ಎನ್​ಟಿಪಿಸಿ, ಕೆಐಎಡಿಬಿ ನಡೆ ವಿರೋಧಿಸಿ ರಸ್ತೆ ತಡೆ

<<ಬಾರದ ಭೂ ಪರಿಹಾರ | ಸಾಲಬಾಧೆಗೆ ಗೊಳಸಂಗಿ ರೈತ ಆತ್ಮಹತ್ಯೆ>>

ಗೊಳಸಂಗಿ: ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ನಿರ್ವಣಕ್ಕೆ ಕಳೆದುಕೊಂಡ ಜಮೀನಿಗೆ ಸೂಕ್ತ ಪರಿಹಾರ ದೊರಕದ ಹಿನ್ನೆಲೆ ಮತ್ತು ಸಾಲಬಾಧೆ ತಾಳದೆ ಗ್ರಾಮದ ರೈತ ತಾನಾಜಿ ಖಂಡೂಬಾ ಪವಾರ (46) ಶನಿವಾರ ಮಧ್ಯಾಹ್ನ ಎನ್​ಟಿಪಿಸಿ ಬಳಿಯ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಖಂಡಿಸಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವ್ಯಾಪ್ತಿಯ ರೈತರು, ಗ್ರಾಮಸ್ಥರು ಸೇರಿ ಎನ್​ಟಿಪಿಸಿ ಬಳಿಯ ಕೊಲ್ಹಾರ-ತೆಲಗಿ-ಬಸವನಬಾಗೇವಾಡಿ ರಸ್ತೆ ಸಂಚಾರ ತಡೆದು ಟಯರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಸದಸ್ಯ ಸಂತೋಷ ನಾಯಕ, ತಾಪಂ ಸದಸ್ಯ ಅಮೃತ ಯಾದವ, ಗೊಳಸಂಗಿ ಪಿಕೆಪಿಎಸ್ ಅಧ್ಯಕ್ಷ ಮುರುಗೇಶ ಹೆಬ್ಬಾಳ, ಜೈ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಆಶೀಫ್ ತಾಳಿಕೋಟಿ ಮಾತನಾಡಿ, ಕೂಡಗಿ ಸ್ಥಾವರಕ್ಕಾಗಿ ಭೂಮಿ ಕಳೆದುಕೊಂಡು 8 ವರ್ಷ ಗತಿಸಿದೆ. ಸೂಕ್ತ ಪರಿಹಾರ ನೀಡುವಲ್ಲಿ ಎನ್​ಟಿಪಿಸಿ ಮತ್ತು ಕೆಐಎಡಿಬಿ ಅಧಿಕಾರಿಗಳು ಹಿಂದೇಟು ಹಾಕಿದ್ದರ ಪರಿಣಾಮ ಮೃತ ರೈತ ತಾನಾಜಿ ಪವಾರ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಸೇರಿ ಅಲ್ಲಲ್ಲಿ ಸಾಲ ಮಾಡಿದ್ದ. ಎನ್​ಟಿಪಿಸಿ ಅಧಿಕಾರಿಗಳು ಪೂರ್ಣ ಪ್ರಮಾಣದ ಪರಿಹಾರ ನೀಡದೆ ಭೂಸ್ವಾಧೀನಕ್ಕೆ ಮುಂದಾಗಿ ಇಲ್ಲಸಲ್ಲದ ಬೆದರಿಕೆಯನ್ನೊಡ್ಡಿದ್ದರು. ಸಂಬಂಧಪಟ್ಟವರು ಕೂಡಲೇ ಮೃತನ ಕುಟುಂಬಕ್ಕೆ ಪೂರ್ಣ ಪ್ರಮಾಣದ ಪರಿಹಾರ ನೀಡುವವರೆಗೂ ಅಂತ್ಯಕ್ರಿಯೆ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಜೆಡಿಎಸ್ ಧುರೀಣ ಅಪ್ಪ್ಪುಗೌಡ ಪಾಟೀಲ (ಮನಗೂಳಿ), ಮರಾಠ ಸಮಾಜದ ಅಧ್ಯಕ್ಷ ಗಂಗಾರಾಮ ಪವಾರ, ಬಸವನಬಾಗೇವಾಡಿ ಪುರಸಭೆ ಸದಸ್ಯ ಪ್ರವೀಣ ಪವಾರ, ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ ದಳವಾಯಿ, ಅಶೋಕ ಪವಾರ, ಪುಂಡಲೀಕ ಮೇಲಿನಮನಿ, ಕೇಶವ ಪವಾರ, ರಾಜಶೇಖರ ರೂಡಗಿ, ಶಿವನಗೌಡ ಪಾಟೀಲ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮುಗಿಲು ಮುಟ್ಟಿದ ಆಕ್ರಂದನ

