ಬಾಗೇವಾಡಿ ಅಂದ್ರ ಎದಿ ಡಬಡಬ ಅಂತೈತಿ

ಗೊಳಸಂಗಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕೆಲವರು ಶತಪ್ರಯತ್ನ ಮಾಡಿದ್ದರು. ಕೂಡಗಿ ಜನ ಕೈಬಿಟ್ಟರೂ, ಮಸೂತಿ ಜನ ನನ್ನನ್ನು ಗೆಲ್ಲಿಸಲು ಪಣ ತೊಟ್ಟಿದ್ದರು. ‘ಆದ್ರ ಬಸವನಬಾಗೇವಾಡಿ ಅಂದ್ರ ನನ್ನ ಎದಿ ಡಬಡಬ ಅಂತೈತಿ..’

ಸಮೀಪದ ಮಸೂತಿ ಗ್ರಾಮದ ಜಗದೀಶ್ವರ ಹಿರೇಮಠದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡ ಕಿತ್ತೂರು ಚನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ವಿಧಾನಸಭೆ ಚುನಾವಣೆ ದಿನಗಳನ್ನು ಸಚಿವ ಶಿವಾನಂದ ಪಾಟೀಲರೇ ಮೆಲಕು ಹಾಕಿದಾಗ ಇಡೀ ಸಭೆಯಲ್ಲಿ ನಗುವಿನ ಅಲೆ ಎದ್ದಿತು.

ಇನ್ನು ಮುಂದೆ ಬಡ ಜನತೆಗೆ ಎದುರಾಗುವ ಹಾರ್ಟ್, ಲಿವರ್, ಕಿಡ್ನಿಯಂಥ ಗಂಭೀರ ಕಾಯಿಲೆ ನಿವಾರಣೆಗಾಗಿ ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ. ವರೆಗೆ ಸರ್ಕಾರ ಖರ್ಚು ಮಾಡಲಿದೆ. ವಿಜಯಪುರದ ಜಿಲ್ಲಾಸ್ಪತ್ರೆಯನ್ನು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯನ್ನಾಗಿಸಲು 100 ಕೋಟಿ ರೂ. ತರಲಾಗಿದೆ ಎಂದರು.

ಮುಳವಾಡ ಏತ ನೀರಾವರಿ ಯೋಜನೆಯಡಿ ಈ ಭಾಗದ 86 ಸಾವಿರ ಎಕರೆ ಜಮೀನು ನೀರಾವರಿಯಾಗಲಿದೆ. ದಿ.ರಾಮಕೃಷ್ಣ ಹೆಗಡೆಯವರು ಹಾಕಿದ್ದ ಅಡಿಗಲ್ಲು ಇಂದು ಸಾರ್ಥಕಗೊಳ್ಳುತ್ತಿದೆ ಎಂದರು.

ಮಸೂತಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಮತ್ತು ಚನ್ನಮ್ಮ ಸಮುದಾಯ ಭವನ ನಿರ್ವಣಕ್ಕೆ ಸಹಕರಿಸುವುದಾಗಿ ಸಚಿವರು ಭರವಸೆ ನೀಡಿದರು.

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀ, ಮಸೂತಿಯ ಪ್ರಭುಕುಮಾರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಜೆಡಿಎಸ್ ಧುರೀಣ ಸಂಗನಗೌಡ ಚಿಕ್ಕೊಂಡ, ನಿವೃತ್ತ ಪ್ರಾಚಾರ್ಯ ಎಸ್.ಜಿ. ಜಂಗಮಶೆಟ್ಟಿ, ಸಂತೋಷ ಚನಗೊಂಡ, ಜಗದೀಶ ಸಾಲಳ್ಳಿ, ನವೀನ ಸಾಲಳ್ಳಿ ಮಾತನಾಡಿದರು.

ಭೂದಾನಿ ಗುರುಶಾಂತಪ್ಪ ಸಾಲಳ್ಳಿ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಸಿ.ಪಿ. ಪಾಟೀಲ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ಗ್ರಾಪಂ ಅಧ್ಯಕ್ಷ ರಮೇಶ ಬೀಳಗಿ, ತಾಪಂ ಸದಸ್ಯರಾದ ಜಿ.ಎಂ.ಯರಂತೇಲಿ, ಶಿವಾನಂದ ಅಂಗಡಿ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ತಾನಾಜಿ ನಾಗರಾಳ, ಕೆ.ವಿ.ಕುಲಕರ್ಣಿ ಮತ್ತಿತರರು ಇದ್ದರು.

ವೃತ್ತಕ್ಕೆ ಭೂಮಿ ಪೂಜೆ

ಕಾರ್ಯಕ್ರಮಕ್ಕೂ ಮುನ್ನ ಸಚಿವ ಶಿವಾನಂದ ಪಾಟೀಲರು ಕಿತ್ತೂರು ಚನ್ನಮ್ಮ ವೃತ್ತಕ್ಕೆ ಭೂಮಿ ಪೂಜೆ ನೆರವೇರಿಸಿ, ಸಮುದಾಯ ಭವನ ನಿರ್ವಣಕ್ಕೆ 4 ಗುಂಟೆ ಭೂಮಿ ದಾನ ನೀಡಿದ ಗುರುಶಾಂತಪ್ಪ ಸಾಲಳ್ಳಿ ಅವರನ್ನು ಸನ್ಮಾನಿಸಿದರು.