ತೆಲಗಿಯಲ್ಲಿ ರೈತರಿಂದ ರೈಲು ತಡೆ

ಗೊಳಸಂಗಿ: ವಿಜಯಪುರ ಮುಖ್ಯ ಕಾಲುವೆ ಮೂಲಕ ಈ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕೆಂದು ಆಗ್ರಹಿಸಿ ಬಸವನ ಬಾಗೇವಾಡಿ ತಾಲೂಕಿನ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಸಮೀಪದ ತೆಲಗಿ (ಬಸವನಬಾಗೇವಾಡಿ ರೋಡ) ರೈಲು ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ರೈಲು ತಡೆದು ಪ್ರತಿಭಟಿಸಿದರು.

ಹುಬ್ಬಳ್ಳಿ-ಮೈಸೂರು-ಸೊಲ್ಹಾಪುರ ಮಾರ್ಗವಾಗಿ ಸಂಚರಿಸುವ ಹಂಪಿ ಎಕ್ಸ್‌ಪ್ರೆಸ್ ರೈಲು ತೆಲಗಿ ಸ್ಟೇಶನ್‌ಗೆ ಆಗಮಿಸುತ್ತಿದ್ದಂತೆ ಹತ್ತು ಶ್ರೀಗಳ ಸಮ್ಮುಖದಲ್ಲಿ ರೈತರು ಮೂರು ನಿಮಿಷಗಳ ಕಾಲ ರೈಲು ತಡೆದರಲ್ಲದೆ, ರಾಜ್ಯ-ಕೇಂದ್ರ ಸರ್ಕಾರ, ರೈಲ್ವೆ ಇಲಾಖೆ- ಕೃಷ್ಣಾ ಭಾಗ್ಯ ಜಲ ನಿಗಮ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.

ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಳವಾಡ ಯಾತ ನೀರಾವರಿ ಯೋಜನೆಯ ಹಂತ-3ರಲ್ಲಿ ಬರುವ ವಿಜಯಪುರ ಮುಖ್ಯ ಕಾಲುವೆ ಮೂಲಕ ಈ ಭಾಗದ ಸುಮಾರು 49ಕ್ಕೂ ಅಧಿಕ ಕೆರೆಗಳಿಗೆ ಈಗಾಗಲೇ ನೀರು ಹರಿಸಬೇಕಿತ್ತು. ಬಳೂತಿ ಜಾಕ್‌ವೆಲ್ ಶಾರ್ಟ್ ಸರ್ಕ್ಯೂಟ್, ಕೂಡಗಿ ಬಳಿಯ ರೈಲು ಸೇತುವೆಗೆ ಸುರಂಗ ಮಾರ್ಗದ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದುದರಿಂದ ಜನ- ಜಾನುವಾರುಗಳು ನೀರಿಗಾಗಿ ಪರದಾಡುವಂತಾಗಿದೆ. ಶೀಘ್ರ ಕೆರೆಗಳಿಗೆ ನೀರು ಹರಿಸದಿದ್ದರೆ ಉಗ್ರ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿ, ಕೆಬಿಜೆಎನ್‌ಎಲ್ ಮತ್ತು ರೈಲ್ವೆ ಅಧಿಕಾರಿಗಳಿಗೆ ಮನವಿ ಅರ್ಪಿಸಿದರು. ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೆಬಿಜೆಎನ್‌ಎಲ್ ಎಇಇ ಚಂದ್ರಶೇಖರ ವಾರದ ರೈತರ ಮನವಿ ಸ್ವೀಕರಿಸಿ ಮಾತನಾಡಿ, ರೈಲು ಸೇತುವೆ ನಿರ್ಮಾಣಕ್ಕಾಗಿ ರೈಲ್ವೆ ಇಲಾಖೆಗೆ ಕೆಬಿಜೆಎನ್‌ಎಲ್ 2016ರಲ್ಲೇ 24 ಕೋಟಿ ರೂ. ಅನುದಾನ ಒದಗಿಸಲಾಗಿದ್ದರೂ ಕಾಮಗಾರಿ ವಿಳಂಬವಾಗಿದೆ. ರೈತರು, ಜನ- ಜಾನುವಾರುಗಳಿಗಾಗಿ ಕುಡಿಯಲು 10 ದಿನದೊಳಗಾಗಿ ತಾತ್ಕಾಲಿಕವಾಗಿ ಪೈಪ್‌ಲೈನ್ ಮೂಲಕ ಕೆರೆಗೆ ನೀರು ಹರಿಸಲಾಗುವುದೆಂದರು. ಕೆಬಿಜೆಎನ್‌ಎಲ್ ಅಧೀಕ್ಷಕ ಅಂಭಿಯಂತರ ವಿನಾಯಕ ಹರನಟ್ಟಿ, ಹುಬ್ಬಳ್ಳಿ ರೈಲ್ವೆ ಡಿವಿಜಿನಲ್ ಸೀನಿಯರ್ ಅಸಿಸ್ಟಂಟ್ ವಿನಾಯ ಪಡೋಲ್ಕರ್ ಜತೆಗಿದ್ದರು.