ನನ್ನ ಗಂಡ ಎನ್​ಟಿಪಿಸಿ ರೊಕ್ಕ ಬರ್ಲಾರ್ದಕ್ಕ ಜೀವಾ ಕಳಕೊಂಡಾನ್ರಿ. ಅವನ್ನ ಕಳಕೊಂಡ ಯಾಡ್ ಮಕ್ಕಳ್ನ ಕಟಗೊಂಡ ನಾ ಹೆಂಗ್ ಜೀವ್ನಾ ಮಾಡ್ಲಿ. ನಾ ಹೆಂಗ್ ಬದುಕಲಿ ಎಂದು ಮೃತನ ಪತ್ನಿ ಕಲಾವತಿ ಗೋಳಿಡುತ್ತಿರುವ ದೃಶ್ಯ ಜನರ ಮನಸ್ಸು ಕಲಕುವಂತೆ ಮಾಡಿತು.

ಘಟನೆ ಹಿನ್ನೆಲೆ: 2009-10 ರಲ್ಲಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ನಿರ್ವಣಕ್ಕೆ ಗೊಳಸಂಗಿ ಗ್ರಾಮದ ತಾನಾಜಿ ಖಂಡೂಬಾ ಪವಾರ ಮತ್ತವರ 4 ಜನ ಸಹೋದರರು ಸೇರಿ ಒಟ್ಟು 17 ಎಕರೆ ಜಮೀನು ಕಳೆದುಕೊಂಡಿದ್ದರು. ಒಣಬೇಸಾಯ ಎಂದು ಗುರುತಿಸಿದ ಕೆಐಎಡಿಬಿ 39 ಲಕ್ಷ ರೂ. ಪರಿಹಾರ ಧನದ ಮೊತ್ತ ನೀಡಿತ್ತು. ತಮ್ಮದು ನೀರಾವರಿ ಜಮೀನಿದ್ದು, ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪರಿಹಾರದ ಚೆಕ್ ತೆಗೆದುಕೊಂಡಿರಲಿಲ್ಲ. ಹೀಗಾಗಿ ಕೋರ್ಟ್​ಗೆ ಹಣ ಜಮಾ ಮಾಡಿದ ಎನ್​ಟಿಪಿಸಿ, ಭೂ ಸ್ವಾಧೀನಕ್ಕೆ ಮುಂದಾಗಿತ್ತು. ಒಟ್ಟು 1.79 ಕೋಟಿ ರೂ. ಪರಿಹಾರ ತಮಗೆ ಬರಬೇಕಿದೆ ಎಂಬುದು ಮೃತನ ಸಹೋದರರ ವಾದವಾಗಿದೆ.

ಅಧಿಕಾರಿಗಳ ಭೇಟಿ

ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ತಹಸೀಲ್ದಾರ್ ಎಂ.ಎನ್. ಚೋರಗಸ್ತಿ, ಡಿವೈಎಸ್​ಪಿ ಎಸ್.ಯು. ಮಹೇಶಗೌಡ, ಕೊಲ್ಹಾರ ಪಿಎಸ್​ಐ ಸಿ.ಬಿ. ಬಾಗೇವಾಡಿ ಮತ್ತು ಎನ್​ಟಿಪಿಸಿ ಅಧಿಕಾರಿಗಳು ಭೇಟಿ ನೀಡಿದರು.

ನಾವು ಕಳೆದುಕೊಂಡ 17 ಎಕರೆ ಜಮೀನಿಗೆ 1.79 ಕೋಟಿ ರೂ. ಬರಬೇಕಿತ್ತು. ಆ ಪೈಕಿ ಕೋರ್ಟ್​ನಿಂದ 39 ಲಕ್ಷ ರೂ. ಮಾತ್ರ ಪಡೆದಿದ್ದೇವೆ. ಬಾಕಿ ಹಣ ಕೊಡದಿದ್ದಕ್ಕಾಗಿ ನಮ್ಮಣ್ಣ ಬ್ಯಾಂಕ್, ಇತರ ಕಡೆ ಸಾಲ ಮಾಡಿದ್ದ. ಎನ್​ಟಿಪಿಸಿ ಅಧಿಕಾರಿಗಳು ಭೂಸ್ವಾಧೀನಕ್ಕೆ ಮುಂದಾದಾಗ ಭೀತಿಗೊಳಗಾದ ನಮ್ಮಣ್ಣ ಆತ್ಮಹತ್ಯೆಗೀಡಾಗಿದ್ದಾನೆ. ಆತನ ಸಾವಿಗೆ ಎನ್​ಟಿಪಿಸಿ ಮತ್ತು ಕೆಐಎಡಿಬಿ ಅಧಿಕಾರಿಗಳೆ ಕಾರಣ.

| ಸಂಜೀವ ಪವಾರ, ಮೃತನ ಸಹೋದರ

Leave a Reply

Your email address will not be published. Required fields are marked *