ಬಿಟ್ಟು ಕಾಗದ-ಪತ್ರಗಳನ್ನು ಸಿದ್ದಪಡಿಸಲು ಅಲೆದಾಡಬೇಕಾಗುತ್ತದೆ. ಅದಲ್ಲದೆ ಹೆಚ್ಚಿನ ಖರ್ಚು ಉಂಟಾಗುತ್ತದೆ ಎಂಬುದು ಕಾರ್ಮಿಕರ ಅಳಲಾಗಿದೆ.

ನಿಲುಗಡೆ ಸಮಸ್ಯೆ:
ಎನ್‌ಟಿಪಿಸಿ ಸಿಆರ್‌ಪಿಎ್ ಸಿಬ್ಬಂದಿ ವಿಧಿಸಿದ ಶರತ್ತುಗಳನ್ನು ಉಲ್ಲಂಸಿದ ಬೈಕ್‌ಗಳನ್ನು ಸ್ಥಾವರದ ಒಳಕ್ಕೆ ಬಿಡದೆ ಕಾರ್ಮಿಕರನ್ನು ಮಾತ್ರ ಕಾಲ್ನಡಿಗೆಯಲ್ಲಿ ಕೆಲಸಕ್ಕೆ ಕಳಿಸಲಾಗುತ್ತಿದೆ. ಗೇಟ್‌ನಿಂದ 3-4 ಕಿ.ಮೀ. ದೂರವಿರುವ ತಮ್ಮ ಕಾರ್ಯಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಕೆಲಸ ಮಾಡಿ ಪುನಃ ಮುಖ್ಯ ಗೇಟ್ ತಲುಪಲು ತೀವ್ರ ತೊಂದರೆಯಾಗುತ್ತಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಗೇಟ್ ಹೊರಗಡೆ ಬೈಕ್ ನಿಲುಗಡೆಗೆ ಯಾವುದೇ ಅಧಿಕೃತ ಪಾರ್ಕಿಂಗ್ ಇಲ್ಲ. ಹೊರಗಿನ ಅಂಗಡಿಗಳ ಮುಂಭಾಗ ಬೈಕ್ ನಿಲ್ಲಿಸಿ ಒಳಗಡೆ ಹೋದರೆ ಮರಳಿ ಬರುವಷ್ಟರಲ್ಲಿ ಪೆಟ್ರೋಲ್ ಖಾಲಿಯಾಗಿರುತ್ತದೆ. ಇಲ್ಲವೇ ಬೈಕ್‌ನ ಯಾವುದಾದರೂ ಸಣ್ಣಪುಟ್ಟ ಸಾಮಗ್ರಿ ಕಳುವಾಗಿರುತ್ತದೆ ಎಂಬುದು ಕಾರ್ಮಿಕರ ಕೊರಗಾಗಿದೆ. ಜತೆಗೆ ವ್ಯಾಪಾರಸ್ಥರು ಲಕ್ಷಾಂತರ ರೂ. ಬಂಡವಾಳ ಹೂಡಿ ಅಂಗಡಿ ತೆರೆದಿದ್ದು ಮುಂಭಾಗದಲ್ಲಿ ನೂರಾರು ವಾಹನಗಳು ಸರದಿ ಸಾಲಿನಲ್ಲಿ ನಿಲ್ಲುವುದನ್ನು ಸಹಿಸುವುದಿಲ್ಲ. ಒಟ್ಟಾರೆ ಏಕಾಏಕಿ ಎದುರಾದ ಎನ್‌ಪಿಸಿ ನಿಯಮಗಳು ಕಾರ್ಮಿಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದಂತೂ ಸುಳ್ಳಲ್ಲ.

ಎನ್‌ಟಿಪಿಸಿ ಬೃಹತ್ ವಿದ್ಯುತ್ ಉತ್ಪಾದನೆ ಕಾರ್ಖಾನೆಯಾಗಿದ್ದು ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಾರ್ಮಿಕರು ಕಡ್ಡಾಯವಾಗಿ ಚಾಲ್ತಿಯಲ್ಲಿರುವ ಆರ್‌ಸಿ ಬುಕ್, ಬೈಕ್ ಇನ್ಶ್ಶೂರೆನ್ಸ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಹೆಲ್ಮೆಟ್‌ನ್ನು ಕಡ್ಡಾಯವಾಗಿ ಹೊಂದುವ ಜತೆಗೆ ಚಾಲನಾ ನಿಯಮಗಳನ್ನು ಪಾಲಿಸುವುದು ಅವಶ್ಯ. ಈ ಕುರಿತು ಹಲವಾರು ಬಾರಿ ಹಾಗೂ ಕಳೆದ ಮೇ ನಲ್ಲಿ ಒಂದು ತಿಂಗಳ ಮುಂಚಿತವಾಗಿಯೇ ಎಲ್ಲ ಕಾರ್ಮಿಕರಿಗೆ ಅಧಿಕೃತವಾಗಿ ತಿಳಿಸಲಾಗಿದೆ.
– ವಿ. ಜಯನಾರಾಯಣನ್ ಎನ್‌ಟಿಪಿಸಿ ಎಜಿಎಂ ( ಎಚ್‌ಆರ್)

Leave a Reply

Your email address will not be published. Required fields are marked *