ವಿವಿಧ ಶ್ರೀಗಳ ಬೆಂಬಲ
ಡೋಣೂರಿನ ಸಿದ್ಧಲಿಂಗ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಸಂಗನಬಸವ ಶಿವಾಚಾರ್ಯರು, ಯಂಕಂಚಿಯ ರುದ್ರಮುನಿ ಶಿವಾಚಾರ್ಯರು, ಕುಮಸಗಿಯ ಶಿವಾನಂದ ಶಿವಾಚಾರ್ಯರು, ಬಸವನಬಾಗೇವಾಡಿಯ ಸಿದ್ಧಲಿಂಗ ಶಿವಾಚಾರ್ಯರು, ಕರಬಂಟನಾಳದ ಶಿವಕುಮಾರ ಸ್ವಾಮಿ, ಹುಣಶಾಳ- ಪಿಬಿ ಚನ್ನಬಸವ ಸ್ವಾಮಿಗಳು ಸೇರಿ ಒಟ್ಟು ಹತ್ತು ಶ್ರೀಮಠಗಳ ಶ್ರೀಗಳು ರೈಲು ತಡೆಗೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪೋಲಿಸರೇ ಹೆಚ್ಚು !
ರೈಲು ತಡೆ ಸುದ್ದಿ ತಿಳಿಯುತ್ತಿದ್ದಂತೆ ಪ್ರತಿಭಟನಾಕಾರರಿಗಿಂತ ಹೆಚ್ಚು ಖಾಕಿ ಪಡೆ ತೆಲಗಿ ರೈಲು ನಿಲ್ದಾಣಕ್ಕೆ ಆಗಮಿಸಿ ಬೀಡು ಬಿಟ್ಟಿತು. ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎ್) ನಿಂದ ಓರ್ವ ಸಿಪಿಐ, ಓರ್ವ ಎಎಸ್‌ಐ, 10 ಜನ ಸಿಬ್ಬಂದಿ, ಗವರ್ನಮೆಂಟ್ ರೈಲ್ವೆ ಪೊಲೀಸ್ (ಜಿಆರ್‌ಪಿ) ನಿಂದ ಓರ್ವ ಪಿಎಸ್‌ಐ, 24 ಜನ ಸಿಬ್ಬಂದಿ, ರಾಜ್ಯ ಪೊಲೀಸ್ ಇಲಾಖೆಯಿಂದ ಓರ್ವ ಡಿಎಸ್‌ಪಿ, ಓರ್ವ ಸಿಪಿಐ, ಇಬ್ಬರು ಪಿಎಸ್‌ಐ, 4 ಎಎಸ್‌ಐ, 26 ಜನ ಎಚ್‌ಸಿ, ಪಿಸಿಗಳನ್ನು ಸೂಕ್ತ ಭದ್ರತೆಗಾಗಿ ನಿಯೋಜಿಸಲಾಗಿತ್ತು.