ಮುತ್ತಗಿಯಲ್ಲಿ ಗೌರಿಶಂಕರ ಜಾತ್ರೆ ಸಂಭ್ರಮ

ಗೊಳಸಂಗಿ: ಸಮೀಪದ ಮುತ್ತಗಿ ಗ್ರಾಮದ ಗೌರಿಶಂಕರ ಜಾತ್ರಾ ಮಹೋತ್ಸವ ಸಂಭ್ರಮ ಕಣ್ತುಂಬಿಕೊಳ್ಳಲು ಭಕ್ತಸಮೂಹ ಸಾಗರೋಪಾದಿಯಲ್ಲಿ ಶನಿವಾರ ಹರಿದು ಬಂದಿತು.

ಬೆಳಗ್ಗೆ ಗೌರಿಶಂಕರ ಭವ್ಯ ಮೂರ್ತಿಗೆ ಎಲೆಪೂಜೆ ಮತ್ತು ರುದ್ರಾಭಿಷೇಕ ನೆರವೇರಿದವು. ಮಧ್ಯಾಹ್ನ ಬಸವಶ್ರೀ ಗೆಳೆಯರ ಬಳಗದಿಂದ ತೆಪ್ಪೋತ್ಸವ, ಮಹಾದೇವ, ದ್ಯಾಮವ್ವನ ಸೋಗು, ಚೌಡಕಿಮೇಳ, ಓಕುಳಿಯಾಟ, ಕಾಲುಕುದುರೆಯಾಟ ಸಡಗರದಿಂದ ನಡೆದವು.

ಬಸವಶ್ರೀ ಗೆಳೆಯರ ಬಳಗದ ಆನಂದ ಹಂದಿಗನೂರ (ದ್ಯಾಮವ್ವ), ಲಕ್ಷ್ಮಣ ಚವಾಣ್ (ಮಹಾದೇವ), ಸಚಿನ್ ಮಾಳಜಿ (ಗೌರವ್ವ), ವಿಶ್ವನಾಥ ಬಿರಾದಾರ (ಗಂಗವ್ವ), ಶಿವಕುಮಾರ ಪವಾರ (ರಾಮ), ಕುಮಾರ ಮಾಳಜಿ (ಸೀತಾ), ಹನುಮಂತ ಅಂಬಿಗೇರ (ಲಕ್ಷ್ಮ್ಮ), ಸಚಿನ್ ಮಾಳಜಿ (ಹನುಮಂತ) ವೇಷ ತೊಟ್ಟು ಮೆರವಣಿಗೆಯುದ್ದಕ್ಕೂ ಜಾತ್ರೆಗೆ ಮೆರಗು ತಂದರು.

ಸಂಜೆ 4 ಗಂಟೆಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪುರವಂತರ ವೀರಗಾಸೆ, ಗುಗ್ಗಳ ಆರಂಭಗೊಂಡು ಗೌರಿಶಂಕರ ದೇವಸ್ಥಾನ ತಲುಪಿತು. ನಂತರ ನಿಂಗಯ್ಯಸ್ವಾಮಿ ಕಂಬಿಮಠ ನೇತೃತ್ವದಲ್ಲಿ ಗಂಗೆ-ಗೌರಿ, ಶಿವ ಮತ್ತು ನಂದಿ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಹೊರ ವಲಯದ ಗೌರಿ ಪುಷ್ಕರಣಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಸರ್ಜಿಸಲಾಯಿತು.